ಕರ್ನಾಟಕ

karnataka

ಒಂದು ಎಕರೆ ಜಮೀನಿನಲ್ಲಿ ಮಾವಿನ ಬೆಳೆ: ವರ್ಷಕ್ಕೆ 5 ಟನ್​ ಮಾರಾಟ, ಈ ಯಶಸ್ವಿ ರೈತನ ಗುಟ್ಟೇನು? - Mango Cultivation

By ETV Bharat Karnataka Team

Published : Apr 29, 2024, 12:53 PM IST

Updated : Apr 29, 2024, 1:27 PM IST

ಹಾವೇರಿ ರೈತರೊಬ್ಬರು 20 ವರ್ಷಗಳ ಹಿಂದೆ 30 ಮಾವಿನ ಗಿಡಗಳನ್ನು ನೆಟ್ಟಿದ್ದರು. ಆ ಗಿಡಗಳೀಗ ಉತ್ತಮ ಫಸಲು ನೀಡುತ್ತಿವೆ. ಈ ಯಶಸ್ವಿ ರೈತನ ಗುಟ್ಟೇನು ತಿಳಿಯೋಣ ಬನ್ನಿ.

ರೈತ ಬಸವಂತಪ್ಪ ಅಗಡಿ
ರೈತ ಬಸವಂತಪ್ಪ ಅಗಡಿ

ಮಾವು ಬೆಳೆ

ಹಾವೇರಿ:ಜಿಲ್ಲೆಯಲ್ಲಿನ ರೈತನೊಬ್ಬ ಬರಗಾಲದಲ್ಲೂ ಬಂಗಾರದಂತಹ ಮಾವು ಬೆಳೆದು, ಇತರರಿಗೆ ಮಾದರಿಯಾಗಿದ್ದಾರೆ. ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಬಸವಂತಪ್ಪ ಅಗಡಿ ಎಂಬ ರೈತ ತಮ್ಮ ಒಂದು ಎಕರೆ ಜಮೀನಿನಲ್ಲಿ ಸುಮಾರು 30 ಮಾವಿನ ಮರಗಳನ್ನು ಬೆಳೆಸಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಹಚ್ಚಿದ ಈ ಮರಗಳು ಐದು ವರ್ಷಗಳಿಂದ ಫಸಲು ನೀಡಲಾರಂಭಿಸಿವೆ. ಕಳೆದ ನಾಲ್ಕು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಇವರ ಆದಾಯ ಅಧಿಕವಾಗುತ್ತಾ ಸಾಗುತ್ತಿದೆ.

ಉತ್ತಮ ಇಳುವರಿ ಉತ್ತಮ ಗಾತ್ರ ಹಾಗೂ ಉತ್ತಮ ರುಚಿಗೆ ಇವರ ತೋಟದ ಮಾವು ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಕಾರಣ ಅವರು ಅನುಸರಿಸುವ ಸಾವಯವ ಪದ್ದತಿ. ಬಸವಂತಪ್ಪ ಕಳೆದ ಹಲವು ವರ್ಷಗಳಿಂದ ಮಾವಿಗೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಪ್ರತಿವರ್ಷ ಎರಡು ಬಾರಿ ತಿಪ್ಪೆಗೊಬ್ಬರ ಕೋಳಿಗೊಬ್ಬರ ಮತ್ತು ಜೀವಾಮೃತ ಇರುವ ಸ್ಲರಿಯನ್ನು ಇವರು ಮಾವಿನಗಿಡಗಳಿಗೆ ನೀಡುತ್ತಾರೆ.

ಮಾವು ಬೆಳೆ

ಜೊತೆಗೆ ಮಾವಿನ ಮರಕ್ಕೆ ಜೈವಿಕ ಔಷಧಿಗಳ ಸಿಂಪಡಣೆ ಮಾಡುವ ಮೂಲಕ ಮರಗಳನ್ನು ಉತ್ತಮವಾಗಿ ನೋಡಿಕೊಂಡಿದ್ದಾರೆ. ಪರಿಣಾಮ ಇವರು ಮಾವಿನತೋಟದ ಮಾವಿನ ಮರಗಳು ಟೊಂಗೆಗಳು ಮುರಿದು ಬೀಳುತ್ತೆವೇನೋ ಎಂಬಂತೆ ಬಾಸವಾಗುತ್ತವೆ. ಒಂದೊಂದು ಸಲ ಅಧಿಕ ಇಳುವರಿಯಿಂದ ಮಾವಿನ ಟೊಂಗೆಗಳು ಮುರಿದ ಉದಾಹರಣಿಗಳೂ ಇವೆ. ಇದಕ್ಕೆಲ್ಲ ನಮ್ಮ ಸಾವಯುವ ಕೃಷಿ ಪದ್ದತಿ ಕಾರಣ ಎನ್ನುತ್ತಾರೆ ಬಸವಂತಪ್ಪ.

ನಿರಂತರ ಮಾವಿನ ಪೋಷಣೆ:ಬಸವಂತಪ್ಪ ಮಾವು ಫಸಲು ಕೊಡಲಿ ಅಥವಾ ಕೊಡದೇ ಇರಲಿ ಅವುಗಳ ಪೋಷಣೆಯನ್ನು ಮಾತ್ರ ಮರೆಯುವುದಿಲ್ಲ. ಮಳೆಗಾಲ ಹೊರತುಪಡಿಸಿ ಬೇಸಿಗೆ ಕಾಲದಲ್ಲಿ ಪ್ರತಿ 15 ದಿನಕ್ಕೊಮ್ಮೆ ಬಸವಂತಪ್ಪ ಮಾವಿನಮರಗಳಿಗೆ ನೀರುಣಿಸುತ್ತಾರೆ. ಮಾವು ಚಿಗುರಿದಾಗ, ಮಾವು ನೆನೆಬಿಟ್ಟಾಗ, ಮಾವು ಮಿಡಿಗಾಯಿಗೆ ಬಂದಾಗ ಮತ್ತು ಮಾವು ಉತ್ತಮ ಗಾತ್ರ ಹೊಂದುವಾಗ ಹೆಚ್ಚಿನ ಒತ್ತು ನೀಡುತ್ತಾರೆ.

ಚಿಗುರಿದ ಟೊಂಗೆಗಳು ನೆನೆಬಿಡುವಂತೆ ನೆನೆಬಿಟ್ಟ ಟೊಂಗೆಗಳಲ್ಲಿ ಕಾಯಿಯಾಗುವಂತೆ ಚಿಕ್ಕಚಿಕ್ಕಗಾತ್ರದ ಕಾಯಿಗಳು ದೊಡ್ಡದಾಗುವಂತೆ ಬಸವಂತಪ್ಪ ನೋಡಿಕೊಳ್ಳುತ್ತಾರೆ. ಪರಿಣಾಮ ಇವರ ತೋಟದಲ್ಲಿನ ಮಾವಿನ ಫಸಲು ಉತ್ತಮವಾಗಿ ಬರುತ್ತಿದೆ. ಬೇರೆ ತೋಟಗಳಲ್ಲಿ ಇಳುವರಿ ಕಡಿಮೆಯಾದರೂ ಇವರ ತೋಟದಲ್ಲಿ ಮಾತ್ರ ಇಳುವರಿ ಕಡಿಮೆಯಾಗಿಲ್ಲ.

ಮಾವು ಬೆಳೆ

ಕಳೆದ ವರ್ಷ 30 ಮರಗಳಿಂದ 5 ಟನ್ ಮಾವು ಮಾರಿದ್ದಾರೆ. ಈ ವರ್ಷ ಸಹ 5 ಟನ್‌ಗಿಂತ ಅಧಿಕ ಮಾವು ಬರುವ ನಿರೀಕ್ಷೆಯಲ್ಲಿದ್ದಾರೆ. ಬಸವಂತಪ್ಪ ಮಾವಿತ ತೋಟವನ್ನು ಈಗಾಗಲೇ 2 ಲಕ್ಷ ರೂಪಾಯಿ ನೀಡಿ ಗುತ್ತಿಗೆದಾರರು ಗುತ್ತಿಗೆ ಪಡೆದುಕೊಂಡಿದ್ದಾಠೆ. ವರ್ಷದಿಂದ ವರ್ಷಕ್ಕೆ ಗುತ್ತಿಗೆ ನೀಡುವ ಹಣ ಅಧಿಕವಾಗುತ್ತಿದೆ. ಕೇವಲ 30 ಮರಗಳಿಗೆ ಮಾವು ವ್ಯಾಪಾರಿಗಳು ಎರಡು ಲಕ್ಷ ರೂಪಾಯಿ ನೀಡಿ ಇವರ ಮಾವು ಖರೀದಿ ಮಾಡುತ್ತಾರೆ.

ಕೃಷಿ ತಜ್ಞರಿಂದ ಸಲಹೆ:ಇನ್ನು ಇವರು ತಮ್ಮ ತೋಟಕ್ಕೆ ಸಾವಯುವ ತಜ್ಞ ಗಂಗಾಧರ ಕುಲಕರ್ಣಿ ಮಾರ್ಗದರ್ಶನ ಪಡೆಯುತ್ತಾರೆ. ಬೇಸಿಗೆಯಲ್ಲಿ ಮಾವು ಮರಗಳ ರಕ್ಷಣೆ ಔಷಧಿ ಸಿಂಪಡಣೆ ಗೊಬ್ಬರ ಸೇರಿದಂತೆ ಸಂಪೂರ್ಣ ಸಾವಯುವ ಮಾಹಿತಿಯನ್ನು ಗಂಗಾಧರ ರೈತ ಬಸವಂತಪ್ಪಗೆ ನೀಡುತ್ತಾರೆ. ಸಾಮಾನ್ಯವಾಗಿ ಒಂದು ವರ್ಷ ಮಾವು ಫಸಲು ಬಂದಷ್ಟು ಮುಂದಿನ ವರ್ಷ ಬರುವುದಿಲ್ಲ ಎನ್ನುವ ಮಾತಿದೆ.

ಆದರೆ ಬಸವಂತಪ್ಪ ಸಾವಯುವ ಕೃಷಿ ಅಳವಡಿಸಿಕೊಂಡಿದ್ದರಿಂದ ವರ್ಷದಿಂದ ವರ್ಷಕ್ಕೆ ಇವರ ಇಳುವರಿ ಅಧಿಕವಾಗುತ್ತಿದೆ ಎನ್ನುತ್ತಾರೆ ಗಂಗಾಧರ. ಇಳಿವಯಸಿನಲ್ಲಿ ಸಹ ಬಸವಂತಪ್ಪ ತೋಟದ ಮೇಲೆ ಆಸಕ್ತಿ ವಹಿಸಿ ಅಧಿಕ ಇಳುವರಿ ಪಡೆಯುತ್ತಿರುವುದು ಉಳಿದ ರೈತರಿಗೆ ಮಾದರಿಯಾಗಿದೆ.

ಇದನ್ನೂ ಓದಿ:ಅಡಕೆ ತೋಟದಲ್ಲಿ ಕಾಳುಮೆಣಸು ಬೆಳೆದು ಯಶಸ್ವಿಯಾದ ಹಾವೇರಿ ರೈತ - a farmer grew pepper

Last Updated :Apr 29, 2024, 1:27 PM IST

ABOUT THE AUTHOR

...view details