ಕರ್ನಾಟಕ

karnataka

ಶೀಘ್ರದಲ್ಲೇ ಸುಂದರ್ ಪಿಚೈ ಆಗಲಿದ್ದಾರೆ ಕೋಟ್ಯಧಿಪತಿ​​​​, ಗೂಗಲ್​ ಸಿಇಒ ಅಪರೂಪದ ದಾಖಲೆ.. ಏನದು ರೆಕಾರ್ಡ್​? - Sundar Pichai To Be Billionaire

By ETV Bharat Karnataka Team

Published : May 2, 2024, 7:47 AM IST

ಗೂಗಲ್ ಸಿಇಒ ಸುಂದರ್ ಪಿಚೈ ಶೀಘ್ರದಲ್ಲೇ ಬಿಲಿಯನೇರ್ ಆಗಲಿದ್ದಾರೆ. 2015 ರಲ್ಲಿ ಗೂಗಲ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿವರೆಗೂ ಅಂದರೆ ಕಳೆದ ಒಂಬತ್ತು ವರ್ಷಗಳಲ್ಲಿ ಕಂಪನಿಯನ್ನ ಅತ್ಯುನ್ನತ ಸ್ಥಾನಗಳತ್ತ ತೆಗೆದುಕೊಂಡು ಹೋಗಿದ್ದಾರೆ. ಅವರ ಈ ಶ್ರೇಯಸ್ಸಿಗಾಗಿ ತಕ್ಕ ಪ್ರತಿಫಲವನ್ನು ಕಂಪನಿಯೂ ನೀಡಿದೆ. ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಷೇರು ಬೆಲೆ ಇತ್ತೀಚೆಗೆ ಅತಿ ವೇಗವಾಗಿ ಏರಿಕೆ ಕಾಣುತ್ತಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಲ್ಫಾಬೆಟ್​​​ ಭಾರಿ ಲಾಭವನ್ನು ಗಳಿಸಿ ಮುನ್ನುಗ್ಗುತ್ತಿದೆ. ಇದು ಸುಂದರ್​​ ಪಿಚೈ ಅವರನ್ನು ಬಿಲಿಯೆನರ್​ ಆಗುವಂತೆ ಮಾಡಿದೆ.

google-ceo-sundar-pichai-nears-billionaire-status-by-bloombergs-report
ಶೀಘ್ರದಲ್ಲೇ ಸುಂದರ್ ಪಿಚೈ ಕೋಟ್ಯಧಿಪತಿ, ಗೂಗಲ್​ ಸಿಇಒ ಅಪರೂಪದ ದಾಖಲೆ.. ಏನದು ರೆಕಾರ್ಡ್​?

ನ್ಯೂಯಾರ್ಕ್​, ಅಮೆರಿಕ: ಗೂಗಲ್ ಮಾತೃಸಂಸ್ಥೆಯ ಇಬ್ಬರು ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರ ಹೆಸರುಗಳು ಈಗ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿವೆ. ಇದು ನಿಮಗೆಲ್ಲ ಗೊತ್ತೇ ಇದೆ. ಅಚ್ಚರಿಯ ವಿಷಯ ಎಂದರೆ, ಕಂಪನಿ ಸಿಇಒ ಸುಂದರ್ ಪಿಚೈ ಕೂಡಾ ಈಗ ಕೋಟ್ಯಧಿಪತಿಯಾಗಲು ಹೊರಟಿದ್ದಾರೆ. ಅಂದರೆ ಅವರ ನಿವ್ವಳ ಮೌಲ್ಯ ಸುಮಾರು 100 ಕೋಟಿ ಡಾಲರ್​ಗೆ ಏರಿಕೆ ಅಗಿದೆ. ಹೀಗಂತಾ 'ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್' ಬಹಿರಂಗಪಡಿಸಿದೆ.

ಸುಂದರ್​​ ಸುಂದರ ಸಾಧನೆ: ಕಂಪನಿಯ ಷೇರು ಬೆಲೆಗಳು ಏರಿಕೆ ಆದಾಗ ಸಾಮಾನ್ಯವಾಗಿ, ಕಂಪನಿಗಳ ಸಂಸ್ಥಾಪಕರ ಸಂಪತ್ತು ದ್ವಿಗುಣ ಇಲ್ಲವೇ ಬಾರಿ ಏರಿಕೆಗೆ ಕಾರಣವಾಗುತ್ತದೆ. ಇದು ಸಹಜ ಪ್ರಕ್ರಿಯೆ ಕೂಡಾ ಆಗಿದೆ. ಆದರೆ ಸಾಮಾನ್ಯ ಉದ್ಯೋಗಿಯಂತೆ ಗೂಗಲ್ ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇರಿಕೊಂಡ ಸುಂದರ್ ಪಿಚೈ ಅಸಾಧಾರಣ ಎತ್ತರಕ್ಕೆ ಏರಿದ್ದಾರೆ. ಅವರು ಗೂಗಲ್ ಕಂಪನಿಯಿಂದ ನಿಯೋಜಿಸಲಾದ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕಂಪನಿಯಲ್ಲಿ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಾ ಸಾಗಿದ್ದಾರೆ. ಗೂಗಲ್ ಕ್ರೋಮ್ ಮತ್ತು ಗೂಗಲ್ ಟೂಲ್ ಬಾರ್‌ಗಳನ್ನು ಅಭಿವೃದ್ಧಿಪಡಿಸಿ ನೆಟಿಜನ್‌ಗಳ ಗಮನ ಸೆಳೆದ ಕೀರ್ತಿ ಸುಂದರ್ ಅವರಿಗೆ ಸಲ್ಲುತ್ತದೆ. ಗೂಗಲ್ ಮಾಲೀಕರು ಸುಂದರ್​ ಪಿಚೈ ಅವರ ಈ ಸಾಧನೆಯನ್ನು ಗುರುತಿಸಿದ್ದಲ್ಲದೇ ಒಪ್ಪಿಕೊಂಡಿದ್ದಾರೆ.

ಹಾಗಾಗಿಯೇ ಸುಂದರ್ ಪಿಚೈ ಅವರಿಗೆ ಸಿಇಒ ಸ್ಥಾನವೂ ಸುಲಭವಾಗಿ ಒಲಿದು ಬಂದಿತ್ತು. ಇನ್ನು ಸಾಮಾನ್ಯ ಪ್ರಾಡಕ್ಟ್​ ಮ್ಯಾನೇಜರ್​ ಕಂಪನಿ ಸಿಇಒ ಆಗಿದ್ದು, ಬಹಳಷ್ಟು ಜನರನ್ನು ನಿಬ್ಬೆರಗಾಗಿಸಿದ್ದು ಕೂಡಾ ಸುಳ್ಳಲ್ಲ. 2015 ರಲ್ಲಿ ಗೂಗಲ್‌ನಲ್ಲಿ ಈ ಸ್ಥಾನವನ್ನು ಪಡೆದ ಸುಂದರ್, ಕಳೆದ ಒಂಬತ್ತು ವರ್ಷಗಳಲ್ಲಿ ಸಂಬಳ, ಇತರ ಭತ್ಯೆಗಳು ಮತ್ತು ಸವಲತ್ತುಗಳ ರೂಪದಲ್ಲಿ ಭಾರಿ ಮೊತ್ತದ ಸಂಬಳವನ್ನ ಅಂದರೆ ಆದಾಯವನ್ನೇ ಗಳಿಸಿಕೊಂಡಿದ್ದಾರೆ. ಅವರಿಗೆ ಮಂಜೂರಾಗಿದ್ದ ‘ಆಲ್ಫಾಬೆಟ್ ಕಂಪನಿ’ಯ ಷೇರುಗಳ ಬೆಲೆ ಕಳೆದ ಒಂಬತ್ತು ವರ್ಷಗಳಲ್ಲಿ ಭಾರಿ ಏರಿಕೆ ಕಂಡಿದೆ. ಆ ಮಟ್ಟದಲ್ಲಿ ಸುಂದರ್ ಅವರು ಗೂಗಲ್ ನ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಲು ವ್ಯಾಪಾರ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡಿ ಗಮನ ಸೆಳೆದಿದ್ದಾರೆ.

ಕಂಪನಿಯ ಷೇರು ಮೌಲ್ಯದಲ್ಲಿ ಭಾರಿ ಏರಿಕೆ: ಒಂದು ಅಂದಾಜಿನ ಪ್ರಕಾರ, ಗೂಗಲ್‌ನ ಮಾತೃಸಂಸ್ಥೆ 'ಆಲ್ಫಾಬೆಟ್' ಷೇರು ಮೌಲ್ಯವು ಶೇಕಡಾ 400 ಪಟ್ಟು ಹೆಚ್ಚಾಗಿದೆ. ಅದರಲ್ಲೂ ಗೂಗಲ್ ನ ಕ್ಲೌಡ್ ಕಂಪ್ಯೂಟಿಂಗ್ ಯೂನಿಟ್ ಕಳೆದ ಮೂರು ತಿಂಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಿದೆ. ಇದರ AI ಉಪಕರಣಗಳು ಜನಸಾಮಾನ್ಯರಿಂದ ಮೆಚ್ಚುಗೆ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಜನವರಿ 1 ರಿಂದ ಮಾರ್ಚ್ 31 ರ ನಡುವಿನ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆಲ್ಫಾಬೆಟ್ ಕಂಪನಿಯು ಅತ್ಯುತ್ತಮ ಆರ್ಥಿಕ ಫಲಿತಾಂಶವನ್ನೂ ಕೂಡಾ ಪಡೆದುಕೊಂಡಿದೆ. ಈ ವಿಚಾರ ತ್ರೈಮಾಸಿಕ ವರದಿಯಿಂದ ಬಹಿರಂಗವಾಗಿದೆ. ಇದಲ್ಲದೇ, ಗೂಗಲ್ ಕಂಪನಿಯು ತನ್ನ ಷೇರುದಾರರಿಗೆ ಮೊದಲ ಬಾರಿಗೆ ಲಾಭಾಂಶವನ್ನು ಘೋಷಿಸಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ಎಲ್ಲ ಬೆಳವಣಿಗೆಗಳಿಂದ ಸುಂದರ್ ಪಿಚೈ ಶೀಘ್ರದಲ್ಲೇ ಬಿಲಿಯನೇರ್ ಆಗಲಿದ್ದಾರೆ.

ಕರ್ತವ್ಯದ ಸಮರ್ಪಣೆಗೆ ಹೆಸರುವಾಸಿಯಾದ ಸುಂದರ್ ಪಿಚೈ ಅವರು ಕಂಪನಿಯ ಸಂಸ್ಥಾಪಕ ಲ್ಯಾರಿ ಪೇಜ್ ಅವರಿಂದ 2015 ರಲ್ಲಿ Google CEO ಆಗಿ ನೇಮಕಗೊಂಡಿದ್ದರು. ಲ್ಯಾರಿ ಪೇಜ್ 2015 ರವರೆಗೂ ಗೂಗಲ್ ಸಿಇಒ ಆಗಿದ್ದರು. ಆದರೆ ಅವರು ಗೂಗಲ್‌ನ ಮಾತೃಸಂಸ್ಥೆ 'ಆಲ್ಫಾಬೆಟ್' ನ ಸಿಇಒ ಆಗಿ ಬಡ್ತಿ ಪಡೆದಿದ್ದರು. ಈ ಮೂಲಕ ತೆರವಾಗಿದ್ದ ಗೂಗಲ್ ಸಿಇಒ ಸ್ಥಾನವನ್ನು ಸಮರ್ಥ ಸುಂದರ್ ಪಿಚೈ ತುಂಬಿದ್ದಾರೆ.

ಇದನ್ನು ಓದಿ:127 ವರ್ಷಗಳ ಇತಿಹಾಸ! ಮನೆ ಬೀಗದಿಂದ ಹಿಡಿದು ಅಂತರಿಕ್ಷದವರೆಗೂ ಹಬ್ಬಿರುವ ಗೋದ್ರೇಜ್ ಗ್ರೂಪ್‌ ಇಬ್ಭಾಗ! - Godrej Group

ABOUT THE AUTHOR

...view details