ಕರ್ನಾಟಕ

karnataka

ಯೋಗರಾಜ್ ಭಟ್ ನಿರ್ಮಾಣದ 'ಉಡಾಳ' ಸಿನಿಮಾಗೆ ಡಾಲಿ ಸಾಥ್

By ETV Bharat Karnataka Team

Published : Feb 2, 2024, 5:04 PM IST

ಯೋಗರಾಜ್ ಭಟ್ ನಿರ್ಮಾಣದ 'ಉಡಾಳ' ಸಿನಿಮಾಗೆ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ.

Dolly Dhananjay support to Udala movie
'ಉಡಾಳ' ಸಿನಿಮಾಗೆ ಡಾಲಿ ಸಾಥ್

ಕನ್ನಡ ಚಿತ್ರರಂಗದಲ್ಲಿ ವಿಕಟ ಕವಿ ಎಂದೇ ಜನಪ್ರಿಯರಾಗಿರುವ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್. ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಾಣುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ‌ಇದೀಗ ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣದಲ್ಲಿ ಸಿನಿಮಾವೊಂದು ಬರುತ್ತಿದೆ. ಎರಡು ವರ್ಷಗಳ ಹಿಂದೆ ಪದವಿ ಪೂರ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪೃಥ್ವಿ ಶಾಮನೂರು ಅಭಿನಯದ ನೂತನ ಚಿತ್ರದ ಶೀರ್ಷಿಕೆಯನ್ನು ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಬಿಡುಗಡೆ ಮಾಡಿ‌‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಗರಾಜ್ ಭಟ್ ಅವರ ಶಿಷ್ಯ ಅಮೋಲ್ ಪಾಟೀಲ್ ಈ 'ಉಡಾಳ' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

'ಉಡಾಳ' ಸಿನಿಮಾಗೆ ಡಾಲಿ ಸಾಥ್

ಡಾಲಿ ಧನಂಜಯ್‌ ಮಾತನಾಡಿ, ಮೊದಲು ಯೋಗರಾಜ್ ಭಟ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ಯೋಗರಾಜ್ ಭಟ್ ಅವರ ಕೊಡುಗೆ ಅಪಾರ. ನಮ್ಮ ಸಂಸ್ಥೆಯ ಮೊದಲ ಚಿತ್ರ ''ಬಡವ ರಾಸ್ಕಲ್"ಗೂ ಶೀರ್ಷಿಕೆ ಕೊಟ್ಟವರು ಅವರೇ. ಇನ್ನೂ ಪೃಥ್ವಿ ಶಾಮನೂರು ಒಳ್ಳೆಯ ಲವಲವಿಕೆ ಹುಡುಗ. ಅವರಿಗೂ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಿರ್ದೇಶಕ - ನಿರ್ಮಾಪಕ ಯೋಗರಾಜ್ ಭಟ್ ಮಾತನಾಡಿ, ಬಹಳ ಸಿನಿಮಾಗಳಲ್ಲಿ ನನ್ನ ಜೊತೆಗೆ ಅಮೋಲ್ ಕೆಲಸ ಮಾಡಿದ್ದಾನೆ. ಉತ್ತರ ಕರ್ನಾಟಕದ ವಿಜಾಪುರದ ಹುಡುಗ. ಚೆನ್ನಾಗಿ ಓದಿಕೊಂಡಿದ್ದಾನೆ. ಆತನಿಗೆ ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನ ಚಿತ್ರ ಮಾಡಬೇಕೆಂಬ ಆಸೆ ಮೊದಲಿಂದಲೂ ಇತ್ತು. ಈಗ ಕಾಲ ಕೂಡಿ ಬಂದಿದೆ.‌ ಈ ಚಿತ್ರವನ್ನು ನಮ್ಮೊಟ್ಟಿಗೆ ನಿರ್ಮಾಣ ಮಾಡಲು ರವಿ ಶಾಮನೂರು ಮುಂದಾಗಿದ್ದಾರೆ. ಉಡಾಳ ಶೀರ್ಷಿಕೆ ಪೃಥ್ವಿಗೆ ನಿಜಕ್ಕೂ ಸರಿ ಹೊಂದುತ್ತದೆ ಎಂದು ತಿಳಿಸಿದರು.

ಯೋಗರಾಜ್ ಭಟ್ ನಿರ್ಮಾಣದ ಸಿನಿಮಾ ಶೀರ್ಷಿಕೆ ಅನಾವರಣ

ನನಗೆ ಈ ಅವಕಾಶ ನೀಡಿರುವ ಗುರುಗಳಾದ ಯೋಗರಾಜ್ ಭಟ್ ಅವರಿಗೆ ಹಾಗೂ ರವಿ ಶಾಮನೂರು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ನಿರ್ದೇಶಕ ಅಮೋಲ್ ಪಾಟೀಲ್, "ಉಡಾಳ" ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಚಿತ್ರ. ಈ ತಿಂಗಳ ಕೊನೆಗೆ ವಿಜಾಪುರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಅಲ್ಲೇ ನಡೆಯಲಿದೆ. "ಉಡಾಳ" ನಾಗಿ ಪೃಥ್ವಿ ಶಾಮನೂರು ಅಭಿನಯಿಸುತ್ತಿದ್ದಾರೆ. ವಿಜಾಪುರದಲ್ಲಿ ಟೂರಿಸ್ಟ್ ಗೈಡ್ ಆಗಿ ಪಕ್ಯ ಎಂಬ ಪಾತ್ರದಲ್ಲಿ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ ಶ್ರೀನಿವಾಸ್ "ಉಡಾಳ"ನ ನಾಯಕಿ. ಒಳ್ಳೆಯ ತಂಡ ನನ್ನೊಂದಿಗಿದೆ. "ಉಡಾಳ" ಎಲ್ಲರೂ ಮೆಚ್ಚುವ ಒಳ್ಳೆಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮೊದಲ ಮಹಿಳಾ ಸ್ಪೈ ಸಿನಿಮಾಗೆ ಆಲಿಯಾ ಭಟ್ ನಾಯಕ ನಟಿ

ನನ್ನ ಹಿಂದಿನ ಚಿತ್ರಕ್ಕೆ ನೀವು ನೀಡಿದ ಬೆಂಬಲಕ್ಕೆ ಚಿರಋಣಿ. ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಧನಂಜಯ್ ಅವರಿಗೆ, ಅವಕಾಶ ನೀಡಿದ ಯೋಗರಾಜ್ ಭಟ್​​ ಸರ್, ನಿರ್ದೇಶಕರಿಗೆ ಹಾಗೂ ತಂದೆ ರವಿ ಶಾಮನೂರು ಅವರಿಗೆ ವಿಶೇಷ ಧನ್ಯವಾದ. ಈ ಚಿತದಲ್ಲಿ ನಂದು ಪಕ್ಕಾ "ಉಡಾಳ"ನ ಪಾತ್ರ ಎಂದು ನಾಯಕ ಪೃಥ್ವಿ ಶಾಮನೂರು ತಿಳಿಸಿದರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಹೃತಿಕ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ನಗ್ನಳಾಗುವ ಆಫರ್​ to ರಾಜ್ ಕುಂದ್ರಾ ಕೇಸ್​: ಪೂನಂ ಪಾಂಡೆ ವಿವಾದಗಳಿವು!

ನಾನು ಯೋಗರಾಜ್ ಭಟ್ ಅವರ ಜೊತೆ ಸೇರಿ ನಿರ್ಮಿಸುತ್ತಿರುವ ಎರಡನೇ ಚಿತ್ರವಿದು. ಅವಕಾಶ ನೀಡಿದ ಅವರಿಗೆ ಧನ್ಯವಾದಗಳು. ಮುಂದೆ ವರ್ಷಕ್ಕೆ ಒಂದು ಚಿತ್ರವನ್ನು ನಿರ್ಮಾಣ ಮಾಡುವ ಆಸೆ ಇದೆ ಎಂದು ನಿರ್ಮಾಪಕ ರವಿ ಶಾಮನೂರು ತಿಳಿಸಿದರು. ಈ ಚಿತ್ರಕ್ಕೆ ಚೇತನ್ ಸಂಗೀತ ನಿರ್ದೇಶಕರು. ಶಿವಶಂಕರ್ ನೂರಂಬಡ ಅವರ ಛಾಯಾಗ್ರಾಹಣವಿದೆ. ಸದ್ಯ ಪೋಸ್ಟರ್​ನಿಂದ ಉಡಾಳ ಗಮನ ಸೆಳೆಯಿತ್ತಿದೆ.

ABOUT THE AUTHOR

...view details