ಕರ್ನಾಟಕ

karnataka

ಎನ್​ಡಿಎ ಸರ್ಕಾರದ ಬದ್ಧತೆಯನ್ನು ಸೀತಾರಾಮನ್ ಮಂಡಿಸಿದ ಬಜೆಟ್ ಪುನರುಚ್ಚರಿಸಿದೆ : ಬಿಎಸ್​ವೈ

By ETV Bharat Karnataka Team

Published : Feb 1, 2024, 6:18 PM IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್​ನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ 2024 ಅನ್ನು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ

ಬೆಂಗಳೂರು :ಮುಂದಿನ ದಿನಗಳಲ್ಲಿ ಸದೃಢ, ಸಶಕ್ತ, ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ನಿಟ್ಟಿನಲ್ಲಿ ಎನ್​ಡಿಎ ಸರ್ಕಾರದ ಬದ್ಧತೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಪುನರುಚ್ಚರಿಸಿದೆ ಎಂದು ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ನವಭಾರತದ ಪರಿಕಲ್ಪನೆಯ ಸಾಕಾರದ ನಿಟ್ಟಿನಲ್ಲಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ 'ಪ್ರಗತಿನಿಷ್ಠ ಬಜೆಟ್' ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಚುನಾವಣಾಪೂರ್ವ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸದೇ, ಈ ಮಧ್ಯಂತರ ಬಜೆಟ್ ಮೂಲಕ ನಮ್ಮ ಯುವಜನತೆ, ರೈತರು, ಮಹಿಳೆಯರು ಹಾಗೂ ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವಿಕ ಆಯ - ವ್ಯಯವನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದಾರೆ ಎಂದು ಟ್ವೀಟ್ ಮೂಲಕ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಅರ್ಥಪೂರ್ಣ ಬಜೆಟ್ :ಈ ಬಜೆಟ್​ನಲ್ಲಿ ರೈತರು, ಬಡವರು, ಮಹಿಳೆಯರು, ಯುವಕರನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ. ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟಾರೆ ಅರ್ಥಪೂರ್ಣ ಬಜೆಟ್ ಮಂಡಿಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಆಶಾದಾಯಕ, ದೂರಗಾಮಿ ಬಜೆಟ್ ಮಂಡಿಸಿದ್ದು, ಬಡವರ ಆರ್ಥಿಕ ಸ್ಥಿತಿ ಮೇಲೆತ್ತಲು ಅರ್ಥಪೂರ್ಣವಾಗಿದೆ. ದೇಶದ ಭದ್ರತೆ, ವಿಕಸನಕ್ಕೆ ಪೂರಕವಾಗಿದೆ. ಸಚಿವರು ಅನೇಕ ಯೋಜನೆ ಪ್ರಕಟಿಸಿದ್ದಾರೆ ಎಂದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಅನ್ವಯ, ಒಂದು ಕೋಟಿ ಮನೆಗೆ ಸೌರ ವಿದ್ಯುತ್ ಯೋಜನೆ, ಪ್ರವಾಸೋದ್ಯಮಕ್ಕೆ 75 ಸಾವಿರ ಕೋಟಿ ಮೀಸಲು, ಲಕ್ಷದ್ವೀಪ ಹೊಸ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವ ಘೋಷಣೆ, ಪ್ರವಾಸೋದ್ಯಮಕ್ಕೆ ಸಾಲಸೌಲಭ್ಯ, ಮತ್ಸ್ಯ ಸಂಪದ ಯೋಜನೆಯಲ್ಲಿ ಕ್ರಾಂತಿಕಾರಕ ಬದಲಾವಣೆ, 7 ಲಕ್ಷದವರೆಗೆ ತೆರಿಗೆ ಇಲ್ಲ, ತೆರಿಗೆದಾರನ ಪ್ರತಿ ಪೈಸೆಯನ್ನೂ ಅರ್ಥಪೂರ್ಣವಾಗಿ ವಿನಿಯೋಗಿಸುವ ಭರವಸೆ, ಸಾವಿರ ವಿಮಾನ ಖರೀದಿ, ಕೃಷಿ ಕ್ಷೇತ್ರದ ಅಭಿವೃದ್ಧಿ, ವಂದೇ ಭಾರತ್ ರೈಲಿಗೆ ಹೊಸ ಬೋಗಿ ಜೋಡಣೆ, ನಾಲ್ಕು ಕೋಟಿ ರೈತರಿಗೆ ಬೆಳೆ ವಿಮೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಯುವ ಉದ್ಯಮಿಗಳಿಗೆ ಪ್ರೋತ್ಸಾಹದ ಬಜೆಟ್: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೃಷಿ ವಲಯ ಮತ್ತು ಕೃಷಿಧಾನ್ಯಗಳ ಬೆಳೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಯುವ ಉದ್ಯಮಿಗಳಿಗೆ ಪ್ರೋತ್ಸಾಹ, ಉತ್ಪಾದನೆಗೆ ಒತ್ತು ಇತ್ಯಾದಿ ಕಮಗಳು ಸ್ವಾಗತಾರ್ಹ ಎಂದಿರುವ ಅವರು, ದೇಶೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಕಲ್ಪ ಮಾಡಿ ಲಕ್ಷದ್ವೀಪ ಸೇರಿ ರಾಜ್ಯದ ಕರಾವಳಿ ಪ್ರವಾಸೋದ್ಯಮದ ಬೆಳವಣಿಗೆಗೆ ಮನ್ನಣೆ ಹಾಕಲಾಗಿದೆ ಎಂದಿದ್ದಾರೆ.

ಇದೊಂದು ಜನಪರ, ಅಭಿವೃದ್ಧಿಪರ ಹಾಗೂ ವಿಕಾಸಪೂರಕ ಬಜೆಟ್. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಈ ಆಯವ್ಯಯದಲ್ಲಿ ಅಡಗಿದೆ. ಹಿಂದಿನ ಐದು ವರ್ಷದ ಆಡಳಿತದಲ್ಲಿ ಯಾವ ಯಾವ ವಲಯಕ್ಕೆ ಶಕ್ತಿ ತುಂಬಿದ್ದೇವೆ ಎನ್ನುವ ಮಾಹಿತಿಯನ್ನು ಹಣಕಾಸು ಸಚಿವರು ನೀಡಿದ್ದಾರೆ. ಯುವಜನತೆ ಸೇರಿ ಹಲವು ವರ್ಗಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಭರವಸೆ ನೀಡಿದ್ದಾರೆ. ಉತ್ಪಾದನಾ ಕ್ಷೇತ್ರದ ಓಟಕ್ಕೆ ಇಂಬು ಕೊಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಧ್ಯಂತರ ಬಜೆಟ್​ನಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆಗೆ ಆದ್ಯತೆ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವೆ : ರಾಜ್ಯದ ಅಭಿವೃದ್ಧಿ ಬಗ್ಗೆ ಮುಂದಿನ ದಿನಗಳಲ್ಲಿ ಕೇಂದ್ರ ಬಿಜೆಪಿ ನಾಯಕರ ಜತೆ ಮುಕ್ತವಾಗಿ ಚರ್ಚೆ ಮಾಡುತ್ತೇನೆ. ಇದು ಮಧ್ಯಂತರ ಬಜೆಟ್. ಹಾಗಾಗಿ ಚುನಾವಣೆ ಬಳಿಕ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವೆ. ನನಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲಿ ಅನ್ಯಾಯವಾಗಿದೆ ಅದೆಲ್ಲವನ್ನೂ ಸರಿಮಾಡುವ ನಿಟ್ಟಿನಲ್ಲಿ ಕೇಂದ್ರದ ಮನವೊಲಿಸುತ್ತೇವೆ. ಪ್ರಾಮಾಣಿಕವಾಗಿ ರಾಜ್ಯದ ಜನತೆ ಪರವಾಗಿ ಧ್ವನಿ ಎತ್ತುತ್ತೇನೆ. ಅದರ ಜತೆಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾದಾಗ ಕರ್ನಾಟಕಕ್ಕೆ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ನೆರವು ಸಿಗುತ್ತದೆ ಎನ್ನುವ ನಿರೀಕ್ಷೆ ನನಗಿದೆ ಎಂದು ಅವರು ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಟಿ ಎ ಶರವಣ

ಪ್ರಗತಿಗೆ ಪೂರಕವಾದ ಬಜೆಟ್ ಆಗಿದೆ:ಆರ್ಥಿಕ ಸ್ಥಿರತೆ, ಸಮಗ್ರ ಅಭಿವೃದ್ದಿ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ, ಬಡವರು, ರೈತರು, ಮಧ್ಯಮ ವರ್ಗಕ್ಕೆ ಸ್ಪಂದಿಸುವ ಪ್ರಗತಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಹೇಳಿದ್ದಾರೆ.

ಕೈಗಾರಿಕೆ, ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ರೈತರ ಪ್ರಗತಿ ಹೀಗೆ ಸರ್ವತೋಮುಖಿ ಮತ್ತು ಸರ್ವಸ್ಪರ್ಶಿಯಾಗಿರುವ ಈ ಬಜೆಟ್, ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ ಸುಸ್ಥಿರವಾಗಿದೆ. ಐದು ಟ್ರಿಲಿಯನ್ ಡಾಲರ್ ಎಕಾನಮಿ ಎನ್ನುವುದು ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಆಗಿದ್ದು, ಆ ದಿಕ್ಕಿನಲ್ಲಿ ಇದೊಂದು ಚಾರಿತ್ರಿಕ ಬಜೆಟ್ ಆಗಿದೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ವಿವಾಹ ನೋಂದಣಿ ಸರಳೀಕರಿಸುವ ಹಿಂದೂ ವಿವಾಹಗಳ ನೋಂದಣಿ ತಿದ್ದುಪಡಿ ನಿಯಮಗಳಿಗೆ ಸಂಪುಟ ಅಸ್ತು

ABOUT THE AUTHOR

...view details