ಕರ್ನಾಟಕ

karnataka

U19 World Cup: ಬಾಂಗ್ಲಾ ವಿರುದ್ಧ ಭಾರತಕ್ಕೆ 84 ರನ್​ಗಳ ಗೆಲುವು

By ETV Bharat Karnataka Team

Published : Jan 20, 2024, 11:05 PM IST

ಬಾಂಗ್ಲಾದೇಶ ವಿರುದ್ಧ 84 ರನ್‌ ಮೂಲಕ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

india-start-u19-world-cup-campaign-with-84-run-victory-against-bangladesh
U19 World Cup: ಬಾಂಗ್ಲಾ ವಿರುದ್ಧ ಭಾರತಕ್ಕೆ 84 ರನ್​ಗಳ ಗೆಲುವು

ಬ್ಲೂಮ್‌ಫೌಂಟೇನ್ (ದಕ್ಷಿಣ ಆಫ್ರಿಕಾ): 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಆದರ್ಶ್ ಸಿಂಗ್, ಉದಯ್ ಸಹರನ್ ಅರ್ಧಶತಕ ಹಾಗೂ ಸೌಮಿ ಪಾಂಡೆ ಉತ್ತಮ ಬೌಲಿಂಗ್​ ನೆರವಿನಿಂದ ಬಾಂಗ್ಲಾದೇಶ ತಂಡವನ್ನು 84 ರನ್​ಗಳ ಅಂತರದಿಂದ ಭಾರತ ತಂಡ ಮಣಿಸಿದೆ.

ಇಲ್ಲಿನ ಮ್ಯಾಂಗೌಂಗ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 251 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ 167 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಭಾರತದ ಪರ ಸೌಮಿ ಪಾಂಡೆಯ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಮುಶೀರ್ ಎರಡು ವಿಕೆಟ್‌ಗಳನ್ನು ಪಡೆದು ಸುಲಭ ಗೆಲುವಿಗೆ ಕಾರಣರಾದರು.

ಭಾರತಕ್ಕೆ ಆದರ್ಶ್-ಉದಯ್ ಆಸರೆ:ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆದರ್ಶ್‌ ಸಿಂಗ್‌ ಜೊತೆ ಇನಿಂಗ್ಸ್ ಆರಂಭಿಸಿದ ಅರ್ಶಿನ್‌ ಕುಲಕರ್ಣಿ (7 ರನ್) ಮತ್ತು ಭರವಸೆಯ ಬ್ಯಾಟರ್‌ ಮುಷೀರ್ ಖಾನ್‌ (3 ರನ್) ಹೆಚ್ಚು ಹೊತ್ತು ನಿಲ್ಲದೇ ವಿಕೆಟ್​ ಒಪ್ಪಿಸಿದರು. ಆದರೆ, ಈ ವೇಳೆ ಆದರ್ಶ್‌ ಸಿಂಗ್‌ ಜೊತೆಗೂಡಿದ ನಾಯಕ ಉದಯ್ ಸಿಂಗ್ ಉತ್ತಮ ಇನ್ನಿಂಗ್ಸ್​ ಕಟ್ಟಿದರು.

ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟ ಆದರ್ಶ್‌ ಮತ್ತು ಉದಯ್ ಮೂರನೇ ವಿಕೆಟ್​ಗೆ 116 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು. ಇದರ ನಡುವೆ ಉತ್ತಮವಾಗಿ ಆಡುತ್ತಿದ್ದ ಆದರ್ಶ್‌ 96 ಎಸೆತಗಳಲ್ಲಿ ಆದರ್ಶ್‌ 76 ರನ್‌ ಗಳಿಸಿ ಔಟಾದರು. ಮತ್ತೊಂದೆಡೆ, 94 ಬಾಲ್​ಗಳಲ್ಲಿ 64 ರನ್ ಗಳಿಸಿದ್ದ ಉದಯ್‌ ಸಹ ನಿರ್ಗಮಿಸಿದರು. ಬಳಿಕ ಕ್ರೀಸ್‌ಗಿಳಿದ ಪ್ರಿಯಾಂಶು ಮೊಲಿಯಾ (23 ರನ್), ಅರಾವೆಲ್ಲಿ ಅವನೀಶ್ (23 ರನ್) ಹಾಗೂ ಸಚಿನ್‌ ದಾಸ್‌ (ಅಜೇಯ 26 ರನ್) ಉಪಯಕ್ತ ಕಾಣಿಕೆ ನೀಡಿದರು.

ಇದರಿಂದ ತಂಡದ ಮೊತ್ತವನ್ನು 250ರ ಗಡಿ ದಾಟಿ, ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಬಾಂಗ್ಲಾ ಪರ ವೇಗಿ ಮರುಫ್ ಮೃಧಾ ಐದು ವಿಕೆಟ್ ಪಡೆದು ಟೀಂ ಇಂಡಿಯಾವನ್ನು 251 ರನ್​ಗೆ ಸೀಮಿತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಚೌಧರಿ ಮೊಹಮ್ಮದ್ ರಿಜ್ವಾನ್, ಮಹ್ಫುಜುರ್ ರೆಹಮಾನ್ ರಬ್ಬಿ ತಲಾ ವಿಕೆಟ್​ ಪಡೆದರು.

ಮತ್ತೊಂದೆಡೆ, ಭಾರತ ತಂಡದ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ ತಂಡವು 45.5 ಓವರ್​ಗಳಲ್ಲಿ 167 ರನ್‌ ಗಳಿಗೆ ಆಲೌಟ್​ ಆಗಿ ಸೋಲೊಪ್ಪಿಕೊಂಡಿತು. ವೇಗಿ ರಾಜ್‌ ಲಿಂಬಾನಿ ಮತ್ತು ಸ್ಪಿನ್ನರ್‌ ಸೌಮಿ ಪಾಂಡೆ ಮಾರಕ ಬೌಲಿಂಗ್​ ಪರಿಣಾಮವಾಗಿ ಬಾಂಗ್ಲಾ ತಂಡದ ಮೊತ್ತ 50 ರನ್‌ ಆಗುವಷ್ಟರಲ್ಲೇ ಅಗ್ರ ಕ್ರಮಾಂಕದ ನಾಲ್ವರ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು.

ಇದರ ನಡುವೆ ಮೊಹಮ್ಮದ್‌ ಶಿಯಾಬ್‌ ಜೇಮ್ಸ್‌ (54 ರನ್​) ಮತ್ತು ಆರಿಫುಲ್‌ ಇಸ್ಲಾಂ (41 ರನ್​) ರನ್​ ಬಾರಿಸಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಐದನೇ ವಿಕೆಟ್​ಗೆ ಈ ಜೋಡಿ 77 ರನ್‌ ಕಲೆಹಾಕಿತು. ಆದರೆ, ಈ ಜೊತೆಯಾಟವನ್ನು ಮುಷೀರ್ ಖಾನ್‌ ಮುರಿದರು. ಇದರೊಂದಿಗೆ ಬಾಂಗ್ಲಾದೇಶ ಮತ್ತೆ ಕುಸಿಯಲು ಶುರು ಮಾಡಿ, ಕೊನೆಗೆ 167 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಭಾರತ ಪರ ಸೌಮಿ ಪಾಂಡೆ ನಾಲ್ಕು ವಿಕೆಟ್‌ ಪಡೆದು ಮಿಂಚಿದರೆ, ಮುಷೀರ್ ಖಾನ್‌ ಎರಡು ವಿಕೆಟ್‌, ರಾಜ್‌ ಲಿಂಬಾನಿ, ಅರ್ಶಿನ್‌ ಕುಲಕರ್ಣಿ ಹಾಗೂ ಪ್ರಿಯಾಂಶು ಮೊಲಿಯಾ ತಲಾ ವಿಕೆಟ್​ ಪಡೆದರು.

ABOUT THE AUTHOR

...view details