ಕರ್ನಾಟಕ

karnataka

ಬಿಜೆಪಿ ತಂದಿದ್ದ 'ಭೂ ಸುಧಾರಣಾ ಕಾಯ್ದೆ 2020'ಕ್ಕೆ ತಿದ್ದುಪಡಿ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Feb 10, 2024, 3:39 PM IST

Updated : Feb 10, 2024, 5:27 PM IST

ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಫ್ರೀಡಂಪಾರ್ಕ್​​ನಲ್ಲಿ ರೈತ ಸಮಾವೇಶ ನಡೆಯಿತು.

siddaramaiah
ಸಿಎಂ ಸಿದ್ದರಾಮಯ್ಯ

ಪ್ರೊ. ಎಂ.ಡಿ.ನಂಜುಂಡಸ್ವಾಮಿ ಜನ್ಮ ದಿನಾಚರಣೆ

ಬೆಂಗಳೂರು : ''ರೈತರು ನೀಡಿದ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ 'ಭೂ ಸುಧಾರಣಾ ಕಾಯ್ದೆ 2020'ಕ್ಕೆ ತಿದ್ದುಪಡಿ ತರಲಾಗುವುದು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂಪಾರ್ಕ್​​ನಲ್ಲಿ ಇಂದು ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಅವರು, ''ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು'' ಎಂದರು.

ರೈತ ಸಮಾವೇಶ

''ಈ ಸ್ಟಡಿ ಸರ್ಕಲ್​​ಗೆ ಬಹಳಷ್ಟು ಮಂದಿ ಉಪನ್ಯಾಸಕರು, ಪ್ರೊಫೆಸರ್​​ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು. ನಂಜುಂಡಸ್ವಾಮಿಯವರ ರೈತ ಹೋರಾಟ ನನಗೆ ರಾಜಕೀಯ ಪ್ರೇರಣೆ'' ಎಂದು ಸಿಎಂ ಇದೇ ಸಂದರ್ಭದಲ್ಲಿ ಸ್ಮರಿಸಿದರು.

ರೈತ ಸಮಾವೇಶ

''ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಅವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ನಂಜುಂಡಸ್ವಾಮಿ ಮತ್ತು ರೈತ ಹೋರಾಟ ಸಮಾಜ ಮತ್ತು ಸರ್ಕಾರಗಳ ಮೇಲೆ ಪರಿಣಾಮ ಬೀರಿದೆ'' ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯ ಜನ್ಮದಿನಾಚರಣೆ:ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನಾಚಾರಣೆ ಅಂಗವಾಗಿ ಶನಿವಾರ ವಿಧಾನಸೌಧದ ಬಳಿ ಅವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕೆಂಗಲ್ ಹನುಮಂತಯ್ಯನವರು ದಕ್ಷ ಆಡಳಿತಗಾರ, ಕರ್ನಾಟಕವನ್ನು ಅತ್ಯಂತ ದಕ್ಷತೆಯಿಂದ ಸುಮಾರು ನಾಲ್ಕೂವರೆ ವರ್ಷ ಆಳಿದವರು'' ಎಂದರು.

ಕೆಂಗಲ್ ಹನುಮಂತಯ್ಯ ಜನ್ಮದಿನಾಚರಣೆ

''ಹನುಮಂತಯ್ಯನವರ ಜನ್ಮ ದಿನದಂದು ಅವರ ಸ್ಮರಣೆ ಮಾಡಿ, ಗೌರವ ಸಲ್ಲಿಸಿದ್ದೇವೆ. ರಾಮನಗರ ಜಿಲ್ಲೆಯವರಾದ ಅವರು ಸಂವಿಧಾನ ಜಾರಿಯಾದ ನಂತರ ಮುಖ್ಯಮಂತ್ರಿಯಾದವರು. ಅವರ ಕಾಲದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿಯಾದವರು. ವಿಧಾನಸೌಧ ಕಟ್ಟಿಸಿದ್ದು ಅವರು. ಆದರೆ ದುರ್ದೈವ, ಅದನ್ನು ಅವರು ಉದ್ಘಾಟಿಸಲು ಬಿಡಲಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

''ಅವರ ಆಡಳಿತ ನಮಗೆಲ್ಲಾ ಮಾದರಿ. ವಿಧಾನಸೌಧದ ಪೂರ್ವದಿಕ್ಕಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಸಿದ್ದು, ಜನಸೇವೆಯೇ ಜನಾರ್ಧನ ಸೇವೆ ಎಂದು ಅದರ ಅರ್ಥ. ಬದ್ಧತೆ, ನಿಷ್ಠುರತೆಯಿಂದ ಸರ್ಕಾರದ ಕೆಲಸ ಮಾಡಿದ್ದರು. ಹಳೇ ಮೈಸೂರು ಭಾಗದವರಾದರೂ ವಿಶಾಲ ಕರ್ನಾಟಕವಾಗಬೇಕೆಂದು ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ್ದರು. ಅವರ ತತ್ವ ಆದರ್ಶಗಳು ನಮಗೆ ಮಾದರಿ'' ಎಂದರು.

ಕೆಂಗಲ್ ಹನುಮಂತಯ್ಯ ಜನ್ಮದಿನಾಚಾರಣೆ

ಕಾನೂನು ಕ್ರಮ:ಇದೇ ವೇಳೆ ಮಾಜಿ ಸಚಿವಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ, ''ಅದಕ್ಕೆಲ್ಲ ಪ್ರತಿಕ್ರಿಯೆ ಕೊಡಲಪ್ಪ. ಸುಮ್ನೆ ನೀವು ಈಶ್ವರಪ್ಪ ಹಂಗೆ ಹೇಳಿದ, ವಿಜಯೇಂದ್ರ ಹಿಂಗ್ ಹೇಳ್ದ.. ಇದನ್ನೇನಾ ನೀವು ಕೇಳೋದು. ಕಾನೂನು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತದೆ'' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಲೆಕ್ಕರಾಮಯ್ಯನ ಬಜೆಟ್‌ ಮೇಲೆ ಬೆಳಗಾವಿ ಜನರಿಗೆ ಬೆಟ್ಟದಷ್ಟು‌ ನಿರೀಕ್ಷೆ

Last Updated : Feb 10, 2024, 5:27 PM IST

ABOUT THE AUTHOR

...view details