ಕರ್ನಾಟಕ

karnataka

ಬಿಬಿಎಂಪಿ ಬಜೆಟ್‌: ತ್ಯಾಜ್ಯ ನಿರ್ವಹಣೆಗೆ ಸಾವಿರ ಕೋಟಿ; ಮಹಿಳೆಯರ ನೈರ್ಮಲ್ಯಕ್ಕೆ 100 'ಶಿ ಟಾಯ್ಲೆಟ್'

By ETV Bharat Karnataka Team

Published : Feb 29, 2024, 7:00 PM IST

ಈ ವರ್ಷದಿಂದ ಪೌರ ಕಾರ್ಮಿಕರ ದಿನಾಚರಣೆಯಂದು ಸ್ವಚ್ಛತೆಯನ್ನು ತ್ತೇಜಿಸುವ ನಿಟ್ಟಿನಲ್ಲಿ ಒಬ್ಬ ಪೌರ ಕಾರ್ಮಿಕರಿಗೆ 'ಶರಣೆ ಸತ್ಯಕ್ಕ ಪ್ರಶಸ್ತಿ' ನೀಡಿ ಗೌರವಿಸುವ ಕುರಿತು ಬಿಬಿಎಂಪಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

BBMP Budget
ಬಿಬಿಎಂಪಿ ಬಜೆಟ್​ ಮಂಡನೆ

ಬೆಂಗಳೂರು: ಪಾಲಿಕೆ ಬಜೆಟ್​ನ ಬ್ರ್ಯಾಂಡ್ ಬೆಂಗಳೂರಿನ ಅಡಿಯಲ್ಲಿ ತ್ಯಾಜ್ಯವನ್ನು ಸಂಸ್ಕರಿಸಲು ನಗರದ 4 ದಿಕ್ಕುಗಳಲ್ಲಿ 50 ರಿಂದ 100 ಎಕರೆಗಳಷ್ಟು ಜಮೀನುಗಳನ್ನು ಗುರುತಿಸಿ ಅದರ ಖರೀದಿಗಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಮಹಿಳೆಯರ ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಿ 100 'ಶಿ ಟಾಯ್ಲೆಟ್' ನಿರ್ಮಿಸುವುದಾಗಿ ಘೋಷಿಸಲಾಗಿದೆ.

ಉಳಿದಂತೆ, ಸ್ವಚ್ಛ ಬೆಂಗಳೂರಿನ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ 1,000 ಕೋಟಿ ರೂ.ಗಳ ಅನುದಾನವನ್ನು ಪಾಲಿಕೆಯಿಂದ ಮೀಸಲಿಡಲಾಗಿದೆ. ಸ್ವಚ್ಛತೆಯನ್ನು ಉತ್ತೇಜಿಸಲು 2024-25 ಸಾಲಿನಲ್ಲಿ ಒಬ್ಬ ಪೌರಕಾರ್ಮಿಕರಿಗೆ 'ಶರಣೆ ಸತ್ಯಕ್ಕ' ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಿದ್ದು, ಪಾಲಿಕೆಯಿಂದ ಆಚರಿಸುವ ಪೌರ ಕಾರ್ಮಿಕ ದಿನಾಚರಣೆಯಂದು ನೀಡಿ ಗೌರವಿಸಲು ಯೋಜಿಸಲಾಗಿದೆ.

ಬ್ರ್ಯಾಂಡ್ ಬೆಂಗಳೂರು-ಟೆಕ್ ಬೆಂಗಳೂರು:ಪಾಲಿಕೆಯಲ್ಲಿ ಹಾಲಿ ಬಳಕೆಯಲ್ಲಿರುವ ಸಾಫ್ಟ್​ವೇರ್​ ಆ್ಯಪ್​ಗಳನ್ನು ಪರಸ್ಪರ ಸಮನ್ವಯಗೊಳಿಸಿ, ಸಮಗ್ರವಾದ ವ್ಯವಸ್ಥೆಯನ್ನು ರೂಪಿಸಲು ಈ ಸಾಲನಲ್ಲಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಬ್ರ್ಯಾಂಡ್​ ಬೆಂಗಳೂರು-ವೈಬ್ರೆಂಟ್ ಬೆಂಗಳೂರು:250 ಮೀಟರ್ ಎತ್ತರದ ಸೈ-ಡೆಕ್ ಅನ್ನು ನಿರ್ಮಿಸಲು 350 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಈ ಸಾಲಿನಲ್ಲಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಪಾಲಿಕೆಯಿಂದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳ ಅನುದಾನವನ್ನು ಕೊಡಲಾಗಲಿದೆ.

ಬೆಂಗಳೂರು ನಗರವನ್ನು ಆಕರ್ಷಣೀಯವಾಗಿ ಮಾಡಲು ಬೆಂಗಳೂರು ನಗರದಲ್ಲಿರುವ ಮೇಲ್ಸೇತುವೆ, ಕೆಳಸೇತುವೆ, ರಸ್ತೆಗಳ ಕೂಡು ಜಾಗಗಳು, ಉದ್ಯಾನವನಗಳಲ್ಲಿ ಆಕರ್ಷಣೀಯ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲು 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಲಿದೆ. ಬೆಂಗಳೂರು ನಗರದ ಕೂಡು ರಸ್ತೆಗಳನ್ನು ಸೌಂದರ್ಯಗೊಳಿಸಲು 20 ಕೋಟಿ ರೂ. ಮೀಸಲಿಡಲಾಗಿದೆ.

ನೇರ ಪಾವತಿ ವ್ಯವಸ್ಥೆಯ ಅಡಿ ಸೇವೆ ಸಲ್ಲಿಸಿ ನಿವೃತ್ತರಾಗುವ ಪೌರಕಾರ್ಮಿಕರ ನಿವೃತ್ತಿ ನಂತರದ ಬದುಕಿಗೆ ಆರ್ಥಿಕ ರಕ್ಷಣೆ ಒದಗಿಸಲು ಪಿಂಚಣಿ ಯೋಜನೆಯನ್ನು ಈ ಸಾಲಿನಿಂದ ಜಾರಿಗೆ ತರಲು137.50 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಂಗಳಮುಖಿಯರ ಸಮುದಾಯದ ಕಲ್ಯಾಣಕ್ಕಾಗಿ ಇ-ಸಾರಥಿ ಯೋಜನೆಯನ್ನು ಈ ಸಾಲಿನಿಂದ ಜಾರಿಗೆ ತರಲು 5 ಕೋಟಿ ಕೊಡಮಾಡಲಾಗುತ್ತಿದೆ.

ಕಾರ್ಮಿಕ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಹಾಗೂ ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ವಿದ್ಯುತ್ ವಾಹನಗಳನ್ನು ಉಚಿತವಾಗಿ ವಿತರಿಸಲು 12 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ. ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಮಂಗಳಮುಖಿಯರ ಸಮುದಾಯ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಹಾಯಧನವನ್ನು ಪಾಲಿಕೆಯ ವತಿಯಿಂದ ನೀಡಲು 10 ಕೋಟಿಗಳ ಅನುದಾನ ನೀಡಲಾಗುವುದು.

ನಗರದಲ್ಲಿರುವ ಎಲ್ಲಾ ವರ್ಗದ ವಸತಿ ರಹಿತ ಬಡವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಒಂಟಿ ಮನೆ ಯೋಜನೆಯಡಿ ಒಟ್ಟಾರೆ 211 ಕೋಟಿ ರೂಪಾಯಿ ಅನುದಾನ ಕೊಡಲಾಗುತ್ತಿದೆ. ಮಂಗಳಮುಖಿಯರ ಅನುಕೂಲಕ್ಕಾಗಿ ರಾತ್ರಿ ನಿರಾಶ್ರಿತರ ತಂಗುದಾಣವನ್ನು ನಿರ್ಮಾಣ ಮಾಡಲು 4 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ.

ಬೀದಿಬದಿ ವ್ಯಾಪಾರಿಗಳ ಮಾರಾಟದ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸುಮಾರು 5,000 ಜನರಿಗೆ ಸಬ್ಸಿಡಿ ಆಧಾರಿತ ಇ-ವೆಂಡಿಂಗ್ ರಿಕ್ಷಾ ಒದಗಿಸುವ ಯೋಜನೆಯನ್ನು 50 ಕೋಟಿ ರೂ.ಗಳ ಅನುದಾನದಲ್ಲಿ ಜಾರಿಗೆ ತರಲು ಬಜೆಟ್​ನಲ್ಲಿ ಉದ್ದೇಶಿಸಲಾಗಿದೆ.

ಇದನ್ನೂ ಓದಿ:ಬಿಬಿಎಂಪಿ ಬಜೆಟ್​ನಲ್ಲಿ 'ಬ್ರ್ಯಾಂಡ್ ಬೆಂಗಳೂರಿಗೆ' ಸಿಂಹಪಾಲು: ಯಾವುದಕ್ಕೆ ಎಷ್ಟು ಅನುದಾನ?

ABOUT THE AUTHOR

...view details