ಕರ್ನಾಟಕ

karnataka

ಎಲ್.ಕೆ. ಅಡ್ವಾಣಿಗೆ ಭಾರತ ರತ್ನ: ಮಾಜಿ ಸಿಎಂ ಯಡಿಯೂರಪ್ಪ, ಹೆಚ್​ಡಿಕೆ ಅಭಿನಂದನೆ

By ETV Bharat Karnataka Team

Published : Feb 3, 2024, 1:06 PM IST

Updated : Feb 3, 2024, 1:52 PM IST

ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

Bharat Ratna  LK Advani  Former CM BS Yeddyurappa  ಎಲ್ ಕೆ ಅಡ್ವಾಣಿಗೆ ಭಾರತ ರತ್ನ  ಬಿಎಸ್​ ಯಡಿಯೂರಪ್ಪ ಅಭಿನಂದನೆ
ಎಲ್.ಕೆ. ಅಡ್ವಾಣಿಗೆ ಭಾರತ ರತ್ನ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅಭಿನಂದನೆ

ಬೆಂಗಳೂರು: ''ಹಿರಿಯ ನೇತಾರ, ಧೀಮಂತ ನಾಯಕ ಆದರಣೀಯ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಅಭಿನಂದನೀಯ ಸಂಗತಿ'' ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ''ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅವರ ಪ್ರಯತ್ನ ಅಸಾಧಾರಣವಾದದ್ದು, ಹಲವಾರು ದಶಕಗಳ ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವ, ಸಂಸದರಾಗಿ, ಕೇಂದ್ರ ಸಚಿವರಾಗಿ, ಉಪಪ್ರಧಾನಿಗಳಾಗಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು'' ಎಂದಿದ್ದಾರೆ.

''ವೈಯಕ್ತಿಕವಾಗಿ ಕೂಡ, ಅವರೊಂದಿಗಿನ ಒಡನಾಟ, ಸಂಘಟನಾ ಕಾರ್ಯಗಳಲ್ಲಿ ಅವರ ಮಾರ್ಗದರ್ಶನಗಳನ್ನು ನಾನು ಎಂದಿಗೂ ಮರೆಯಲಾರೆ. ಆ ಮೇರು ನಾಯಕನಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಸಲ್ಲಿಸಲಾಗುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ, ಪಕ್ಷದ ಕಾರ್ಯಕರ್ತರ ಹಾಗೂ ಅವರ ಅಭಿಮಾನಿಗಳ ಪರವಾಗಿ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನೂ ಸುದೀರ್ಘ ಕಾಲ ಆ ದೇವರು ಅವರಿಗೆ ಉತ್ತಮ ಆರೋಗ್ಯದೊಂದಿಗೆ ನಮಗೆ ಪ್ರೇರಣೆ ನೀಡುವ ಶಕ್ತಿಯನ್ನು ದಯಪಾಲಿಸಲಿ'' ಎಂದು ಕೋರಿದ್ದಾರೆ.

ಕುಮಾರಸ್ವಾಮಿ ಅಭಿನಂದನೆ:ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ 'ಭಾರತರತ್ನ' ಗೌರವಕ್ಕೆ ಪಾತ್ರರಾಗಿರುವ ಹಿರಿಯ ರಾಜಕಾರಣಿ, ಬಿಜೆಪಿ ಭೀಷ್ಮ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅತ್ಯುನ್ನತ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಗುರುತಿಸಿ ಪುರಸ್ಕಾರ ಘೋಷಿಸಿರುವ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಅಭಿವಂದನೆಗಳು ಎಂದು ಹೇಳಿದ್ದಾರೆ.
ಭಾರತೀಯ ರಾಜಕಾರಣದಲ್ಲಿ ನಿಷ್ಠೆ, ಬದ್ಧತೆ, ಸ್ನೇಹಶೀಲತೆ ಹಾಗೂ ಕಠಿಣ ಪರಿಶ್ರಮಕ್ಕೆ ಅನ್ವರ್ಥವಾದ ಆಡ್ವಾಣಿ ಅವರು ಎಲ್ಲರಿಗೂ ಪ್ರೇರಣೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಬಿಜೆಪಿ ಪಕ್ಷದಿಂದಲೂ ಅಭಿನಂದನೆ: ಕೇಂದ್ರ ಸರ್ಕಾರವು ಬಿಜೆಪಿಯ ಹಿರಿಯ ನಾಯಕರು, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಲಾಲ್‌ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಸಾರ್ವಜನಿಕ ಜೀವನದಲ್ಲಿ ಎಲ್.‌ ಕೆ. ಅಡ್ವಾಣಿ ಅವರ ದಶಕಗಳ ಸುದೀರ್ಘ ಸೇವೆ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದೆಡೆಗಿನ ಅವರ ಅವಿರತ ಪ್ರಯತ್ನಗಳು ಅಭಿನಂದನಾರ್ಹ'' ಎಂದು ಬಿಜೆಪಿ ಪಕ್ಷ ಹೇಳಿದೆ.

ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿದ ಕೇಂದ್ರ ಬಿಜೆಪಿ ಸರಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸ್ವಾಗತಿಸಿದ್ದಾರೆ. ಇದೊಂದು ಉತ್ತಮ ನಿರ್ಧಾರ. ಅರ್ಹತೆಯನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ'' ಎಂದು ಮೆಚ್ಚುಗೆ ಸೂಚಿಸಿದ್ದಾರೆ.

''ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನವನ್ನು ಪ್ರಕಟಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದು, ಇದಕ್ಕಾಗಿ ಮೋದಿಜೀ ಮತ್ತು ಅವರ ಸಂಪುಟದ ಸದಸ್ಯರಿಗೆ ಧನ್ಯವಾದಗಳು ಮತ್ತು ಅಡ್ವಾಣಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಅಡ್ವಾಣಿ ಅವರು ಭಾರತದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಕೇಂದ್ರ ಗೃಹ ಸಚಿವರು ಮತ್ತು ಮಾಹಿತಿ & ತಂತ್ರಜ್ಞಾನ ಸಚಿವರಾಗಿ ಅವರು ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಂಸದೀಯ ನಡೆಯೂ ಆದರ್ಶಪ್ರಾಯವಾಗಿವೆ ಎಂದು ವಿಜಯೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ:ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ: ಪ್ರಧಾನಿ ಮೋದಿ ಅಭಿನಂದನೆ

Last Updated : Feb 3, 2024, 1:52 PM IST

ABOUT THE AUTHOR

...view details