ಕರ್ನಾಟಕ

karnataka

ಮತ ಹಾಕದೆ ಯಾರನ್ನೂ ದೂರುವ ಹಕ್ಕು ನಮಗಿಲ್ಲ: ನಟ ರಕ್ಷಿತ್ ಶೆಟ್ಟಿ - Rakshith Shetty Casts Vote

By ETV Bharat Karnataka Team

Published : Apr 26, 2024, 5:15 PM IST

Updated : Apr 26, 2024, 5:26 PM IST

ಉಡುಪಿಯ ಮತಗಟ್ಟೆಯಲ್ಲಿ ಇಂದು ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಿದರು.

ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಮತದಾನ

ಉಡುಪಿ/ಬೆಂಗಳೂರು: "ಮತದಾನದ ಕರ್ತವ್ಯದಿಂದ ಯಾರೂ ಹಿಂಜರಿಯಬಾರದು. ಮತ ಹಾಕದೇ ಯಾರನ್ನೂ ದೂರಲು ನಮಗೆ ಹಕ್ಕಿಲ್ಲ" ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು. ಲೋಕಸಭಾ ಚುನಾವಣೆಗೆ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 197ಕ್ಕೆ ಆಗಮಿಸಿದ ಅವರು ವೋಟ್ ಮಾಡಿದರು.

ಬಳಿಕ ಮಾತನಾಡಿ, "ಕಡ್ಡಾಯ ಮತದಾನ ನಿಯಮ ಜಾರಿಗೆ ತರುವಂತೆ ಪೇಜಾವರ ಶ್ರೀಗಳು ಹೇಳಿರುವುದು ಬಹಳ ಒಳ್ಳೆಯ ಯೋಚನೆ. ಆದರೆ, ಎಲ್ಲರನ್ನೂ ಮತಗಟ್ಟೆಗೆ ಕರೆತರುವುದು ಕಷ್ಟದ ಕೆಲಸ. ಮುಂದಿನ ಐದು ಹತ್ತು ವರ್ಷಗಳಲ್ಲಿ ಅಂಥ ನಿಯಮ ಜಾರಿಗೆ ತರಬಹುದು. ಅಂತರ್ಜಾಲದ ಮೂಲಕ ಮತ ಹಾಕುವ ವ್ಯವಸ್ಥೆ ಬಂದರೆ ಇದು ಸಾಧ್ಯವಿದೆ. ಸದ್ಯಕ್ಕೆ ಶೇ 100ರಷ್ಟು ಮತದಾನ ಮಾಡಿಸುವುದು ಕಷ್ಟವಿದೆ. ನಾನು ವೋಟು ಮಾಡುವುದಕ್ಕೋಸ್ಕರ ಊರಿಗೆ ಬಂದಿದ್ದೇನೆ. ನಾನು ಮತ ಹಾಕಿದವರು ಶೇ.100 ರಷ್ಟು ಗೆಲ್ಲುತ್ತಾರೆ, ಅದರಲ್ಲಿ ಡೌಟೇ ಇಲ್ಲ. ನಾನು ಯಾರಿಗೆ ಮತ ಹಾಕಿದ್ದೇನೆ ಅನ್ನೋದನ್ನು ಮುಂದಿನ ವರ್ಷ ಹೇಳುವೆ" ಎಂದರು.

ಕುಟುಂಬ ಸಹಿತ ಮತದಾನ ಮಾಡಿದ ನಟಿ ಮಾಲಾಶ್ರೀ

ನಟಿ ಮಾಲಾಶ್ರೀ ತಮ್ಮ ಪುತ್ರಿ ಆರಾಧನಾ ರಾಮ್, ಪುತ್ರ ಆರ್ಯನ್​ ಸಮೇತರಾಗಿ ಶ್ರೀ ವೀರೇಂದ್ರ ಪಾಟೀಲ್ ಕಾಲೇಜು ಹತ್ತಿರದ ಪತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರ ಮತಗಟ್ಟೆ ಸಂಖ್ಯೆ- 59ಕ್ಕೆ ಕುಟುಂಬಸಮೇತರಾಗಿ ಆಗಮಿಸಿದ ನಟ ಅನಂತ್ ನಾಗ್​ ಮತದಾನ ಮಾಡಿದರು. ಪತ್ನಿ ಗಾಯತ್ರಿ, ಪುತ್ರಿ ಅದಿತಿ ಕೂಡ ವೋಟ್ ಮಾಡಿದ್ದಾರೆ.

ನಟ ಅನಂತ್ ನಾಗ್​ ಮತದಾನ

ಇನ್ನು ವೋಟ್ ಮಾಡಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿ, "ಪ್ರತಿಯೊಬ್ಬರೂ ಮತ ಹಾಕಬೇಕು. ಅದು ಜವಾಬ್ದಾರಿ. ನೀವು ಮತ ಹಾಕಿಲ್ಲ ಅಂದ್ರೆ ಅದು ವ್ಯರ್ಥ. ಯುವಕರು ಇನ್ನೂ ಮಲಗಿದ್ದಾರೆ. ಎದ್ದೇಳೋದು ಲೇಟ್. ಎದ್ದೇಳ್ತಾರೆ, ಎದ್ದು ವೋಟ್ ಹಾಕ್ತಾರೆ" ಎಂದರು.

ಬಿಟಿಎಲ್​​ ವಿದ್ಯಾವಾಹಿನಿ ಶಾಲೆಯ ಮತಗಟ್ಟೆಗೆ ನಟ, ನಿರ್ದೇಶಕ ಉಪೇಂದ್ರ ಆಗಮಿಸಿ ಮತ ಚಲಾಯಿಸಿದರು. ಕತ್ರಿಗುಪ್ಪೆ ಬಳಿ ಇರುವ ಪೋಲಿಂಗ್ ಬೂತ್​​ನಲ್ಲಿ ಮತದಾನ ಮಾಡಿದ ಅವರು ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟರು. ಕೆವಿವಿ ಶಾಲೆಗೆ ಪ್ರೇಮ್ ಹಾಗೂ ರಕ್ಷಿತಾ ದಂಪತಿ ಆಗಮಿಸಿ ಮತ ಚಲಾಯಿಸಿದರು.

ನಟ ಡಾಲಿ ಧನಂಜಯ್​ ಅರಸಿಕೆರೆಯ ಕಾಳೇನಹಳ್ಳಿಯ ಮತಗಟ್ಟೆಗೆ ಕುಟುಂಬಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಎಂದಿನಂತೆ ಈ ಬಾರಿಯೂ ಕುಟುಂಬಸ್ಥರೊಂದಿಗೆ ಮತದಾನ ಮಾಡಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿಶೈಲಿಯಲ್ಲೇ ಅವರು ಮತಗಟ್ಟೆಗೆ ಬಂದಿದ್ದರು.

ಇದನ್ನೂ ಓದಿ: ಸೆಂಚುರಿ ದಾಟಿದರೂ ಬತ್ತದ ಉತ್ಸಾಹ: ಮತಗಟ್ಟೆಗೆ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು - Lok Sabha election 2024

Last Updated :Apr 26, 2024, 5:26 PM IST

ABOUT THE AUTHOR

...view details