ಕರ್ನಾಟಕ

karnataka

ಅರಣ್ಯ ಇಲಾಖೆ ಮರಳಿ ಭೂಮಿ ಪಡೆಯುತ್ತಾರೆ ಎಂಬ ಭಯ, ಆತ್ಮಹತ್ಯೆಗೆ ಶರಣಾದ ರೈತ

By ETV Bharat Karnataka Team

Published : Feb 24, 2024, 4:31 PM IST

Updated : Feb 24, 2024, 7:06 PM IST

ಅರಣ್ಯ ಇಲಾಖೆಯವರು ಭೂಮಿ ಕಿತ್ತುಕೊಳ್ಳುತ್ತಾರೆ ಎಂಬ ಭಯದಿಂದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಈ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

farmer committed suicide  forest department  land issue  ಅರಣ್ಯ ಇಲಾಖೆ  ಆತ್ಮಹತ್ಯೆಗೆ ಶರಣಾದ ರೈತ
ಅರಣ್ಯ ಇಲಾಖೆಯವರು ಭೂಮಿ ಕಿತ್ತುಕೊಳ್ಳುತ್ತಾರೆ ಎಂದು ಹೆದರಿ ಆತ್ಮಹತ್ಯೆಗೆ ಶರಣಾದ ರೈತ

ಮೈಸೂರು :ಮೂರ್ನಾಲ್ಕು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತರಿಗೆ ಅರಣ್ಯ ಇಲಾಖೆಯ ಪ್ರಕಟಣೆ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ರೈತನೊಬ್ಬ ಭೂಮಿ ಕಳೆದೊಗುತ್ತದೆ ಎಂಬ ಭಯದಿಂದ ತನ್ನ ಮಾವಿನ ತೋಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಎಚ್​ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿ ಗ್ರಾಮದಲ್ಲಿ ನಡೆದಿದೆ. ಆದ್ರೆ ಅರಣ್ಯ ಇಲಾಖೆ ಹೇಳೋದೆ ಬೇರೆ.

ಏನಿದು ಪ್ರಕರಣ:ಮೃತರನ್ನು ಕಣಿಯನಹುಂಡಿ ಗ್ರಾಮದ ರೈತ ಗಿರಿ ಗೌಡ (48) ಎಂದು ಗುರುತಿಸಲಾಗಿದೆ. ಗಿರಿ ಗೌಡ ಅವರು ತಮ್ಮ ಹಿರಿಯರಿಂದ ಬಂದ ಎರಡು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿದ್ದರು. ಆ ಜಮೀನಿನಲ್ಲಿ 70 ಮಾವಿನ ಮರಗಳನ್ನು ಹಾಕಿಕೊಂಡು ಹಾಗೂ ಇತರ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತಿಚೆಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ಅರಣ್ಯ ವ್ಯವಸ್ಥಾಪಕ ಅಧಿಕಾರಿ ಅವರು, ತಮ್ಮ ಬಳಿ ಇರುವ ದಾಖಲೆಗಳನ್ನು ನೀಡುವಂತೆ ಕಣಿಯನಹುಂಡಿಯ ಹಲವು ಸ್ಥಳಗಳಲ್ಲಿ ಪ್ರಕಟಣೆ ಅಂಟಿಸಿದ್ದರು.

ಗ್ರಾಮದಲ್ಲಿ ಪ್ರಕಟಣೆ ನೋಡಿ ಆತ್ಮಹತ್ಯೆ : ಕಣಿಯನಹುಂಡಿಯ ರೈತ ಗಿರಿ ಗೌಡ ಎರಡು ಎಕರೆ ಮಾವಿನ ತೋಟ ಹೊಂದಿದ್ದು, ಆ ತೋಟಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಅವರ ಬಳಿ ಇರಲಿಲ್ಲ ಎನ್ನಲಾಗ್ತಿದೆ. ಇದರಿಂದ ತಲಾತಲಾಂತರಿಂದ ಬಂದ ಬಂದ ಭೂಮಿ ಕೈ ತಪ್ಪಿ ಹೋಗುತ್ತದೆ ಎಂಬ ಭಯ ಕಾಡುತ್ತಿತ್ತು. ಇನ್ನು ಕೆಲವು ದಿನಗಳಲ್ಲಿ ಜಮೀನನ್ನು ಅರಣ್ಯ ಇಲಾಖೆಯವರು ಸ್ವಾಧೀನ ಪಡಿಸಿಕೊಳ್ಳುತ್ತಾರೆ ಎಂಬ ಭಯ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ರೈತ ಗಿರಿ ಗೌಡ ಕಳೆದ ಮಂಗಳವಾರ ತಮ್ಮ ಜಮೀನಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಕುಟುಂಬಸ್ಥರು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ರೈತ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಜೊತೆಗೆ ತಮ್ಮ ಜಮೀನನ್ನು ಅರಣ್ಯ ಇಲಾಖೆಯವರು ಕಿತ್ತುಕೊಳ್ಳಬಾರದು ಎಂದು ಕುಟುಂಬಸ್ಥರು ಹಾಗೂ ರೈತರು ಕೆಆರ್ ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.

ಪತ್ನಿ ಹೇಳಿದ್ದೇನು: ಜಮೀನು ವಿಚಾರಕ್ಕೆ ನನ್ನ ಪತಿ ಗಿರಿ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವು ಆ ಜಮೀನನ್ನು ಹಲವಾರು ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದೇವೆ. ಅಲ್ಲಿ ಮಾವಿನ ತೋಟ ಮಾಡಿದ್ದೇವೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದೇವೆ. ಅದಕ್ಕಾಗಿ 10 ಲಕ್ಷ ರೂಪಾಯಿ ಸಾಲ ಆಗಿದೆ. ಈಗ ಆ ಸಾಲ ತೀರಿಸಬೆಕೆಂಬಷ್ಟರಲ್ಲಿ ಈ ರೀತಿ ಆಗಿದೆ. ಏನು ಮಾಡುವುದು ಎಂಬುದೇ ತಿಳಿಯುತ್ತಿಲ್ಲ. ಗ್ರಾಮದ ಕೆಲ ಸ್ಥಳಗಳಲ್ಲಿ ಫಾರೆಸ್ಟ್​ನವರು ಪ್ರಕಟಣೆ ಅಂಟಿಸಿ ಹೋಗಿದ್ದರಂತೆ. ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮ ಜಮೀನನ್ನು ಉಳಿಸಿಕೊಡಿ ಎಂದು ಗಿರಿಗೌಡ ಅವರ ಪತ್ನಿ ಜಯಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.

ಗ್ರಾಮಸ್ಥರು ಹೇಳುವುದೇನು: ಅರಣ್ಯ ಇಲಾಖೆಯವರು ಬಂದು ಊರಿನ ದೇವಸ್ಥಾನಗಳಲ್ಲಿ, ಅಂಗಡಿಗಳಲ್ಲಿ, ರೋಡ್​ನಲ್ಲಿ ಪ್ರಕಟಣೆ ಅಂಟಿಸಿ ಹೋಗಿದ್ದರು. ಜನಗಳು ಮಾತನಾಡುವುದನ್ನ ಕೇಳಿಸಿಕೊಂಡ ಗಿರಿ ಗೌಡರು ಭೂಮಿ ಕೈ ಬಿಟ್ಟು ಹೋಗುತ್ತದೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅವರು ಸುಮಾರು 10 ಲಕ್ಷ ಸಾಲ ಮಾಡಿಕೊಂಡಿದ್ದರು. ಅವರಿಗೆ ಆ ಎರಡು ಎಕರೆ ಭೂಮಿ ಅಷ್ಟೇ ಜೀವನಕ್ಕೆ ದಾರಿ ಆಗಿದೆ. ಅದು ಬಿಟ್ರೆ ಅವರಿಗೆ ಮತ್ತೇನು ಆಸರೆ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಅರಣ್ಯ ಇಲಾಖೆ ಸ್ಪಷ್ಟನೆ ಏನು:ಕಣಿಯನಹುಂಡಿ ಗ್ರಾಮದ ರೈತ ಗಿರಿ ಗೌಡ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ಅರಣ್ಯ ಇಲಾಖೆಯ ನೋಟಿಸ್​ಗೆ ಹೆದರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗುತ್ತಿರುವುದು ಕಂಡುಬಂದಿರುತ್ತದೆ. ಕಣಿಯನಹುಂಡಿ ಗ್ರಾಮದ ಸರ್ವೆ ನಂಬರ್ 8, 115, 132 &156 ರ ಒಟ್ಟು 465 ಹೆಕ್ಟೇರ್ ಪ್ರದೇಶವನ್ನು "ಮೀಸಲು ಅರಣ್ಯ ಪ್ರದೇಶ" ವನ್ನಾಗಿ ಮಾಡುವ ಸಲುವಾಗಿ ಕರ್ನಾಟಕ ಸರ್ಕಾರದಿಂದ ನಿವೃತ್ತ ಉಪವಿಭಾಗ ಅಧಿಕಾರಿ ಅವರನ್ನು (Assistant commissioner -AC) "ಅರಣ್ಯ ವ್ಯವಸ್ಥಾಪನಾಧಿಕಾರಿ"ಯಾಗಿ ನೇಮಿಸಲಾಗಿರುತ್ತದೆ.

ವಾಸ್ತವವಾಗಿ ಈ ರೀತಿ ಅರಣ್ಯ ಇಲಾಖೆಯಿಂದ ಯಾವುದೇ ನೊಟೀಸ್ ನೀಡಿರುವುದಿಲ್ಲ. ಸದರಿ ಅಧಿಕಾರಿಗಳು ದಿ. 25.01.2024 ರಂದು ನಿಯಮಾನುಸಾರ ಮೀಸಲು ಅರಣ್ಯ ಘೋಷಣೆಯಿಂದ ಬಾಧಿತರಾಗುವ ಎಲ್ಲಾ ರೈತರು-ಸಾರ್ವಜನಿಕರ ಅಹವಾಲುಗಳನ್ನು-ಕ್ಲೇಮುಗಳನ್ನು ಸ್ವೀಕರಿಸುವ ಸಲುವಾಗಿ ಘೋಷಣೆಯನ್ನು ಹೊರಡಿಸಿ ಮೂರು ತಿಂಗಳ ಸಮಯಾವಕಾಶವನ್ನು ನೀಡಿರುತ್ತಾರೆ.

ಈ ಪ್ರಕ್ರಿಯೆಯು ಯಾವುದೇ ರೀತಿ ಅರಣ್ಯ ಇಲಾಖೆಯ ಕಾರ್ಯ ವ್ಯಾಪ್ತಿಗೆ ಒಳಪಡುವುದಿಲ್ಲ. ಅರಣ್ಯ ಇಲಾಖೆಯಿಂದಲೂ ಈಗಾಗಲೇ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿರುತ್ತದೆ. ರೈತರು-ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯ ಗೊಂದಲಗಳಿಗೆ ಒಳಗಾಗದೇ ತಮ್ಮ ಅಹವಾಲುಗಳು-ಕ್ಲೇಮುಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ನೀಡಿರುವ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿರುತ್ತದೆ ಎಂದು ಮೈಸೂರು ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ:ರೈತರ ಪ್ರತಿಭಟನೆ: ಇಂದು ದೇಶಾದ್ಯಂತ ಕ್ಯಾಂಡಲ್ ಮೆರವಣಿಗೆ, ದೆಹಲಿ ಚಲೋ ನಿರ್ಧಾರ ಫೆಬ್ರವರಿ 29ಕ್ಕೆ ಮುಂದೂಡಿಕೆ

Last Updated : Feb 24, 2024, 7:06 PM IST

ABOUT THE AUTHOR

...view details