ಬೆನೋನಿ(ದಕ್ಷಿಣ ಆಫ್ರಿಕಾ):ಇಂದು 2024ರ ಅಂಡರ್-19 ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ದಕ್ಷಿಣ ಆಫ್ರಿಕಾದ ಬೆನೋನಿಯ ವಿಲೋಮೂರ್ ಪಾರ್ಕ್ನಲ್ಲಿ ಪಂದ್ಯಕ್ಕೆ ಅಖಾಡ ಸಿದ್ದವಾಗಿದೆ. 2012 ಮತ್ತು 2018ರ ನಂತರ ಪ್ರಶಸ್ತಿಗಾಗಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಸೋಲಿಸಿದರೆ, ಪಾಕಿಸ್ತಾನವನ್ನು ಆಸ್ಟ್ರೇಲಿಯಾ ಮಣಿಸಿತ್ತು.
2023ರ ಏಕದಿನ ವಿಶ್ವಕಪ್ ಫೈನಲ್ (ಸೀನಿಯರ್ ತಂಡ) ಪಂದ್ಯದಲ್ಲಿ ಆಸೀಸ್ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸೋಲುಂಡಿತ್ತು. ಪಂದ್ಯ ವೀಕ್ಷಿಸಿದ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಿರಾಶೆ ಅನುಭವಿಸಿದ್ದರು.
ಪಂದ್ಯದ ಮುನ್ನಾ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಭಾರತ ತಂಡ ನಾಯಕ ಉದಯ್ ಸಹರಾನ್, "ನಾವು ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿಲ್ಲ. ಪ್ರಸ್ತುತ ಆಟದ ಬಗ್ಗೆ ಗಮನಹರಿಸಿದ್ದೇವೆ. ಈ ಹಿಂದೆ ಏನಾಗಿದೆ ಎಂಬುದನ್ನು ನೋಡುವುದಿಲ್ಲ" ಎಂದರು.
ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಅದ್ಭುತವಾಗಿ ಆಡಿರುವ ಭಾರತಕ್ಕೆ ಆಸೀಸ್ ಕಠಿಣ ಸವಾಲಾಗಿದೆ. ಅಷ್ಟು ಸುಲಭವಾಗಿ ಕಾಂಗೂರು ಪಡೆ ಸೋಲೊಪ್ಪಿಕೊಳ್ಳುವುದಿಲ್ಲ. ಈ ಟೂರ್ನಿಯಲ್ಲಿ ನಾಯಕ ಹಗ್ ವೈಬ್‌ಗೆನ್, ಆರಂಭಿಕ ಹ್ಯಾರಿ ಡಿಕ್ಸನ್, ವೇಗದ ಬೌಲರ್ಸ್ ಟಾಮ್ ಸ್ಟ್ರಾಕರ್ ಮತ್ತು ಕ್ಯಾಲಮ್ ವಿಡ್ಲರ್ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಭಾರತ ಪರ ಉದಯ್ ಸಹಾರನ್, ಸಚಿನ್ ದಾಸ್, ಮುಶೀರ್ ಖಾನ್, ಉಪನಾಯಕ ಸೌಮಿ ಕುಮಾರ್ ಪಾಂಡೆ, ಅರ್ಶಿನ್ ಕುಲಕರ್ಣಿ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಾಣಬೇಕಿದ್ದ ಪಂದ್ಯದಲ್ಲಿ ಸಚಿನ್ ದಾಸ್ ಮತ್ತು ನಾಯಕ ಆಸರೆಯಾಗಿ ಪಂದ್ಯ ಗೆಲ್ಲಿಸಿರುವುದು ಭಾರತ ಆರನೇ ಅಂಡರ್-19 ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹೆಚ್ಚಿಸಿದೆ.