ಕರ್ನಾಟಕ

karnataka

ಪಿಲಿಭಿತ್ ಜನರಿಗೆ ಭಾವನಾತ್ಮಕ ಪತ್ರ ಬರೆದ ವರುಣ್ ಗಾಂಧಿ - Varun Gandhi Emotional Letter

By ETV Bharat Karnataka Team

Published : Mar 28, 2024, 2:15 PM IST

ಪಿಲಿಭಿತ್ ಲೋಕಸಭಾ ಸ್ಥಾನದ ರೇಸ್‌ನಿಂದ ಹೊರಗುಳಿದಿರುವ ಹಾಲಿ ಸಂಸದ ವರುಣ್ ಗಾಂಧಿ, ಕ್ಷೇತ್ರದ ಜನತೆಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಿಲಿಭಿತ್ ಜನರಿಗೆ ಭಾವನಾತ್ಮಕ ಪತ್ರ ಬರೆದ ವರುಣ್ ಗಾಂಧಿ
ಪಿಲಿಭಿತ್ ಜನರಿಗೆ ಭಾವನಾತ್ಮಕ ಪತ್ರ ಬರೆದ ವರುಣ್ ಗಾಂಧಿ

ಪಿಲಿಭಿತ್: ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಯ ಹಾಲಿ ಸಂಸದ ವರುಣ್ ಗಾಂಧಿ ಕ್ಷೇತ್ರದ ಜನತೆಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಗುರುವಾರ ತಮ್ಮ ಅಧಿಕೃತ ಎಕ್ಸ್‌ (ಟ್ವಿಟ್ಟರ್​) ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕೆಲವು ಹಳೆಯ ಘಟನಾವಳಿಗಳನ್ನು ಅವರು ಉಲ್ಲೇಖಿಸಿದ್ದಾರೆ.

''ಕ್ಷೇತ್ರದ ಜನರಿಗೆ ನನ್ನ ನಮಸ್ಕಾರಗಳು. ಇಂದು ಈ ಪತ್ರ ಬರೆಯುತ್ತಿರುವಾಗ ಅಸಂಖ್ಯಾತ ನೆನಪುಗಳು ನನ್ನನ್ನು ಭಾವುಕರನ್ನಾಗಿಸಿವೆ. 1983ರಲ್ಲಿ ಮೊದಲ ಬಾರಿಗೆ ಪಿಲಿಭಿತ್‌ಗೆ ತನ್ನ ತಾಯಿಯ ಕೈಬೆರಳನ್ನು ಹಿಡಿದು ಬಂದ ಮೂರು ವರ್ಷದ ಪುಟ್ಟ ಮಗುವಾಗಿದ್ದ ನನ್ನ ಆ ದಿನಗಳು ಇಂದಿಗೂ ನೆನಪಿದೆ. ಮುಂದೊಂದು ದಿನ ಈ ಭೂಮಿ ತನ್ನ ಕರ್ಮಭೂಮಿಯ ಸ್ಥಳವಾಗುತ್ತದೆ ಮತ್ತು ಇಲ್ಲಿನ ಜನರು ತನ್ನ ಕುಟುಂಬವಾಗುತ್ತಾರೆ ಎಂದು ಅವನಿಗೆ (ಮೂರು ವರ್ಷದ ಮಗುವಿಗೆ) ಹೇಗೆ ಗೊತ್ತಾಯಿತು? ಹಲವು ವರ್ಷಗಳಿಂದ ಪಿಲಿಭಿತ್‌ನ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ''.

''ಪಿಲಿಭಿತ್ ಕ್ಷೇತ್ರದಿಂದ ಪಡೆದ ಆದರ್ಶಗಳು, ಸರಳತೆ ಮತ್ತು ದಯೆ ನಾನೊಬ್ಬ ಸಂಸದನಾಗಿ ಮಾತ್ರವಲ್ಲದೇ ವ್ಯಕ್ತಿಯಾಗಿಯೂ ನನ್ನ ಉನ್ನತಿಗೆ ಮತ್ತು ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ನಿಮ್ಮ ಪ್ರತಿನಿಧಿಯಾಗಿರುವುದು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯಾವಾಗಲೂ ನಿಮ್ಮ ಹಿತಾಸಕ್ತಿಗಳಿಗಾಗಿ ಮಾತನಾಡುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ''.

''ಸಂಸದನಾಗಿ ನನ್ನ ಅಧಿಕಾರಾವಧಿ ಮುಗಿಯುತ್ತಿದ್ದರೂ ಪಿಲಿಭಿತ್ ಜೊತೆಗಿನ ಸಂಬಂಧ ನನ್ನ ಕೊನೆಯ ಉಸಿರಿರುವವರೆಗೂ ಇರುತ್ತದೆ. ಸಂಸದನಾಗಿ ಇಲ್ಲದಿದ್ದರೆ ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ. ಪಿಲಿಭಿತ್‌ನ ಜನರಿಗೆ ಮೊದಲಿನಂತೆ ತನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ನನ್ನ ಮತ್ತು ಪಿಲಿಭಿತ್ ನಡುವಿನ ಸಂಬಂಧವು ಯಾವುದೇ ರಾಜಕೀಯ ಅರ್ಹತೆಗಿಂತಲೂ ಹೆಚ್ಚಿನ ಪ್ರೀತಿ ಮತ್ತು ನಂಬಿಕೆಯ ವಿಷಯವಾಗಿದೆ. ನಾನು ಸಾಮಾನ್ಯ ಜನರ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ. ಯಾವಾಗಲೂ ನಿಮ್ಮ ಕೆಲಸ ಮಾಡಲು ಹಾಗೂ ನಿಮ್ಮ ಆಶೀರ್ವಾದವನ್ನು ಬಯಸುತ್ತೇನೆ. ನಾನು ಈವರೆಗೂ ನಿಮ್ಮವನಾಗಿದ್ದೆ, ಹಾಗೆಯೇ ಉಳಿಯುತ್ತೇನೆ. ಹಾಗಾಗಿ ಕ್ಷೇತ್ರದ ಜನ ಧೃತಿಗೆಡಬೇಕಿಲ್ಲ. ಈ ಹಿಂದೆಯೂ ನಿಮ್ಮೊಂದಿಗೆ ಇದ್ದೆ, ಈಗಲೂ ಇದ್ದೇನೆ ಮತ್ತು ಮುಂದೆಯೂ ನಿಮ್ಮವನಾಗುತ್ತೇನೆ. ನಿಮಗಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ'' ಎಂದು ವರುಣ್ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ.

ವರುಣ್ ಗಾಂಧಿ ಅವರ ತಾಯಿ ಮತ್ತು ಪ್ರಸ್ತುತ ಪ್ರಾಣಿಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಅವರು ಪಿಲಿಭಿತ್ ಕ್ಷೇತ್ರದಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ವರುಣ್ ಗಾಂಧಿ ಕೂಡ ಎರಡು ಬಾರಿ ಇಲ್ಲಿಂದ ಸಂಸದರಾಗಿದ್ದರು. ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿದೆ. ಈ ಕ್ಷೇತ್ರದಿಂದ ವರುಣ್ ಗಾಂಧಿ ಬದಲಿಗೆ ಇತ್ತೀಚೆಗಷ್ಟೇ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿದ್ದ ಜಿತಿನ್ ಪ್ರಸಾದ್ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಆ ಮೂಲಕ, ವರುಣ್ ಗಾಂಧಿಗೆ ಕೊಕ್ ನೀಡಲಾಗಿದೆ. ಮನೇಕಾ ಗಾಂಧಿಗೆ ಅವರು ಪ್ರತಿನಿಧಿಸುತ್ತಿರುವ ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದಿಂದ ಮತ್ತೆ ಟಿಕೆಟ್ ನೀಡಿದೆ.

ವರುಣ್ ಗಾಂಧಿಗೆ ಟಿಕೆಟ್​ ನಿರಾಕರಣೆ ಬೆನ್ನಲ್ಲೇ ಅವರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಲು ಲೋಕಸಭೆಯ ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ ಕೋರಿದ್ದರು.

ಇದನ್ನೂ ಓದಿ:ಬಿಜೆಪಿ ಟಿಕೆಟ್​ ವಂಚಿತ ವರುಣ್​ ಗಾಂಧಿಗೆ ಕಾಂಗ್ರೆಸ್​ ಗಾಳ: ಅಧೀರ್​ ರಂಜನ್​ ಹೇಳಿದ್ದೇನು? - Varun Gandhi

ABOUT THE AUTHOR

...view details