ಕರ್ನಾಟಕ

karnataka

200 ಸ್ವತ್ತುಗಳಿಗೆ ನಕಲಿ`ಎ' ಖಾತಾ ಮಾಡಿ ಬಿಬಿಎಂಪಿಗೆ 5 ಕೋಟಿ ರೂ. ವಂಚನೆ: ಎನ್ ಆರ್ ರಮೇಶ್ ಆರೋಪ

By ETV Bharat Karnataka Team

Published : Mar 4, 2024, 4:37 PM IST

ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ 2024 ರ ಫೆಬ್ರವರಿ ತಿಂಗಳಿನಲ್ಲಿ 200 ಕ್ಕೂ ಹೆಚ್ಚು `ಎ' ಖಾತಾ ಮಾಡಿ ಬಿಬಿಎಂಪಿಗೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ದಾಖಲೆ ಸಹಿತ ಆರೋಪಿಸಿದರು.

BBMP, BJP leader NR Ramesh
ಬಿಬಿಎಂಪಿ, ಬಿಜೆಪಿ ಮುಖಂಡ ಎನ್ ಆರ್ ರಮೇಶ್

ಬೆಂಗಳೂರು:ನಗರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ ಎ ಖಾತಾಗಳನ್ನು ಮಾಡಿಕೊಡುವ ಮೂಲಕ ಬಿಬಿಎಂಪಿಗೆ ಐದು ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟವನ್ನುಂಟು ಮಾಡಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವೆಸಗಿದ್ದು, ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದರು.

ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂರಾರು ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಮಾಡುವ ಮೂಲಕ ಐದು ಕೋಟಿ ರೂಪಾಯಿಗಳಷ್ಟು ಪಾಲಿಕೆಗೆ ವಂಚಿಸಿರುವ ಅಧಿಕಾರಿಗಳು ಮತ್ತು ಸಂಸ್ಥೆಯೊಂದರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

200 ಸ್ವತ್ತುಗಳಿಗೆ ಎ ಖಾತಾ: ''ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪವಿಭಾಗದ ವ್ಯಾಪ್ತಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ `ಎ' ಖಾತಾಗಳನ್ನು ಮಾಡಿಕೊಡುವದರಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣದಲ್ಲಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ. ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ವಿ ಅಜಯ್ ಮತ್ತು ಮಿರು ಇನ್ಫೋ ಸೆಲ್ಯೂಷನ್ ಎಂಬ ಸಂಸ್ಥೆಯ ಮುಖ್ಯಸ್ಥರು ಭಾಗಿಯಾಗಿದ್ದಾರೆ'' ಎಂದು ದಾಖಲೆ ಸಹಿತ ಆರೋಪಿಸಿದರು.

''ಹತ್ತಾರು ನಿವೇಶನಗಳನ್ನೊಳಗೊಂಡ ಖಾಸಗಿ ಬಡಾವಣೆಯ ಬಿಡಿ ನಿವೇಶನಗಳ ಖಾತಾ ಮಾಡಲು ಕಾನೂನು ರೀತಿಯಲ್ಲಿ ಅವಕಾಶವಿರುವುದಿಲ್ಲ. ಕಾನೂನು ಬಾಹಿರ ಕಾರ್ಯ ನಡೆದಿದೆ. ಸ್ವತ್ತಿಗೆ ಯಾವುದೇ ಮಾಲೀಕನು ಸಹ ಖಾತಾ ಮಾಡಿಕೊಡುವಂತೆ ಅರ್ಜಿಗಳನ್ನು ಸಲ್ಲಿಸಿಲ್ಲ. ವಾರ್ಡ್ ನಂಬರ್ 198 ರ `ಎ' ಪುಸ್ತಕದಲ್ಲಿ ವಿಷಯ ನಿರ್ವಾಹಕ ಮತ್ತು ವ್ಯವಸ್ಥಾಪಕರು ತಮ್ಮ ಸಹಿಗಳನ್ನು ಹಾಕಿಲ್ಲ. ಆದರೂ ಸಂಚು ರೂಪಿಸಿ ಖಾತೆ ಮಾಡಿಕೊಡುವ ಮೂಲಕ ವಂಚನೆ ಮಾಡಲಾಗಿದೆ'' ಎಂದು ಆರೋಪಿಸಿದರು.

''ಈ ರೀತಿ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ 2024 ರ ಫೆಬ್ರವರಿ ತಿಂಗಳ ಒಂದರಲ್ಲೇ 200 ಕ್ಕೂ ಹೆಚ್ಚು `ಎ' ಖಾತಾಗಳನ್ನು ಮಾಡಿ ಬಿಬಿಎಂಪಿಗೆ ನಷ್ಟವನ್ನುಂಟು ಮಾಡುವುದಲ್ಲದೇ ದೊಡ್ಡ ಮಟ್ಟದ ಭ್ರಷ್ಟಾಚಾರ ಎಸಗಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಅವರ ವಿರುದ್ಧ ಕೂಡಲೇ ಕಾನೂನು ರೀತಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅವರು ಮಾಡಿರುವ ಎಲ್ಲ 200ಕ್ಕೂ ಹೆಚ್ಚು ಸ್ವತ್ತುಗಳ ನಕಲಿ `ಎ' ಖಾತಾಗಳನ್ನು ರದ್ದುಪಡಿಸುವ ಕ್ರಮ ತೆಗೆದುಕೊಳ್ಳಬೇಕು'' ಎಂದು ರಮೇಶ್ ಆಗ್ರಹಿಸಿದರು.

ಇದನ್ನೂಓದಿ:ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ: ಕೋಟ ಶ್ರೀನಿವಾಸ್ ಪೂಜಾರಿ

ABOUT THE AUTHOR

...view details