ಕರ್ನಾಟಕ

karnataka

ನಾನು ಹೊರಗಿನವನಲ್ಲ, ಬೆಳಗಾವಿ ನನ್ನ ಕರ್ಮಭೂಮಿ: ಈಟಿವಿ ಭಾರತ ಜೊತೆ ಜಗದೀಶ್​ ಶೆಟ್ಟರ್​ ಮಾತು - BJP CANDIDATE jagadish SHETTAR

By ETV Bharat Karnataka Team

Published : Mar 27, 2024, 3:56 PM IST

Updated : Mar 27, 2024, 5:46 PM IST

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದ್ದಾರೆ.

bjp-candidate-jagdish-shettar-received-a-grand-welcome-in-belagavi
ಬೆಳಗಾವಿಯಲ್ಲಿ ಜಗದೀಶ್​ ಶೆಟ್ಟರ್​ಗೆ ಭರ್ಜರಿ ಸ್ವಾಗತ: ಸಾಥ್ ಕೊಟ್ಟ ಮಾಜಿ ಸಿಎಂ ಬಿಎಸ್​ವೈ

ಬೆಳಗಾವಿಯಲ್ಲಿ ಜಗದೀಶ್​ ಶೆಟ್ಟರ್​ಗೆ ಭರ್ಜರಿ ಸ್ವಾಗತ: ಸಾಥ್ ಕೊಟ್ಟ ಮಾಜಿ ಸಿಎಂ ಬಿಎಸ್​ವೈ

ಬೆಳಗಾವಿ: ಬಿಜೆಪಿ ಟಿಕೆಟ್ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರನ್ನು ಜಿಲ್ಲೆಯ ಬಿಜೆಪಿ ನಾಯಕರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಳಗಾವಿ ಕೋಟೆ ಆವರಣದಲ್ಲಿರುವ ದುರ್ಗಾ ದೇವಿಗೆ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದ ಬಳಿಕ ಜಗದೀಶ್​ ಶೆಟ್ಟರ್ ರೋಡ್ ಶೋಗೆ ಚಾಲನೆ ನೀಡಿದರು‌. ಈ ವೇಳೆ ಜಗದೀಶ್​ ಶೆಟ್ಟರ್​ಗೆ ಸ್ವತಃ ಮಾಜಿ ಸಿಎಂ ಯಡಿಯೂರಪ್ಪ ಸಾಥ್ ಕೊಟ್ಟರು. ಬಳಿಕ ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಜಗದೀಶ ಶೆಟ್ಟರ್ ಗೌರವ ಸಮರ್ಪಿಸಿದರು.

ಈ ವೇಳೆ ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್, ಬೆಳಗಾವಿಗೆ ಬಂದ ಮೊದಲ ದಿನವೇ ಬಹಳ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಮುಂಚೆ ನಾನು ಬೇರೆ ಬೇರೆ ಚುನಾವಣೆಗಳ ಪ್ರಚಾರಕ್ಕೆ ಹೋದಾಗಲೂ ಇಂಥ ಸ್ವಾಗತ ಸಿಕ್ಕಿರಲಿಲ್ಲ. ಹಾಗಾಗಿ ಹತ್ತಾರು ಸಾವಿರ ಯುವಕರು, ನಾಗರಿಕರು, ಕಾರ್ಯಕರ್ತರು ಅಭಿಮಾನಿಗಳು ಸೇರಿಕೊಂಡು ಅಭೂತಪೂರ್ವವಾಗಿ ಸ್ವಾಗತಸಿದ್ದು ಬಿಜೆಪಿ ಗೆಲುವಿಗೆ ಸಾಕ್ಷಿಯಾಗಲಿದೆ. ಅದೇ ರೀತಿ ಲಕ್ಷಾಂತರ ಮತಗಳ ಅಂತರದಿಂದ ನಾನು ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೇರೆ ಜಿಲ್ಲೆಯವರು ಎಂಬ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಲ್ಲೆಯ ಯಾವ ನಾಯಕರು ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾವುದೇ ಸಣ್ಣಪುಟ್ಟ ಅಸಮಾಧಾನಗಳಿದ್ದರೂ ಅದನ್ನು ಸರಿ ಮಾಡುವ ಕೆಲಸ ಮಾಡುತ್ತೇವೆ. ನಿನ್ನೆ ರಾತ್ರಿಯೇ ಬೆಳಗಾವಿಗೆ ಬಂದಿರುವ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಎಲ್ಲ ನಾಯಕರ ಜೊತೆ ಸಭೆ ಮಾಡಿದ್ದಾರೆ. ಈ ವೇಳೆ ಅವರ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಹಾಗಾಗಿ, ಇಂದು ಎಲ್ಲ ನಾಯಕರು, ಕಾರ್ಯಕರ್ತರು ಬಂದಿದ್ದು, ಸಂಘಟಿತವಾಗಿ, ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಗೂ ನನಗೂ 30 ವರ್ಷಗಳ ಸಂಬಂಧವಿದೆ‌. ವಿರೋಧ ಪಕ್ಷದ ನಾಯಕನಾಗಿ, ಪಕ್ಷ ಸಂಘಟಿಸಿದ್ದೇನೆ. ಎರಡು ಬಾರಿ ಜಿಲ್ಲೆಯ ಉಸ್ತುವಾರಿಯಾಗಿ ಈ ಭಾಗದ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಸದನದಲ್ಲಿ ಜಿಲ್ಲೆ ಮತ್ತು ನೆಲ, ಜಲದ ಬಗ್ಗೆ ಧ್ವನಿ ಎತ್ತಿದ್ದೇನೆ. ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೇನೆ. ಆ ಹಿನ್ನೆಲೆಯಲ್ಲಿ ಬೆಳಗಾವಿ ನನ್ನ ಕರ್ಮಭೂಮಿ ಎಂದು ಅವರು, ಲೋಕಲ್ ನಾಯಕರಿಗೆ ಮತ ನೀಡುವಂತೆ ಕೈ ನಾಯಕರ ಹೇಳಿಕೆಗೆ ಬಗ್ಗೆ ಮಾತನಾಡಿ, ಇದು ಲೋಕಸಭೆ ಚುನಾವಣೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದು ಎಂದರು.

ರ್‍ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ್​ ಶೆಟ್ಟರ್ ಅವರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಅದೇ ರೀತಿ ಚಿಕ್ಕೋಡಿಯಲ್ಲೂ ಗೆಲ್ಲುತ್ತೇವೆ. ನಿಮ್ಮ ಬೆಂಬಲ ಮತ್ತು ಸಹಕಾರ ಇರಬೇಕು. ಉರಿ‌ ಬಿಸಿಲಿನಲ್ಲೂ ಮೆರವಣಿಗೆಯಲ್ಲಿ ಏಳೆಂಟು ಸಾವಿರ ಜನ ಸೇರಿದ್ದು, ಶೆಟ್ಟರ್ ಗೆಲುವಿಗೆ ನಾವೆಲ್ಲಾ ಕಟಿಬದ್ಧರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಹಾಗಾಗಿ, ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಈ ವೇಳೆ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಸೇರಿ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾರಕಿಹೊಳಿ ಬ್ರದರ್ಸ್ ಗೈರು:ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್ ಆಗಮಿಸಿದರೂ ಕೂಡ ಬಿಜೆಪಿ ಶಾಸಕರಾದ ರಮೇಶ್​ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ರ್‍ಯಾಲಿಗೆ ಗೈರಾಗಿದ್ದರು. ಅಲ್ಲದೇ ಕೆಲ ಟಿಕೆಟ್ ವಂಚಿತರು ಕೂಡ ಆಗಮಿಸದೇ ಇರುವುದು ಕೂಡ ತೀವ್ರ ಚರ್ಚೆಗೆ ಗ್ರಾಸವಾಯಿತು.

ಇದನ್ನೂ ಓದಿ:ನಾಲ್ಕು ದಿನಗಳಲ್ಲಿ ಬಂಡಾಯ ಶಮನ: ಬಿ.ವೈ.ವಿಜಯೇಂದ್ರ - B Y Vijayendra

Last Updated : Mar 27, 2024, 5:46 PM IST

ABOUT THE AUTHOR

...view details