ಕರ್ನಾಟಕ

karnataka

ರಾಜ್ಯ ಸರ್ಕಾರದ ಪಾಲು 3.6ಕ್ಕೆ ಇಳಿಯಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾರಣ: ಬಿ ಎಸ್​ ಯಡಿಯೂರಪ್ಪ

By ETV Bharat Karnataka Team

Published : Feb 5, 2024, 5:11 PM IST

15 ನೇ ಹಣಕಾಸಿನಲ್ಲಿ ರಾಜ್ಯ ಸರ್ಕಾರದ ಪಾಲು 3.6ಕ್ಕೆ ಇಳಿಯಲು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವೇ ಕಾರಣ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ

ಬೆಂಗಳೂರು : 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎನ್​ಡಿಎ ಸರ್ಕಾರ ಈಗಾಗಲೇ 1,16,828 ಕೋಟಿ ರೂ. ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಅವಧಿ 2026ರ ವರೆಗೆ ಇದ್ದು ಒಟ್ಟು 2.5ಲಕ್ಷ ಕೋಟಿಗೂ ಮೀರಿ ತೆರಿಗೆಯ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 14ನೇ ಹಣಕಾಸಿನ ಶಿಫಾರಸ್ಸಿಗಿಂತ ಅತ್ಯಧಿಕವಾಗಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

15ನೇ ಹಣಕಾಸಿನಲ್ಲಿ ರಾಜ್ಯ ಸರ್ಕಾರದ ಪಾಲು 3.6ಕ್ಕೆ ಇಳಿಯಲು ನೇರವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾರಣ. ಏಕೆಂದರೆ 15ನೇ ಹಣಕಾಸಿನ ವರದಿ ತಯಾರಿಸುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ರಾಜ್ಯದ ವಾಸ್ತವ ಆರ್ಥಿಕ ಸ್ಥಿತಿಯನ್ನು ಬಿಂಬಿಸಲು ವಿಫಲವಾಗಿ ಹಣಕಾಸಿನ ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಸೋತಿದ್ದರಿಂದ ರಾಜ್ಯಕ್ಕೆ ಹಿನ್ನಡೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯಗೆ ಬಿಎಸ್​ವೈ ತಿರುಗೇಟು ನೀಡಿದ್ದಾರೆ.

ಅರ್ಧ ಸತ್ಯವನ್ನು ಮಾತ್ರ ಹೇಳಿದ್ದಾರೆ: 15ನೇ ಹಣಕಾಸು ಆಯೋಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಈಗಾಗಲೇ 13,985 ಕೋಟಿ ರೂ. ಬಿಡುಗಡೆಯಾಗಿರುತ್ತದೆ. ಈ ವರ್ಷ ಇನ್ನೂ ಸುಮಾರು 3500 ಕೋಟಿ ರೂ. ಅನುದಾನ ರಾಜ್ಯ ಸರ್ಕಾರಕ್ಕೆ ಬರಲಿದೆ. ಇಷ್ಟೆಲ್ಲಾ ಮಾಹಿತಿಗಳನ್ನು ಮುಚ್ಚಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಧ ಸತ್ಯವನ್ನು ಮಾತ್ರ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪದೇ ಪದೇ ಸುಳ್ಳು ಹೇಳಿ ಸತ್ಯವನ್ನು ಮುಚ್ಚಿಡಬಹುದು ಎಂದುಕೊಂಡಿದ್ದಾರೆ. ಆದರೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೂಡಾ ಸದನದಲ್ಲಿ ಈ ಬಗ್ಗೆ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ತೆರಿಗೆಗಳನ್ನು ಏರಿಸಿದ್ದಾರೆ. ವಿದ್ಯುತ್, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಅಬಕಾರಿ ಶುಲ್ಕಗಳನ್ನು ಹೆಚ್ಚು ಮಾಡಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆಯಲ್ಲಿ ಕೈಹಿಡಿಯುವುದಿಲ್ಲ: ಅನುತ್ಪಾದಕ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಿದ್ದರಾಮಯ್ಯನವರ ಕೈಮೀರಿ ಹೋಗಿದೆ. ಎಲ್ಲ ರಂಗಗಳಲ್ಲಿ ಸರ್ಕಾರ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಕೈಹಿಡಿಯುವುದಿಲ್ಲ ಎಂಬ ಸತ್ಯದ ಅರಿವಾಗಿದೆ. ಹೀಗಾಗಿ ಲೋಕಸಭೆಯ ನಂತರ ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ಸ್ಪಷ್ಟವಾದ ವಿಚಾರವನ್ನು ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಮೂಲಕ ಅದಕ್ಕೆ ಒಂದು ತಳಹದಿಯನ್ನು ಹಾಕಿದ್ದಾರೆ ಎಂದು ಬಿಎಸ್​ವೈ ಆರೋಪಿಸಿದರು.

ಇದನ್ನೂ ಓದಿ:ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details