ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪರಮೇಶ್ ಗುಂಡ್ಕಲ್ ನಿರ್ದೇಶನಕ್ಕಿಳಿದಿದ್ದು, ಚಿತ್ರಕ್ಕೆ 'ಕೋಟಿ' ಎಂಬ ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಟೀಸರ್ನಿಂದ ಚಿತ್ರರಂಗದಲ್ಲಿ ಕುತೂಹಲ ಹುಟ್ಟಿಸಿರುವ 'ಕೋಟಿ' ಚಿತ್ರತಂಡ ಮೇ 1ನ್ನು ವಿಶೇಷವಾಗಿ ಆಚರಿಸಿತು.
ಮೇ ತಿಂಗಳ ಮೊದಲ ದಿನವನ್ನು ಮೇ ಡೇ, ಲೇಬರ್ ಡೇ, ವರ್ಕರ್ಸ್ ಡೇ ಎಂದೆಲ್ಲಾ ಕರೆಯಲಾಗುತ್ತದೆ. ಶ್ರಮಜೀವಿಗಳ ಅಥವಾ ಕಾರ್ಮಿಕರ ಸೇವೆಗೆ ಗೌರವ ಸೂಚಿಸುವ ಸಲುವಾಗಿ ಮೇ.1ರಂದು ಜಾಗತಿಕವಾಗಿ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ವನ್ನಾಗಿ ಆಚರಿಸಲಾಗುತ್ತದೆ.
ಅಂದರಂತೆ ಇಂದು ಕಾರ್ಮಿಕ ದಿನಾಚರಣೆ ಅಂಗವಾಗಿ ನಿರ್ದೇಶಕ ಪರಮ್ ತಮ್ಮ 'ಕೋಟಿ' ಚಿತ್ರದಲ್ಲಿ ಕೆಲಸ ಮಾಡಿರುವ ಕಾರ್ಮಿಕರನ್ನು ಒಳಗೊಂಡ ಕೋಟಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ, ನಾಡು ಕಟ್ಟುವ ಎಲ್ಲಾ ಕಾರ್ಮಿಕರಿಗೆ ಕೋಟಿ ವಂದನೆ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.
ನಾಯಕ ನಟ ಡಾಲಿ ಧನಂಜಯ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. 'ನಾಡು ಕಟ್ಟುತ್ತಿರುವ ಎಲ್ಲಾ ಕಾರ್ಮಿಕರಿಗೂ ಕಾರ್ಮಿಕರ ದಿನದ ಕೋಟಿ ಶುಭಾಶಯಗಳು' ಎಂದು ಅವರು ಕ್ಯಾಪ್ಷನ್ ಕೊಟ್ಟಿದ್ದಾರೆ.
ಕೋಟಿ ಕನಸು ಕಾಣುವ ಒಬ್ಬ ಕಾಮನ್‌ಮ್ಯಾನ್ ಕಥೆ ಇದು ಎನ್ನುವುದನ್ನು ಈಗಾಗಲೇ ಶೀರ್ಷಿಕೆ ಹೇಳಿದೆ. ಹಣಕ್ಕಾಗಿ ಒದ್ದಾಡುವ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ್ ಈಗಾಗಲೇ ನೀಡಿದ್ದಾರೆ.
ಇದನ್ನೂ ಓದಿ:ಶುಕ್ರವಾರದ ಹೈವೋಲ್ಟೇಜ್ ಐಪಿಎಲ್ ಪಂದ್ಯದ ಪ್ರಚಾರಕ್ಕೆ 'ಕಲ್ಕಿ'ಯ 'ಭೈರವ'ನಾಗಿ ಬಂದ ಪ್ರಭಾಸ್ - Prabhas
'ಹೊಯ್ಸಳ' ನಂತರ ಬರುತ್ತಿರುವ ನಟನ ಮೊದಲ ಕನ್ನಡ ಚಿತ್ರ ಇದು. ಈ ಮೂಲಕ ಡಾಲಿ ಧನಂಜಯ್ ಅವರ ಕನ್ನಡ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟರಾಕ್ಷಸ ಎಂದೇ ಜನಪ್ರಿಯರಾಗಿರುವ ಡಾಲಿ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲಾಗಬಹುದಾದ ಸಿನಿಮಾ ಎಂಬ ಅಭಿಪ್ರಾಯವಿದ್ದು, ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ:Photos; ಕೊಂಕಣಿ ಸಂಪ್ರದಾಯದಂತೆ ಅರುಣ್ ಜೊತೆ ಹಸೆಮಣೆ ಏರಿದ ಟಗರು ಪುಟ್ಟಿ ಮಾನ್ವಿತಾ - Manvita Kamath Wedding
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಸ್ವತಃ ಪರಮ್ ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್ನ ಜ್ಯೋತಿ ದೇಶಪಾಂಡೆ. ಈ ವರ್ಷ ಒಂದಾದ ಮೇಲೆ ಒಂದರಂತೆ ಹಿಟ್ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಹಾಡುಗಳನ್ನು ಸಂಯೋಜನೆ ಮಾಡುತ್ತಿದ್ದರೆ, ನೊಬಿನ್ ಪೌಲ್ ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾಗೆ ಅರುಣ್ ಬ್ರಹ್ಮನ್ ಛಾಯಾಗ್ರಹಣವಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಬೇಕೆಂಬ ಯೋಜನೆ ಚಿತ್ರತಂಡದ್ದು.