ಕರ್ನಾಟಕ

karnataka

"ಈ ಸಲವೂ ಕಪ್​ ನಮ್ದಲ್ಲ": ಆರ್​ಸಿಬಿಯ ಹೊಸ ಅಧ್ಯಾಯದಲ್ಲಿ ಹಳೆ ಚಾಳಿ, ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ - RCB Fans disappointed

By ETV Bharat Karnataka Team

Published : Apr 17, 2024, 11:24 AM IST

Updated : Apr 17, 2024, 12:03 PM IST

ಐಪಿಎಲ್​​ನಲ್ಲಿ ಆರ್​ಸಿಬಿ ನೀಡುತ್ತಿರುವ ಕೆಟ್ಟ ಪ್ರದರ್ಶನದಿಂದ ಪ್ಲೇಆಫ್​ ಹಂತಕ್ಕೆ ತಲುಪುವ ಅವಕಾಶ ಕ್ಷೀಣಿಸಿದ್ದು, ಈ ಬಾರಿಯೂ ಕಪ್​ ನಮ್ದಲ್ಲ ಎಂಬಂತಾಗಿದೆ. ಇದು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.

Etv Bharat
Etv Bharat

ಹೈದರಾಬಾದ್​:ಹೊಸ ಅಧ್ಯಾಯ ಆರಂಭಿಸುವುದಾಗಿ ಐಪಿಎಲ್​ ಆರಂಭಕ್ಕೂ ಮುನ್ನ ಘೋಷಿಸಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಶ್ವದ ಏಕೈಕ ಫ್ರಾಂಚೈಸಿಯ ತಂಡ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಇದು ಅಭಿಮಾನಿಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ.

ಸನ್​ರೈಸರ್ಸ್​ ಹೈದರಾಬಾದ್​ ತಂಡದ ಎದುರಿನ ಪಂದ್ಯವು ಅಭಿಮಾನಿಗಳ ಪಾಲಿಗೆ ಎಂದೂ ಮರೆಯಲಾಗದ ಕಹಿ ನೆನಪಾಗಿರಲಿದೆ. ಐಪಿಎಲ್​ ಅಲ್ಲದೇ, ಟಿ20 ಇತಿಹಾಸದಲ್ಲೇ ಯಾವ ತಂಡವೂ ಬಿಟ್ಟುಕೊಡದಷ್ಟು ರನ್​ಗಳನ್ನು ಚಚ್ಚಿಸಿಕೊಂಡಿತ್ತು. ಇದು ಆರ್​ಸಿಬಿ ಬೌಲರ್​ಗಳ ವೈಫಲ್ಯವಲ್ಲದೇ, ಇಡೀ ತಂಡದ ಮೇಲೂ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ. ಜೊತೆಗೆ ಆಡಳಿತ ಮಂಡಳಿ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

16 ವರ್ಷಗಳಿಂದ 'ಕಪ್​ ನಮ್ದೇ' ಎಂದು ಹಂಬಲಿಸುತ್ತಿರುವ ಅಭಿಮಾನಿಗಳಿಗೆ 17ನೇ ವರ್ಷವೂ 'ಕಪ್​ ನಮ್ದಲ್ಲ' ಎಂಬುದು ವಿಧಿತವಾಗಿದೆ. ತಂಡದ ಹೀನಾಯ ಸ್ಥಿತಿಗೆ ಆಡಳಿತ ಮಂಡಳಿಯೇ ಕಾರಣ ಎಂದು ಹೀಗಳೆಯುತ್ತಿದ್ದಾರೆ. ಹೀಗಾಗಿ, ತಂಡವನ್ನು ಬೇರೊಂದು ಮ್ಯಾನೇಜ್​ಮೆಂಟ್​ಗೆ ಮಾರಾಟ ಮಾಡಬೇಕು ಎಂದು ಬಿಸಿಸಿಐಗೆ ಕೋರಿಕೆ ಸಲ್ಲಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆ:ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಹೊರತುಪಡಿಸಿ ಯಾವೊಬ್ಬ ಆಟಗಾರ ಕೂಡ ಸ್ಥಿರ ಪ್ರದರ್ಶನ ನೀಡದೇ ಇರುವುದು ತಂಡ ಟ್ರೋಫಿ ಎತ್ತಿ ಹಿಡಿಯುವ ಆಸೆಯನ್ನು ಕೈಬಿಡುವಂತೆ ಮಾಡಿದೆ. ಇನ್ನೊಂದೆರಡು ಪಂದ್ಯ ಸೋತಲ್ಲಿ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಆಟಗಾರರ ಈಗಿನ ಪ್ರದರ್ಶನ ನೋಡುತ್ತಿದ್ದರೆ, ನಿಜವಾಗುವ ಎಲ್ಲ ಸಾಧ್ಯತೆಯೂ ಇದೆ. ಆರ್​ಸಿಬಿಯ ಕೆಟ್ಟ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಮತ್ತು ಆಕ್ರೋಶ ಸಹಜವಾಗಿಯೇ ವ್ಯಕ್ತವಾಗುತ್ತಿದೆ.

ಬೆಂಚ್​ನಲ್ಲಿ ₹47 ಕೋಟಿ:ಅಭಿಮಾನಿಗಳ ನಿರೀಕ್ಷೆ ಮತ್ತು ಮಹದಾಸೆಯನ್ನು ಪೂರೈಸಲು ಉತ್ತಮ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊರಬೇಕಿದ್ದ ಆಡಳಿತ ಮಂಡಳಿ ಪ್ರತಿ ವರ್ಷವೂ ಖರೀದಿಯಲ್ಲಿ ಎಡವುತ್ತಿದೆ. ಕೋಟಿಗಟ್ಟಲೆ ಹಣ ನೀಡಿ ಖರೀದಿಸಿದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದೆ ಇರುವುದೂ ಗಾಯದ ಮೇಲೆ ಬರೆ ಬಿದ್ದಂತಾಗಿದೆ. 17.5 ಕೋಟಿ ರೂಪಾಯಿಗೆ ಬಿಕರಿಯಾಗಿರುವ ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್​, 11.5 ಕೋಟಿಯ ಅಲ್ಜಾರಿ ಜೋಸೆಫ್​, 11 ಕೋಟಿಯ ಗ್ಲೆನ್ ಮ್ಯಾಕ್ಸ್​ವೆಲ್​, 7 ಕೋಟಿಗೆ ಖರೀದಿಯಾದ ಮೊಹಮದ್​ ಸಿರಾಜ್​ ಬಲು ನೀರಸ ಪ್ರದರ್ಶನ ನೀಡಿ ಬೆಂಚ್​ ಕಾಯುತ್ತಿದ್ದಾರೆ. ಇವರೆಲ್ಲರ ಮೊತ್ತ ತಂಡದ 100 ಕೋಟಿಯಲ್ಲಿ 47 ಕೋಟಿ ರೂಪಾಯಿ ಆಗಿದೆ. ಅದರಲ್ಲೂ ಮ್ಯಾಕ್ಸ್​ವೆಲ್​ ಅನಿರ್ದಿಷ್ಟ ವಿರಾಮ ಕೋರಿದ್ದಾರೆ.

ಆಡಳಿತ ಮಂಡಳಿ ಬದಲಿಸಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯೂ ಆಗಿರುವ, ಭಾರತೀಯ ಟೆನಿಸ್​ ದಿಗ್ಗಜ ಮಹೇಶ್​ ಭೂಪತಿ ತಂಡದ ಮ್ಯಾನೇಜ್​ಮೆಂಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ "ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಆರ್​ಸಿಬಿ ಆಡಳಿತ ಮಂಡಳಿ ಬದಲಿಸಿ. ಇತರ ಫ್ರಾಂಚೈಸಿಗಳು ವಹಿಸುವ ಕಾಳಜಿ ನಮ್ಮ ತಂಡದ ಮ್ಯಾನೇಜ್​ಮೆಂಟ್​ ಮಾಡುತ್ತಿಲ್ಲ. ಹೀಗಾಗಿ ಬಿಸಿಸಿಐ ಮಂಡಳಿಯನ್ನು ಬದಲಿಸಬೇಕು" ಎಂದು ಆಗ್ರಹಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು ಕೂಡ ಆರ್​ಸಿಬಿ ಪ್ರದರ್ಶನಕ್ಕೆ ಬೇಸರಿಸಿದ್ದು, ಶ್ರೇಷ್ಠ ಆಟಗಾರರನ್ನು ಹೊಂದಿದ್ದರೂ ತಂಡವಾಗಿ ಆಡಲು ಆರ್‌ಸಿಬಿ ವಿಫಲವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

2008 ರಿಂದ ಆರಂಭವಾಗಿ 16 ಸೀಸನ್​ಗಳನ್ನು ಮುಗಿಸಿರುವ ಕ್ರಿಕೆಟ್​ ಲೋಕದ ದೊಡ್ಡ ಟೂರ್ನಿಯಾದ ಐಪಿಎಲ್​ನಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಾತ್ರ ಒಂದು ಬಾರಿಯೂ ಟ್ರೋಫಿಯನ್ನು ಗೆದ್ದಿರದ ತಂಡಗಳಾಗಿವೆ.

ಇದನ್ನೂ ಓದಿ:ಆರ್​ಸಿಬಿ ತಂಡಕ್ಕೆ ಮತ್ತೊಂದು ಆಘಾತ: ಈ ಸ್ಫೋಟಕ ಬ್ಯಾಟರ್ ಐಪಿಎಲ್​ನಿಂದಲೇ ಔಟ್​ ಸಾಧ್ಯತೆ - Glenn Maxwell

Last Updated :Apr 17, 2024, 12:03 PM IST

ABOUT THE AUTHOR

...view details