ಕರ್ನಾಟಕ

karnataka

ಕೌಟುಂಬಿಕ ದೌರ್ಜನ್ಯ 'ರಾಷ್ಟ್ರೀಯ ಬಿಕ್ಕಟ್ಟು' ಎಂದ ಆಸ್ಟ್ರೇಲಿಯಾ ಪ್ರಧಾನಿ ಅಲ್ಭನೀಸ್​ - Domestic Violence

By ETV Bharat Karnataka Team

Published : Apr 29, 2024, 4:30 PM IST

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆಗೆ ಬಲವಾದ ಕಾನೂನು ಜಾರಿಗೆ ಬರಬೇಕಿದೆ ಎಂದು ಆಗ್ರಹಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್‌ ಮಾತನಾಡಿದ್ದಾರೆ.

Australias Prime Minister Anthony Albanese described domestic violence as a national crisis
Australias Prime Minister Anthony Albanese described domestic violence as a national crisis

ಆಸ್ಟ್ರೇಲಿಯಾ: ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಗಳನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್,​​ "ಇದೊಂದು ರಾಷ್ಟ್ರೀಯ ಬಿಕ್ಕಟ್ಟು" ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಬಲವಾದ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಲಿಂಗಾಧಾರಿತ ದೌರ್ಜನ್ಯ ತಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಭಾನುವಾರವೂ ಕೂಡ ವಿವಿಧ ನಗರಗಳಲ್ಲಿ ಸಾವಿರಾರು ಹೋರಾಟಗಾರರು ಪ್ರತಿಭಟನೆ ನಡೆಸುವ ಪ್ರಧಾನಿ ಗಮನ ಸೆಳೆದಿದ್ದಾರೆ. 2024ರಲ್ಲಿ ಕೌಟುಂಬಿಕ ದೌರ್ಜನ್ಯಗಳಿಂದ ದೇಶದಲ್ಲಿ 27 ಮಹಿಳೆಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಈ ಪ್ರತಿಭಟನೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "ಲಿಂಗಾಧಾರಿತ ಹಿಂಸಾಚಾರ ತಡೆಗೆ ಆಸ್ಟ್ರೇಲಿಯಾ ಸರ್ಕಾರ ಎಲ್ಲಾ ಹಂತದಲ್ಲೂ ಕ್ರಮಕ್ಕೆ ಮುಂದಾಗಲಿದೆ" ಎಂದು ಭರವಸೆ ನೀಡಿದರು. "ಕೇವಲ ಸಹಾನುಭೂತಿ ಅಲ್ಲ. ಇದಕ್ಕೂ ಹೆಚ್ಚಿನ ಕ್ರಮದ ಅವಶ್ಯತೆ ಇದೆ. ಪ್ರತಿ ನಾಲ್ಕು ದಿನಕ್ಕೆ ಒಬ್ಬ ಮಹಿಳೆ ಕುಟುಂಬ ದೌರ್ಜನ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ

ವಾರಾಂತ್ಯದಲ್ಲಿ ಇಂಥ ದೌರ್ಜನ್ಯಗಳನ್ನು ಖಂಡಿಸಿ 17ಕ್ಕೂ ಹೆಚ್ಚು ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ಮೆಲ್ಬೋರ್ನ್​ನಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಸರ್ಕಾರದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, "ನಮಗೆ ಕ್ರಮ ಬೇಕಾಗಿದೆ. ನೀವು ಈ ಸಂಬಂಧ ಕೆಲಸ ಮಾಡಿ, ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲೇಬೇಕು" ಎಂದು ಒತ್ತಾಯಿಸಿದ್ದಾರೆ.

"ನಮ್ಮ ವರ್ತನೆ ಬದಲಾಗಬೇಕು. ಕಾನೂನು ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಕೌಟುಂಬಿಕ ದೌರ್ಜನ್ಯ ಎಂಬುದು ಇಡೀ ಸಮಾಜದ ಸಮಸ್ಯೆ. ಪುರುಷರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು" ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ದೌರ್ಜನ್ಯ: ಕಟ್ಟುನಿಟ್ಟಿನ ನಿಯಮ ಜಾರಿಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್​

ABOUT THE AUTHOR

...view details