ಟೆಲ್ ಅವೀವ್( ಇಸ್ರೇಲ್): ಹಮಾಸ್ ಜೊತೆ ಪರೋಕ್ಷ ಮಧ್ಯಸ್ಥಿಕೆ ಮಾತುಕತೆ ನಡೆಸಲು ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ನೇತೃತ್ವದ ಇಸ್ರೇಲ್ನ ಹಿರಿಯ ಅಧಿಕಾರಿಗಳ ನಿಯೋಗ ಸೋಮವಾರ ಕೈರೋ ತಲುಪಲಿದೆ. ಅಲ್ಲದೆ ಹಮಾಸ್ ನಿಯೋಗ ಕೂಡ ಸೋಮವಾರ ಕೈರೋಗೆ ಬರಲಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಒತ್ತೆಯಾಳುಗಳ ಬಿಡುಗಡೆ ಮತ್ತು ತಾತ್ಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಕತಾರ್ ಮತ್ತು ಈಜಿಪ್ಟ್ನ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯಲಿವೆ.
ಅರಬ್ ಮಾಧ್ಯಮಗಳ ಪ್ರಕಾರ, ಕನಿಷ್ಠ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ತಾತ್ವಿಕವಾಗಿ ಒಪ್ಪಿಕೊಂಡಿದೆ. ಒತ್ತೆಯಾಳುಗಳಲ್ಲಿ ಮಹಿಳೆಯರು, ವೃದ್ಧರು, ರೋಗಿಗಳು ಮತ್ತು ಐವತ್ತು ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಸೇರಿದ್ದಾರೆ. ಇದಕ್ಕೆ ಬದಲಾಗಿ ಇಸ್ರೇಲಿ ಜೈಲುಗಳಲ್ಲಿರುವ ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಹಮಾಸ್ ಒತ್ತಾಯಿಸಿದೆ. ಇದರಲ್ಲಿ ಕೊಲೆ ಸೇರಿದಂತೆ ಗಂಭೀರ ಅಪರಾಧಗಳಿಗಾಗಿ ಬಂಧಿಸಲ್ಪಟ್ಟವರು ಕೂಡ ಸೇರಿದ್ದಾರೆ.
ಗಾಜಾ ಪಟ್ಟಿಯಿಂದ ಸೇನಾಪಡೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಮಧ್ಯವರ್ತಿಗಳಿಗೆ ತಿಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಒತ್ತೆಯಾಳುಗಳ ಬಿಡುಗಡೆಯಿಂದ ನುಣುಚಿಕೊಳ್ಳದಂತೆ ಇಸ್ರೇಲ್ ಈಗಾಗಲೇ ಹಮಾಸ್ಗೆ ಸೂಚಿಸಿದೆ. ಒಂದು ವೇಳೆ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪದಿದ್ದಲ್ಲಿ ರಫಾದಲ್ಲಿ ನೆಲದ ಕಾರ್ಯಾಚರಣೆ ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.