ಕರ್ನಾಟಕ

karnataka

ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಕಳ್ಳರ ಕೈಚಳಕ; ಅಸ್ಸೋಂ ಮೂಲದ ಆರೋಪಿ ಬಂಧನ

By ETV Bharat Karnataka Team

Published : Feb 23, 2024, 12:28 PM IST

ಮುಖ್ಯಮಂತ್ರಿಗಳ ನಿವಾಸದ ಕೂಗಳತೆ ದೂರದಲ್ಲೇ ಕಳ್ಳರು ಕೆಜಿಗಟ್ಟಲೇ ಚಿನ್ನಾಭರಣ ದೋಚಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸೋಂ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Bengaluru  CM residence  home burglary  ಕಳ್ಳರ ಕೈಚಳಕ  ಆರೋಪಿ ಬಂಧನ
ಅಸ್ಸೋಂ ಮೂಲದ ಆರೋಪಿ ಬಂಧನ

ಬೆಂಗಳೂರು :ಮುಖ್ಯಮಂತ್ರಿಗಳ ನಿವಾಸದಿಂದ ಕೂಗಳತೆ ದೂರದಲ್ಲೇ ಇರುವ ಮನೆಯೊಂದರಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ದೋಚಿದ್ದು, ಆರೋಪಿಯನ್ನ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಸ್ಸೋಂ ಮೂಲದ ಪ್ರದೀಪ್ ಮಂಡಲ್ ಬಂಧಿತ ಆರೋಪಿಯಾಗಿದ್ದು, ಆತನನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

ಅಸ್ಸೋಂನಿಂದ ಆಗಾಗ ರೈಲು ಮಾರ್ಗದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿ ಮನೆಗಳ್ಳತನ ಮಾಡುತ್ತಿದ್ದ. ಮೆಜೆಸ್ಟಿಕ್ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಆರೋಪಿ, ಹಗಲಿನಲ್ಲಿ ಅಕ್ಕಪಕ್ಕದ ಏರಿಯಾದ ಮನೆಗಳ ಬಳಿ ಸುತ್ತಾಡುತ್ತಿದ್ದ. ಬಳಿಕ ರಾತ್ರಿ ವೇಳೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಇದೇ ರೀತಿ ಇತ್ತೀಚಿಗೆ ನಗರಕ್ಕೆ ಬಂದಿದ್ದ ಆರೋಪಿ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಮನೆ ಸಮೀಪದಲ್ಲೇ ಇರುವ ಮಾರ್ವಾಡಿಯೊಬ್ಬರ ಮನೆಗೆ ಕಿಟಕಿ ಮೂಲಕ ನುಗ್ಗಿ 2.1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ.

ಇನ್ನು ಕದ್ದ ಚಿನ್ನಾಭರಣ ಮಾರಿದ ಹಣದಲ್ಲೇ ಆರೋಪಿ ಪ್ರದೀಪ್​ ಅಸ್ಸೋಂನಲ್ಲಿ ಕಾರು ಸಹ ಖರೀದಿಸಿದ್ದ. ಕಳ್ಳತನದ ಪ್ರಕರಣ ದಾಖಲಿಸಿಕೊಂಡಿದ್ದ ಶೇಷಾದ್ರಿಪುರಂ ಠಾಣ ಪೊಲೀಸರು ಬರೋಬ್ಬರಿ 250 ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿ ಬೆನ್ನತ್ತಿದಾಗ ಆರೋಪಿ ಪತ್ತೆಯಾಗಿದ್ದನು. ಲಾಡ್ಜ್​ನ ಲೆಡ್ಜರ್ ಬುಕ್​ನಲ್ಲಿ ಸಹ ತನ್ನ ವಿವರ ಎಂಟ್ರಿ ಮಾಡದೇ ಕಳ್ಳಾಟವಾಡಿದ್ದ ಆರೋಪಿ, ಶೇಷಾದ್ರಿಪುರಂ ವ್ಯಾಪ್ತಿಯಲ್ಲಿ ಕಳ್ಳತನ ಮಾಡುವುದಕ್ಕೂ ಮುನ್ನ ಸದಾಶಿವನಗರ ವ್ಯಾಪ್ತಿಯಲ್ಲಿಯೂ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಶೇಷಾದ್ರಿಪುರಂ ಠಾಣಾ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಓದಿ:ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ

ABOUT THE AUTHOR

...view details