ಕರ್ನಾಟಕ

karnataka

'ಕನ್ನಡಕ್ಕೆ ದೈವಿಕ ಶಕ್ತಿಯಿದೆ, ನಾನು ರಾಜ್​ ಅಭಿಮಾನಿ': ಮಲಯಾಳಂನ ಖ್ಯಾತ ನಟ - Manoj K Jayan

By ETV Bharat Karnataka Team

Published : May 1, 2024, 2:08 PM IST

'ರಂಗಸ್ಥಳ' ಎಂಬ ನೂತನ ಚಿತ್ರದ ಟೈಟಲ್ ಲಾಂಚ್ ಈವೆಂಟ್ ಅದ್ಧೂರಿಯಾಗಿ ಜರುಗಿದೆ.

Rangasthala Movie team
'ರಂಗಸ್ಥಳ' ಚಿತ್ರತಂಡ

ಜೀವನವೇ ಒಂದು ರಂಗಪ್ರಪಂಚ. ಅಲ್ಲಿ ಎಲ್ಲಾ ರೀತಿಯ ಏಳು-ಬೀಳುಗಳು, ಪಾತ್ರಧಾರಿಗಳು ಕಣ್ಣ ಮುಂದೆ ಹಾದು ಹೋಗುತ್ತಾರೆ. ಅಂತಹದ್ದೇ ಒಂದು ವಿಭಿನ್ನ ಕಥೆ ತೆರೆ ಮೇಲೆ ಬರಲಿದೆ. ಅಘೋರ್ ಮೋಶನ್ ಪಿಚ್ಚರ್ಸ್ ಅಡಿಯಲ್ಲಿ ಡಾ. ರೇವಣ್ಣ ನಿರ್ಮಾಣದ 'ರಂಗಸ್ಥಳ' ಎಂಬ ನೂತನ ಚಿತ್ರದ ಟೈಟಲ್ ಲಾಂಚ್ ಈವೆಂಟ್​ ಜರುಗಿತು. ಈ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡ ಮಂಜುನಾಥ್, ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು. ಬಹುತೇಕ ಯುವ ಪ್ರತಿಭೆಗಳಿರುವ ಈ ಚಿತ್ರದ ಫಸ್ಟ್‌ ಲುಕ್ ಅನ್ನು ಅನಾವರಣ ಮಾಡಲಾಯಿತು.

ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಯುವ ಪ್ರತಿಭೆ ಈಶ್ವರ್ ನಿತಿನ್ ಅವರಿಗಿದು ಪ್ರಥಮ ಪ್ರಯತ್ನ. ಡೆಂಟಲ್ ವಿದ್ಯಾರ್ಥಿ ಆಗಿದ್ದ ನಿತಿನ್, ಎಲ್.ವಿ ಪ್ರಸಾದ್ ಫಿಲ್ಮ್ ಇನ್ಸ್ಟಿಟ್ಯೂಟ್​ನಲ್ಲಿ ತರಬೇತಿ ಪಡೆದು ಒಂದಷ್ಟು ಕಿರುಚಿತ್ರ, ಆ್ಯಡ್ ಫಿಲಂನಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ.

'ರಂಗಸ್ಥಳ' ಚಿತ್ರತಂಡ

ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು, ನಮ್ಮ ಪುತ್ತೂರು, ಸುಳ್ಯ ಭಾಗದ ಭಾಷೆ, ಸೊಗಡು, ಆಚಾರ-ವಿಚಾರ, ಕಲೆ ಜೊತೆಗೆ ಬದುಕಿನ ಸುತ್ತಲಿನ ನೈಜಕ್ಕೆ ಪೂರಕ ಎನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಂಗಸ್ಥಳ ಎಂದರೆ ನನ್ನ ಪ್ರಕಾರ ಒಂದು ವೇದಿಕೆ. ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಗೆ ಬರುವ ಪಾತ್ರಧಾರಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ? ಯಾವ ರೀತಿ? ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ? ಈ ರಂಗಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.

'ರಂಗಸ್ಥಳ' ಚಿತ್ರತಂಡ

ಚಿತ್ರದ ನಾಯಕ ಒಬ್ಬ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್ ಕೆ ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು, ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಶೇ.40ರಷ್ಟು ಕೆಲಸ ಮುಗಿದಿದೆ. ಇಂದು ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದೇವೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡರು.

'ರಂಗಸ್ಥಳ' ಚಿತ್ರತಂಡ

ನಾಯಕನಾಗಿ ಅಭಿನಯಿಸುತ್ತಿರುವ ವಿಲೋಕ್ ರಾಜ್ ಚಿತ್ರರಂಗದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದು, ಸುಮಾರು 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರ್ಕಿ ಚಿತ್ರದ ನಂತರ ಈ 'ರಂಗಸ್ಥಳ' ವಿಲೋಕ್ ಚಿತ್ರಜೀವನಕ್ಕೆ ಒಂದು ತಿರುವು ನೀಡುವಂತಹ ಸಿನಿಮಾವಾಗಲಿದೆ ಅನ್ನೋದು ಒಂದು ನಂಬಿಕೆ. ಚಿತ್ರದಲ್ಲಿ ಯಕ್ಷಗಾನ ಕಲಾವಿದನಾಗಿ ಅಭಿನಯಿಸುತ್ತಿದ್ದು, ಇದಕ್ಕಾಗಿ ಮೂರು ತಿಂಗಳ ತರಬೇತಿಯನ್ನೂ ಪಡೆದಿದ್ದಾರೆ. ಹಾಗೆಯೇ ಭಾಷೆಯ ವಿಚಾರವಾಗಿಯೂ ಬಹಳ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು, ನಿರ್ದೇಶಕರು ಹೇಳಿದಂತೆ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕ ಡಾ. ರೇವಣ್ಣ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ನಾವು ಮೊದಲು ಸಣ್ಣ ಬಜೆಟ್ ಪ್ಲಾನ್ ಮಾಡಿಕೊಂಡಿದ್ದೆವು. ಆದರೆ ನಿರ್ಮಾಪಕರ ಪುತ್ರ ವಿನೋದ್ ಸಹಕಾರದೊಂದಿಗೆ ಈ ಚಿತ್ರ ಬೇರೆಯದ್ದೇ ರೂಪ ಪಡೆಯುತ್ತಿದೆ. ನಮ್ಮಂತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಕೋರಿದರು.

'ರಂಗಸ್ಥಳ' ಚಿತ್ರತಂಡ

ಇನ್ನೂ ಮಂಗಳೂರು ಬೆಡಗಿ ಶಿಲ್ಪ ಕಾಮತ್ ಶಾರ್ಟ್ ಮೂವೀಸ್​​ನಲ್ಲಿ ಅಭಿನಯಿಸಿದ್ದು, ಆಡಿಷನ್ ಮೂಲಕ ಈ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನೋಜ್ ಜೆಬೆ ಎಂಬ ಮಲಯಾಳಂ ಪ್ರತಿಭೆ ಕಾಮಿಡಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗೇ ಮತ್ತೋರ್ವ ಪ್ರತಿಭೆ ಸಂಧ್ಯಾ ಅರ್ಕೆರೆ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಬಹಳ ಪ್ರಮುಖ ಪಾತ್ರದಲ್ಲಿ ಮಲಯಾಳಂನ ಖ್ಯಾತನಟ ಮನೋಜ್. ಕೆ. ಜಯನ್ ಅಭಿನಯಿಸುತ್ತಿದ್ದಾರೆ. ಮಲಯಾಳಂ, ತಮಿಳು , ತೆಲುಗು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಎರಡು ಬಾರಿ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಮಾರು 2005ರಲ್ಲಿ ಉಗ್ರ ನರಸಿಂಹ ಚಿತ್ರದಲ್ಲಿ ಅಭಿನಯಿಸಿದ್ದ ಮನೋಜ್ ಸುಮಾರು 18 ವರ್ಷಗಳ ನಂತರ ಮತ್ತೊಮ್ಮೆ ರಂಗಸ್ಥಳ ಮೂಲಕ ವಿಲನ್ ಪಾತ್ರದಲ್ಲಿ ಕಾಡಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ವ್ಯಕ್ತಿಯಾಗಿ ಪಾತ್ರ ನಿರ್ವಹಿಸಿದ್ದು, ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬರುತ್ತಿದೆಯಂತೆ.

ಮಲಯಾಳಂ ಭಾಷೆಯಲ್ಲಿ ಮಾತನಾಡಿದ ನಟ, ಕನ್ನಡ ಭಾಷೆಗೆ ದೈವಿಕ ಶಕ್ತಿ ಇದೆ. ನಾನು ಡಾ. ರಾಜ್​ಕುಮಾರ್ ಅವರ ಅಭಿಮಾನಿ. ಅವರು ತಮ್ಮ ಚಿತ್ರಗಳಲ್ಲಿ ತಾವೇ ಹಾಡುತ್ತಾ ಅಭಿನಯಿಸುತ್ತಿದ್ದು ನನಗೆ ಬಹಳ ಸಂತೋಷವಾಗುತ್ತಿತ್ತು. ನನಗೆ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದಂತಹ ನಿರ್ಮಾಪಕ, ನಿರ್ದೇಶಕ ಹಾಗೂ ನನ್ನ ಸ್ನೇಹಿತರಿಗೆ ಧನ್ಯವಾದ ಎಂದರು.

ಚಿತ್ರದ ನಿರ್ಮಾಪಕ ಡಾ. ರೇವಣ್ಣ ಮಾತನಾಡುತ್ತಾ, ನಾನು ಮೂಲತಃ ರೈತ ಕುಟುಂಬದಿಂದ ಬಂದವನು. ವಿದ್ಯಾಭ್ಯಾಸದಲ್ಲಿ ಹೆಚ್ಚು ಗಮನ ಇಲ್ಲದಿದ್ದರೂ ಮನೆಯವರ ಒತ್ತಾಯದ ಮೇರೆಗೆ ಡಿಗ್ರಿ ಮುಗಿಸಿಕೊಂಡೆ. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ನನ್ನ ಎತ್ತರವನ್ನು ಗಮನಿಸಿದಂತಹ ಹಿರಿಯರೊಬ್ಬರು ನನಗೆ ವಾಲಿಬಾಲ್ ತಂಡಕ್ಕೆ ಸೇರಿಸಿದರು. ನಂತರ ನಾನು ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೂ ಆಡಿ ಪ್ರಶಸ್ತಿಯನ್ನು ಪಡೆದೆ. ನನ್ನ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಯು ಸಿಕ್ಕಿತು. ಸಿನಿಮಾ ಬಗ್ಗೆ ನಮಗೇನು ಹೆಚ್ಚು ಒಲವಿರಲಿಲ್ಲ. ಆದರೆ ನನ್ನ ಇಬ್ಬರು ಮಕ್ಕಳಾದ ವಿನೋದ್ ಕುಮಾರ್ ಜೈ ಕೀರ್ತಿ ಹಾಗೂ ವಿನಯ್ ಕುಮಾರ್ ಜೈ ಕೀರ್ತಿ ಅಮೆರಿಕಾದಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಿದರು. ಅದು ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಅವರ ಜೊತೆ ನಾನು ನನ್ನ ಮಡಿದಿ ಕೂಡ ಈಗ ಕೈಜೋಡಿಸಿದ್ದೇವೆ.

ಇದನ್ನೂ ಓದಿ:'ಕನ್ನಡ ಮಾಧ್ಯಮ'ಕ್ಕೆ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸಾಥ್ - Kannada Madhyama

ಈ ಒಂದು ಚಿತ್ರವನ್ನು ಸಾಫ್ಟ್ವೇರ್ ಕಂಪನಿಯ ಕಾರ್ಯ ವೈಖರಿಯಂತೆ ಬಹಳ ಅಚ್ಚುಕಟ್ಟಾಗಿ ಆರಂಭಿಸಿದ್ದೇವೆ. ಕಲಾವಿದರು, ತಂತ್ರಜ್ಞಾನರ ಆಯ್ಕೆಯ ಜೊತೆಗೆ ವಿಶೇಷವಾಗಿ ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಆಯ್ಕೆಯನ್ನು ನನ್ನ ಸುಪುತ್ರ ವಿನೋದ್ ಫೈನಲ್ ಮಾಡಿದ್ರು. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ತಂಡ ಅಚ್ಚುಕಟ್ಟಾಗಿ ಕೆಲಸ ಮಾಡ್ತಿದೆ. ನಮ್ಮಿಂದ 150 ಕುಟುಂಬಗಳಿಗೆ ಅನುಕೂಲವಾದರೆ ಸಾಕು. ನಮಗೆ ಲಾಭ ಬೇಡ, ಹಾಕಿದ ಹಣ ಬಂದರೆ ಸಾಕು. ನಮ್ಮ ಸಂಸ್ಥೆಯಿಂದ ಹೊಸಬರಿಗೆ ಮುಂದೆಯೂ ಅವಕಾಶ ಕೊಡುವ ಉದ್ದೇಶವಿದೆ. ಹಾಗೆಯೇ ವಾಲಿಬಾಲ್​ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆಯೂ ನನಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಸಲ್ಮಾನ್​​ ಕೇಸ್: ಬಿಷ್ಣೋಯ್ ಗ್ಯಾಂಗ್‌ಗೆ ಅಂತಾರಾಷ್ಟ್ರೀಯ ಗುಂಪುಗಳಿಂದ ನೆರವು? ಪರಿಶೀಲನೆ - Salman Khan Case

ಎನಾಷ್ ಒಲಿವೇರ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಜೂಡೋ ಸ್ಯಾಂಡಿ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಪ್ರಭಾಕರನ್ ರಾಮು ಕಲಾ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ಟ್ರೇಲರ್​​ ಬಿಡುಗಡೆ ಮಾಡಿ, ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

ABOUT THE AUTHOR

...view details