ಕರ್ನಾಟಕ

karnataka

ಬಿಬಿಎಂಪಿ ಹೊಸ ಕರಡು ಆಸ್ತಿ ತೆರಿಗೆ ನೀತಿ ಅವೈಜ್ಞಾನಿಕ: ಆಕ್ಷೇಪಣೆ ಸಲ್ಲಿಸಿದ ಎಫ್.ಕೆ.ಸಿ.ಸಿ.ಐ

By ETV Bharat Karnataka Team

Published : Mar 6, 2024, 8:12 PM IST

ಬಿಬಿಎಂಪಿ ಹೊಸ ಕರಡು ಆಸ್ತಿ ತೆರಿಗೆ ನೀತಿಯನ್ನು ವಿರೋಧಿಸಿ, ಆಕ್ಷೇಪಣೆ ಸಲ್ಲಿಸಿರುವುದಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ ತಿಳಿಸಿದ್ದಾರೆ.

FKCCI Senior Vice President MG Balakrishna press conference
ಎಫ್.ಕೆ.ಸಿ.ಸಿ.ಐ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ ಸುದ್ದಿಗೋಷ್ಠಿ

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಬಿಬಿಎಂಪಿ ಪ್ರಕಟಿಸಿದ ಹೊಸ ಕರಡು ಆಸ್ತಿ ತೆರಿಗೆ ನೀತಿಗೆ ಆಕ್ಷೇಪಣೆ ಸಲ್ಲಿಸಿದೆ. "ಈ ಹಿಂದೆ ನಿಗದಿಪಡಿಸಿದ್ದ ಸ್ಯಾಸ್ ಮೌಲ್ಯಮಾಪನ ಯೋಜನೆ, ಅರ್ಹ ವ್ಯಕ್ತಿಗಳಿಂದ ಒಂದು ವರ್ಷಕ್ಕೂ ಹೆಚ್ಚು ಅಧ್ಯಯನ ಮತ್ತು ಚರ್ಚೆಯ ನಂತರ ಪ್ರಕಟಿಸಲಾಗಿತ್ತು. ಈ ಮೌಲ್ಯಮಾಪನ ಯಶಸ್ವಿ ಹಾಗೂ ಸಮಂಜಸವಾಗಿದ್ದು, ಅದನ್ನು ಮುಂದುವರಿಸುವುದು ಸೂಕ್ತವಾಗಿದೆ. ಈಗ ಪ್ರಕಟಿಸಿರುವ ಹೊಸ ನೀತಿಯನ್ನು ಪಾಲಿಕೆ ಹಿಂಪಡೆಯಬೇಕು" ಎಂದು ಎಫ್.ಕೆ.ಸಿ.ಸಿ.ಐ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ ಆಗ್ರಹಿಸಿದರು.

ನಗರದ ಕೆಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಕ್ಯಾಬಿನೆಟ್ ಹಾಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಬಿಎಂಪಿ ಸುಮಾರು ಶೇಕಡಾ 55 ರಷ್ಟು ಆಸ್ತಿದಾರರ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ವಿಫಲವಾಗಿರುವುರಿಂದ ಆದಾಯದಲ್ಲಿ ನಷ್ಟವಾವಾಗುತ್ತಿದೆ. ತಮ್ಮ ಕಾರ್ಯಕ್ಷಮತೆಯಲ್ಲಿನ ಕೊರತೆ ಹಾಗೂ ಅದಕ್ಷತೆಯನ್ನು ಮರೆಮಾಚಲು ಹೊಸ ತೆರಿಗೆ ನೀತಿಯನ್ನು ತೆರಿಗೆದಾರರ ಮೇಲೆ ಹೇರಲು ಪ್ರಯತ್ನಿಸಲಾಗುತ್ತಿದೆ. ಈ ಹೊಸ ನೀತಿಯಿಂದಾಗಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಹೆಚ್ಚಿನ ತೆರಿಗೆ ಹೇರಿ ಶಿಕ್ಷಿಸಿದಂತಾಗುತ್ತದೆ" ಎಂದು ಹೇಳಿದರು.

"ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಕಷ್ಟು ಕಾಲಮಿತಿಯನ್ನು ಒದಗಿಸಿಲ್ಲ. ಈ ರೀತಿಯ ಅಧಿಸೂಚನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು 30 ರಿಂದ 45 ದಿನಗಳ ಕಾಲಾವಕಾಶವನ್ನು ನೀಡುವುದು ಸರ್ವೇ ಸಾಮಾನ್ಯವಾಗಿದೆ. ಈ ಕರಡು ಅಧಿಸೂಚನೆಗೆ ಕೇವಲ 15 ದಿನಗಳನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು 45 ದಿನಗಳವರೆಗೆ ಗಡುವನ್ನು ವಿಸ್ತರಿಸಬೇಕು" ಎಂದು ವಿನಂತಿಸಿದರು.

"ಹೊಸ ವ್ಯವಸ್ಥೆ ಸಂಕೀರ್ಣವಾಗಿದ್ದು, ಯೋಜನೆಯನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ. ಮಾರ್ಗಸೂಚಿಗಳ ಮೌಲ್ಯದ ಆಧಾರದ ಮೇಲೆ ಆಸ್ತಿ ತೆರಿಗೆಯನ್ನು ನಿರ್ಣಯಿಸಲು ಪ್ರಸ್ತಾಪಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಮಾರ್ಗದರ್ಶಿ ಮೌಲ್ಯವನ್ನು ತೆರಿಗೆಯ ಮೌಲ್ಯಮಾಪನಕ್ಕೆ ಮಾನದಂಡವಾಗಿ ತೆಗೆದುಕೊಳ್ಳಬಾರದು. ತೆರಿಗೆ ಬಿಬಿಎಂಪಿ ನೀಡುವ ಸೌಲಭ್ಯಕ್ಕೆ ಅನುಗುಣವಾಗಿರಬೇಕು. ಆಸ್ತಿಗಳ ಖರೀದಿ ಮತ್ತು ಮಾರಾಟಕ್ಕೆ ಮಾತ್ರ ಮಾರ್ಗದರ್ಶನ ಮೌಲ್ಯದ ಅಗತ್ಯವಿದೆ" ಎಂದರು.

ಇದನ್ನೂ ಓದಿ:ಆಸ್ತಿ ತೆರಿಗೆ ಕುರಿತ ಗೊಂದಲ: ಮಾರ್ಗಸೂಚಿ ರಚನೆ ಮಾಡಿದ ಹೈಕೋರ್ಟ್

ABOUT THE AUTHOR

...view details