ಬೆಂಗಳೂರು: ಇಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಖಂಡನಾ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಅವರು ತಿಳಿಸಿದರು.
ಕಾರ್ಯಕಾರಿಣಿ ಸಭೆಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ಪೂರ್ಣಗೊಳಿಸಿದ ನರೇಂದ್ರ ಮೋದಿಯವರನ್ನು ಅಭಿನಂದಿಸಲಾಗಿದೆ. 550 ವರ್ಷಗಳ ಭಾರತೀಯರ, ಹಿಂದೂ ಸಮಾಜದ ಬಹುನಿರೀಕ್ಷಿತ ಬೇಡಿಕೆ ಈಡೇರಿಸಿ ಮಂದಿರ ಲೋಕಾರ್ಪಣೆ ಮಾಡಿದ ಪ್ರಧಾನಿ ಅವರನ್ನು ಅಭಿನಂದಿಸಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ದಲಿತ ವಿರೋಧಿ ನೀತಿ ಖಂಡಿಸಿ ನಿರ್ಣಯ ಅಂಗೀಕರಿಸಿದ್ದೇವೆ. ದಲಿತ ಮತ್ತು ಶೋಷಿತ ವರ್ಗಕ್ಕೆ ಮೀಸಲಿಟ್ಟ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಾಗಿ ಉಪಯೋಗ ಮಾಡಿ ದಲಿತ ಮತ್ತು ಶೋಷಿತರಿಗೆ ವಂಚಿಸಿದ್ದನ್ನು ಖಂಡಿಸಲಾಗಿದೆ. ಈ ನಿರ್ಧಾರದ ವಿರುದ್ಧ ಖಂಡನಾ ನಿರ್ಣಯ ಅನುಮೋದಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ರಾಜ್ಯ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆದು ಸಮಾರೋಪಗೊಂಡಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಕಾರ್ಯಕಾರಿಣಿ ಉದ್ಘಾಟಿಸಿದರು. ಶೇ.85ಕ್ಕೂ ಹೆಚ್ಚು ಹಾಜರಾತಿಯೊಂದಿಗೆ ಸಭೆ ನಡೆದಿದೆ. ಸಂಸದರು, ಶಾಸಕರು, ರಾಜ್ಯ ಪದಾಧಿಕಾರಿಗಳು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಬಂದಿದ್ದರು ಎಂದು ತಿಳಿಸಿದರು.