ಕರ್ನಾಟಕ

karnataka

ಡೋಪಿಂಗ್​ ಟೆಸ್ಟ್​ಗೆ ಒಳಗಾಗದ ಬಜರಂಗ್​ ಪೂನಿಯಾ ಅಮಾನತು: ನಾಡಾ ವಿರುದ್ಧ ಪೈಲ್ವಾನ್​ ಗರಂ - wrestler Bajrang Punia

By ETV Bharat Karnataka Team

Published : May 5, 2024, 5:15 PM IST

ಪ್ಯಾರಿಸ್​ ಒಲಿಂಪಿಕ್ಸ್​ಗೂ ಮುನ್ನ ಡೋಪಿಂಗ್​​ ಟೆಸ್ಟ್​ಗೆ ಒಳಗಾಗದ ಭಾರತದ ತಾರಾ ಕುಸ್ತಿಪಟು ಬಜರಂಗ್​ ಪೂನಿಯಾ ಮೇಲೆ ನಾಡಾ ಅಮಾನತು ಶಿಕ್ಷೆ ವಿಧಿಸಿದೆ.

ಅಮಾನತಾದ ಕುಸ್ತಿಪಟು ಬಜರಂಗ್​ ಪೂನಿಯಾ
ಅಮಾನತಾದ ಕುಸ್ತಿಪಟು ಬಜರಂಗ್​ ಪೂನಿಯಾ ((Source: File Photo))

ನವದೆಹಲಿ:ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯೂಎಫ್​ಐ) ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಹೋರಾಟ ನಡೆಸಿದ್ದ, ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್​ ಪೂನಿಯಾ ವಿರುದ್ಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮಹತ್ವದ ಕ್ರಮ ಕೈಗೊಂಡಿದೆ.

ಪ್ಯಾರಿಸ್​ ಒಲಿಂಪಿಕ್ಸ್​ಗೆ ಆಯ್ಕೆಗೂ ಮೊದಲು ಕ್ರೀಡಾಪಟುಗಳ ಡೋಪಿಂಗ್​ ಪರೀಕ್ಷೆ ನಡೆಸಲಾಗಿದ್ದು, ಮಾರ್ಚ್ 10 ರಂದು ಸೋನಿಪತ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದರು. ಇದರಿಂದ ಕುಸ್ತಿಪಟು ಬಜರಂಗ್​ ಪೂನಿಯಾ ವಿರುದ್ಧ ವಿಶ್ವ ಉದ್ದೀಪನ ಮದ್ದು ತಡೆ ಘಟಕದ (ವಾಡಾ) ನಿರ್ದೇಶನದ ಮೇರೆಗೆ ನಾಡಾ ಅವರನ್ನು ತಾತ್ಕಾಲಿಕ ಅಮಾನತಿನಲ್ಲಿಟ್ಟಿದೆ.

ಬಜರಂಗ್​ ಅವರು ಡೋಪಿಂಗ್​ ಟೆಸ್ಟ್​ನಲ್ಲಿ ಭಾಗವಹಿಸದ ಕಾರಣ ಅವರನ್ನು ಒಲಿಂಪಿಕ್ಸ್​ ಅರ್ಹತಾ ಟ್ರಯಲ್ಸ್​ ಮತ್ತು ಯಾವುದೇ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ಅಮಾನತು ಮಾಡಿ ಆದೇಶಿಸಿದೆ. ಡೋಪಿಂಗ್​ ಪರೀಕ್ಷೆಯಲ್ಲಿ ಭಾಗವಹಿಸಲು ಸೂಚಿಸಿದರೂ ಕುಸ್ತಿಪಟು ಗೈರಾಗಿದ್ದರು. ಈ ಬಗ್ಗೆ ಮೇ 7ರೊಳಗೆ ಉತ್ತರ ನೀಡುವಂತೆ ಏಪ್ರಿಲ್​ 23 ರಂದು ವಾಡಾ ನೋಟಿಸ್​ ನೀಡಿದೆ.

ಪರೀಕ್ಷೆ ನಿರಾಕರಿಸಿಲ್ಲ ಎಂದ ಪೂನಿಯಾ:ತಮ್ಮನ್ನು ನಾಡಾ ಅಮಾನತುಗೊಳಿಸಿದ್ದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಕುಸ್ತಿಪಟು ಬಜರಂಗ್ ಪೂನಿಯಾ, ಡೋಪಿಂಗ್ ಪರೀಕ್ಷೆಗೆ ಮಾದರಿಗಳನ್ನು ನೀಡಲು ಎಂದಿಗೂ ನಿರಾಕರಿಸಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಡೋಪಿಂಗ್​ ಟೆಸ್ಟ್​ಗೆ ನೀಡಲಾಗಿರುವ ಕಿಟ್​ಗಳ ಗುಣಮಟ್ಟ ಮತ್ತು ಅವುಗಳ ಅವಧಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಎಕ್ಸ್​ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಡೋಪ್​ ಟೆಸ್ಟ್​ಗೆ ಮಾದರಿಯನ್ನು ನೀಡಲು ನಿರಾಕರಿಸಿಲ್ಲ. ಪರೀಕ್ಷಾ ಕಿಟ್​ಗಳ ಅವಧಿ ಮುಗಿದಿದ್ದವು. ಅವುಗಳ ಬಗ್ಗೆ ಉತ್ತ ನೀಡಲು ನಾನು ಕೋರಿದ್ದೆ. ಈಗಲೂ ನಾನು ಪರೀಕ್ಷೆಗೆ ಸಿದ್ಧನಿದ್ದೇನೆ. ನೋಟಿಸ್​​ಗೆ ನಮ್ಮ ವಕೀಲರು ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಡೋಪ್ ಸಂಗ್ರಹಿಸುವ ಕಿಟ್‌ಗಳ ಅವಧಿ ಮುಗಿದಿರುವ ಬಗ್ಗೆ ಪೂನಿಯಾ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ನಾಡಾ ಅಧಿಕಾರಿಗಳು ಟೀಕಿಸಿದ್ದು, ಮಾದರಿಯನ್ನು ನೀಡುವಂತೆ ಸೂಚಿಸಿದ್ದರು. ಆದರೆ, ಪೂನಿಯಾ ಅವರು ನಿರ್ದೇಶನ ಪಾಲಿಸದೆ ಈಗ ಅಮಾನತಾಗಿದ್ದಾರೆ.

ಇದನ್ನೂ ಓದಿ:ಅಕ್ಟೋಬರ್​ 3 ರಿಂದ ಮಹಿಳಾ ಟಿ20 ವಿಶ್ವಕಪ್​ ಹಂಗಾಮ: ಭಾರತದ ಪಂದ್ಯಗಳು ಹೀಗಿವೆ - Womens T20 World Cup

ABOUT THE AUTHOR

...view details