ಕರ್ನಾಟಕ

karnataka

ಪಾಕಿಸ್ತಾನದಲ್ಲಿ ಮುಗಿಯದ 'ಅರಾಜಕೀಯ': ಮತ್ತೆ ಹೊಸದಾಗಿ ಚುನಾವಣೆಯ ಸುಳಿವು! ನವಾಜ್ ಷರೀಫ್‌ಗೆ ಪ್ರಧಾನಿ ಪಟ್ಟ? - Pakistan Politics

By PTI

Published : May 2, 2024, 5:44 PM IST

ಪಾಕಿಸ್ತಾನದಲ್ಲಿ ಹೊಸದಾಗಿ ಚುನಾವಣೆ ನಡೆಯಬಹುದು ಮತ್ತು ನವಾಜ್ ಷರೀಫ್ ಮತ್ತೆ ಪ್ರಧಾನಿಯಾಗಬಹುದು ಎಂದು ಪಿಎಂಎಲ್-ಎನ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

Senior PML-N leader signals possibility of early elections in Pakistan to
Senior PML-N leader signals possibility of early elections in Pakistan to (IANS)

ಲಾಹೋರ್: ನವಾಜ್ ಷರೀಫ್ ಅವರು ದಾಖಲೆಯ ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗುವುದಕ್ಕೆ ಅನುಕೂಲವಾಗುವಂತೆ ಮುಂದಿನ ಒಂದೆರಡು ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಬಹುದು ಎಂದು ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಹಿರಿಯ ನಾಯಕರೊಬ್ಬರು ಮಹತ್ವದ ಹೇಳಿಕೆ ನೀಡಿದ್ದಾರೆ.

ಖಾಸಗಿ ಟಿವಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಹಿರಿಯ ಮುಖಂಡ ಜಾವೇದ್ ಲತೀಫ್ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಎರಡು ಅಥವಾ ಐದು ವರ್ಷ ಹೀಗೆ ಯಾವಾಗಲಾದರೂ ಚುನಾವಣೆ ನಡೆಯಬಹುದು. ಒಟ್ಟಾರೆಯಾಗಿ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಲತೀಫ್ ಹೇಳಿದರು. ಆದರೆ ಪ್ರಸ್ತುತ ಅವರ ಸಹೋದರನೇ ಪ್ರಧಾನಿಯಾಗಿರುವ ಮಧ್ಯೆ ಎರಡು ವರ್ಷಗಳಲ್ಲಿ ನವಾಜ್ ಹೇಗೆ ಪ್ರಧಾನಿಯಾಗಬಹುದು ಎಂದು ಕೇಳಲಾದ ಪ್ರಶ್ನೆಗೆ, ಅದು ಚುನಾವಣೆಯ ಮೂಲಕ ಸಾಧ್ಯವಾಗಬಹುದು ಮತ್ತು ಚುನಾವಣೆ ನಾಳೆಯೇ ನಡೆಯಬಹುದು ಎಂದು ಲತೀಫ್ ನುಡಿದರು.

"ಒಂದು ಕಾಲದಲ್ಲಿ ನವಾಜ್ ಷರೀಫ್ ನಾಲ್ಕನೇ ಅವಧಿಗೆ ಪ್ರಧಾನಿಯಾಗುವ ಹಾದಿಗೆ ಅಡ್ಡಿಪಡಿಸಿದವರು ಸಹ ಈಗ ಅವರ ಬೆಂಬಲಕ್ಕೆ ನಿಲ್ಲಬಹುದು. ಅನೇಕ ಬಾರಿ ಮೂರನೇ ಎರಡರಷ್ಟು ಬಹುಮತ ಹೊಂದಿರುವ ಪಕ್ಷ ಕೂಡ ಅಧಿಕಾರದಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸಲು ಹೆಣಗಾಡಬೇಕಾಗುತ್ತದೆ. ಅಂಥದ್ದರಲ್ಲಿ ಈಗಿನ ಸಮ್ಮಿಶ್ರ ಸರ್ಕಾರಕ್ಕೆ ಒಂದೇ ಒಂದು ಪಕ್ಷ ಬೆಂಬಲ ಹಿಂತೆಗೆದುಕೊಂಡಲ್ಲಿ ಸರ್ಕಾರ ಅಪಾಯಕ್ಕೆ ಸಿಲುಕಬಹುದು" ಎಂದು ಹಿರಿಯ ಪಿಎಂಎಲ್-ಎನ್ ಮುಖಂಡ ಲತೀಫ್ ಹೇಳಿದರು. ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ಪಕ್ಷದ ನಾಯಕನಾಗಿದ್ದರೂ ತನ್ನದೇ ಪಕ್ಷದ ಸರ್ಕಾರದ ವಿರುದ್ಧ ಲತೀಫ್ ವಾಗ್ದಾಳಿ ನಡೆಸುವುದಕ್ಕೆ ಹೆಸರಾಗಿದ್ದಾರೆ.

74 ವರ್ಷದ ನವಾಜ್ ಷರೀಫ್ ನಾಲ್ಕನೇ ಬಾರಿಗೆ ಪ್ರಧಾನಿಯಾಗಲು ಸಜ್ಜಾಗಿದ್ದರು. ಆದರೆ ಫೆಬ್ರವರಿ 8 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸ್ಪಷ್ಟ ಬಹುಮತವನ್ನು ಪಡೆಯಲು ವಿಫಲವಾಗಿತ್ತು. ಹೀಗಾಗಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅವರು ತಮ್ಮ 72 ವರ್ಷದ ಕಿರಿಯ ಸಹೋದರ ಮತ್ತು ಪ್ರಸ್ತುತ ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ಅವರಿಗೆ ಕೇಂದ್ರದಲ್ಲಿ ಆರು ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ಅವಕಾಶ ನೀಡಿದ್ದರು. ಸ್ವಯಂ ಘೋಷಿತ ದೇಶಭ್ರಷ್ಟನಾಗಿ ಲಂಡನ್​ನಲ್ಲಿದ್ದ ನವಾಜ್ ಷರೀಫ್ ಅವರು 2023 ರ ಅಕ್ಟೋಬರ್​ನಲ್ಲಿ ಮತ್ತೆ ಪ್ರಧಾನಿಯಾಗುವ ಅಭಿಲಾಷೆಯೊಂದಿಗೆ ಪಾಕಿಸ್ತಾನಕ್ಕೆ ಮರಳಿದ್ದರು.

ಇದನ್ನೂ ಓದಿ : ಶಾಶ್ವತ ಕದನವಿರಾಮಕ್ಕೆ ಬೇಡಿಕೆ ಇಟ್ಟ ಹಮಾಸ್: ಶಾಂತಿ ಮಾತುಕತೆಗೆ ಮತ್ತೆ ಅಡ್ಡಿ - israel hamas war

ABOUT THE AUTHOR

...view details