ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತೆ ಸರಿದಾರಿಗೆ ತರಲು ಪಾಕಿಸ್ತಾನಕ್ಕೆ ಮತ್ತಷ್ಟು ಸಾಲ ನೀಡಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ.
ರಿಯಾದ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ವಿಶೇಷ ಸಭೆಯ ಸಂದರ್ಭದಲ್ಲಿ ಶೆಹಬಾಜ್ ಷರೀಫ್ ಅವರು ಕ್ರಿಸ್ಟಲಿನಾ ಜಾರ್ಜೀವಾ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವರ್ಷ ಪಾಕಿಸ್ತಾನವು ಐಎಂಎಫ್ನಿಂದ 3 ಬಿಲಿಯನ್ ಡಾಲರ್ ಸ್ಟ್ಯಾಂಡ್ ಬೈ ವ್ಯವಸ್ಥೆ (ಎಸ್ಬಿಎ)ಯ ಸಾಲ ಪಡೆಯಲು ಬೆಂಬಲ ನೀಡಿದ್ದಕ್ಕಾಗಿ ಶೆಹಬಾಜ್ ಅವರು ಜಾರ್ಜೀವಾ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಸಾಲದ ಅಂತಿಮ ಕಂತುಗಳ ಬಿಡುಗಡೆ ಹತ್ತಿರವಾಗುತ್ತಿದೆ.
ಪಾಕಿಸ್ತಾನವು ಕಳೆದ ವರ್ಷ ಜೂನ್ನಲ್ಲಿ ಐಎಂಎಫ್ನಿಂದ 3 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಡೆದುಕೊಂಡಿತ್ತು. ಈ ಮೂಲಕ ಸಾಲಬಾಕಿ ರಾಷ್ಟ್ರವಾಗುವ ಅಪಾಯವನ್ನು ತಪ್ಪಿಸಿಕೊಂಡಿತ್ತು. ಪ್ರಸ್ತುತ ಈ 3 ಬಿಲಿಯನ್ ಡಾಲರ್ ಸ್ಟ್ಯಾಂಡ್ ಬೈ ವ್ಯವಸ್ಥೆ (ಎಸ್ಬಿಎ)ಯ ಸಾಲದ ಕಂತು ಬಿಡುಗಡೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ದೀರ್ಘಾವಧಿಯ ಸಾಲ ನೀಡಬೇಕು ಎಂದು ಪಾಕಿಸ್ತಾನ ಐಎಂಎಫ್ಗೆ ಬೇಡಿಕೆ ಇಟ್ಟಿದೆ.
ಕಳೆದ ವರ್ಷದಲ್ಲಿ ಗಳಿಸಲಾದ ಆರ್ಥಿಕ ಲಾಭಗಳನ್ನು ಕಾಯ್ದಿಟ್ಟುಕೊಳ್ಳುವಂತೆ ಮತ್ತು ದೇಶದ ಆರ್ಥಿಕ ಬೆಳವಣಿಗೆಯ ಪಥವು ಸಕಾರಾತ್ಮಕವಾಗಿ ಮುನ್ನಡೆಯಲು ಸಾಧ್ಯವಾಗುವಂತೆ ಪಾಕಿಸ್ತಾನಕ್ಕೆ ಐಎಂಎಫ್ನಿಂದ ಮತ್ತೊಂದು ಹಂತದ ಸಾಲ ನೀಡುವ ಬಗ್ಗೆ ಪ್ರಧಾನಿ ಶರೀಫ್ ಮತ್ತು ಜಾರ್ಜೀವಾ ಚರ್ಚಿಸಿದರು ಎಂದು ಪ್ರಧಾನಿ ಕಚೇರಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ತಮ್ಮ ಸರ್ಕಾರದ ಬದ್ಧತೆಯನ್ನು ಷರೀಫ್ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನಕ್ಕೆ ಹೊಸ ಸಾಲದ ಯೋಜನೆಗಾಗಿ ಜುಲೈ ಆರಂಭದಲ್ಲಿ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಬರಬಹುದು ಎಂದು ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಹೇಳಿದ್ದಾರೆ.
ಸ್ಥೂಲ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಮತ್ತು ದೀರ್ಘಕಾಲದಿಂದ ಬಾಕಿ ಇರುವ ಮತ್ತು ಕ್ಲಿಷ್ಟಕರ ಸುಧಾರಣೆಗಳನ್ನು ಕಾರ್ಯಗತಗೊಳಿಸಲು ಕನಿಷ್ಠ ಮೂರು ವರ್ಷಗಳ ಅವಧಿಯವರೆಗೆ ಸಾಲ ನೀಡುವಂತೆ ಕೋರುವುದಾಗಿ ಅವರು ಹೇಳಿದ್ದಾರೆ. ಆದಾಗ್ಯೂ ಸಾಲದ ಮೊತ್ತ ಎಷ್ಟಿರಲಿದೆ ಎಂಬುದನ್ನು ತಿಳಿಸಲು ಔರಂಗಜೇಬ್ ನಿರಾಕರಿಸಿದ್ದಾರೆ. ಈ ಸಾಲ ಮಂಜೂರಾದರೆ ಇದು ಪಾಕಿಸ್ತಾನ ಐಎಂಎಫ್ನಿಂದ ಪಡೆಯುವ 24ನೇ ಬೇಲ್ ಔಟ್ ಸಾಲವಾಗಲಿದೆ.
ಇದನ್ನೂ ಓದಿ : ಮತ್ತೊಂದು ಹಂತದ ಕದನವಿರಾಮ ಮಾತುಕತೆಗಾಗಿ ಕೈರೊ ತಲುಪಿದ ಹಮಾಸ್, ಇಸ್ರೇಲ್ ನಿಯೋಗಗಳು - ISRAEL HAMAS TALKS