ಕರ್ನಾಟಕ

karnataka

ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರಿಗೆ ಈದ್ - ಉಲ್ - ಫಿತರ್ ಹಬ್ಬದ ಸಂಭ್ರಮ; ಶುಭಾಶಯಗಳ ವಿನಿಮಯ - Eid al Fitr celebrating

By ETV Bharat Karnataka Team

Published : Apr 11, 2024, 9:17 AM IST

ಕೆಲವು ರಾಜ್ಯಗಳನ್ನು ಬಿಟ್ಟರೆ ದೇಶದ ಸುಮಾರು ರಾಜ್ಯಗಳಲ್ಲಿ ಇಂದು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತಿದೆ.

ಈದ್-ಉಲ್-ಫಿತರ್ ಹಬ್ಬಾಚರಣೆ
ಈದ್-ಉಲ್-ಫಿತರ್ ಹಬ್ಬಾಚರಣೆ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಮುಸ್ಲಿಂ ಬಾಂಧವರು ಈದ್-ಉಲ್-ಫಿತರ್ ಅ​ನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಾಗೇ ನಿನ್ನೆ ತಮಿಳುನಾಡು, ಕೇರಳ, ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ರಂಜಾನ್ ​ಆಚರಿಸಲಾಯಿತು. ಒಂದು ತಿಂಗಳ ಕಾಲ ಉಪವಾಸವಿದ್ದು, ಕಠಿಣ ವ್ರತಾಚರಣೆ ಪಾಲಿಸಿ ಇಂದು ತಮ್ಮ ತಮ್ಮ ಮಸೀದಿಗಳಿಗೆ, ಪ್ರಾರ್ಥನಾ ಮೈದಾನಗಳಿಗೆ ತೆರಳಿ ನಮಾಜ್ ಸಲ್ಲಿಸಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ದೆಹಲಿಯ ಜಾಮಾ ಮಸೀದಿ, ಹಜರತ್ ನಿಜಾಮುದ್ದೀನ್ ದರ್ಗಾ, ಮುಂಬೈನ ಮಾಹಿಮ್ ಮಸೀದಿ, ಲಕ್ನೋದ ಮಸೀದಿ, ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಇಸ್ಲಾಂ ಜನತೆ ಹೊಸ ಉಡುಪುಗಳನ್ನು ಧರಿಸಿ ಆಗಮಿಸಿ ನಮಾಜ್​ ಸಲ್ಲಿಸಿದರು. ಇಡೀ ಊರೇ ಹಬ್ಬದ ವಾತಾವರಣದಲ್ಲಿ, ಅಲಂಕೀಕೃತ ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದೆ. ಈದ್​​ ಶುಭಾಶಯಗಳನ್ನು ಸಿಹಿ ತಿನಿಸೊಂದಿಗೆ ವಿನಿಮಯ ಮಾಡಿಕೊಳ್ಳುವುದರಿಂದ ಮಸೀದಿ ಮಾರ್ಕೆಟ್​, ರಸ್ತೆ ತುಂಬೆಲ್ಲಾ ಸಿಹಿ ಖಾದ್ಯಗಳ, ಡ್ರೈ ಫ್ರೂಟ್ಸ್​ಗಳ ಅಂಗಡಿಗಳು ತೆರೆದಿದ್ದು ಜನರಿಂದ ತುಂಬಿ ತುಳುಕುತ್ತಿವೆ.

ಇನ್ನು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕಾಶ್ಮೀರಿ ಗೇಟ್‌ನ ಪಂಜಾ ಶರೀಫ್ ದರ್ಗಾದಲ್ಲಿ ನಮಾಜ್ ಮಾಡಿ ಪ್ರಾರ್ಥನೆ ಸಲ್ಲಿಸಿದರು. ದೆಹಲಿಯ ಜಾಮಾ ಮಸೀದಿಯಲ್ಲಿ ನಮಾಜ್ ಸಲ್ಲಿಸಿದ ನಂತರ ಪುಟಾಣಿ ಮಕ್ಕಳು ತಬ್ಬಿಕೊಂಡು ಸಂತೋಷ ವಿನಿಮಯ ಮಾಡಿಕೊಳ್ಳುವುದು ಕಂಡು ಬಂತು.

ದೆಹಲಿಯಲ್ಲಿ ಬಿಗಿ ಭದ್ರತೆ:ರಂಜಾನ್​ ಹಿನ್ನೆಲೆ ಕಿಕ್ಕಿರಿದ ಜನಸ್ತೋಮ ನೆರೆದಿರುವುದರಿಂದ ಶಾಂತಿ ಮತ್ತು ಸುರಕ್ಷಿತ ಈದ್​ ಆಚರಣೆಗಾಗಿ ಎಲ್ಲಾ ಮಸೀದಿಗಳಲ್ಲಿ ಪೊಲೀಸ್​ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ ಪೊಲೀಸರು ವಾಹನಗಳ ತಪಾಸಣೆಯೊಂದಿಗೆ, ಜನರನ್ನು ಪರೀಶೀಲಿಸುತ್ತಿದ್ದಾರೆ. ಜತೆಗೆ ದರ್ಗಾಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು ಜನಸಮೂಹವನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ.

ಹಾಗೇ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿ ಕೂಡ ರಂಜಾನ್​ ಹಬ್ಬದ ಸಡಗರ ಹೆಚ್ಚಿದೆ. ರಾಜ್ಯಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ (ಪಿಎಸಿ), ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ವಿಶೇಷ ಭದ್ರತಾ ಪಡೆ (ಎಸ್‌ಎಸ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಅಮಿತಾಭ್ ಯಶ್ ಭದ್ರತೆ ಕುರಿತು ಪ್ರಾರ್ಥನೆಯ ಸಮಯದಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾಗಳು ಮತ್ತು ಹೆಚ್ಚಿನ ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಲವು ಹಾಟ್​ಸ್ಪಾಟ್​ಗಳನ್ನು ಗುರುತಿಸಲಾಗಿದ್ದು ಅಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ಬುಧವಾರ ರಂಜಾನ್​ ಆಚರಣೆ: ತಮಿಳುನಾಡು, ಕೇರಳ, ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಮಂಗಳವಾರ ಈದ್​ ಚಂದ್ರ ಗೋಚರಿಸಿರುವ ಕಾರಣ ಬುಧವಾರ ಈದ್-ಉಲ್-ಫಿತರ್ ಆಚರಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಮಸೀದಿಯಲ್ಲಿ ನೂರಾರು ಮುಸ್ಲಿಮರು ಸಾಮೂಹಿಕ 'ನಮಾಜ್' ಪಠಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಾಗೇ ಕೇರಳದ ಎರ್ನಾಕುಲಂ ಜಿಲ್ಲೆಯ ಮಸೀದಿಯಲ್ಲಿ, ತಿರುವನಂತಪುರಂನ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಮೂಹಿಕ ಪ್ರಾರ್ಥನೆ ನಿನ್ನೆಯೇ ಸಲ್ಲಿಸಲಾಯಿತು.

ಈದ್‌ನಂದು ಸಿಹಿತಿಂಡಿಗಳು ಮತ್ತು ಭಕ್ಷ್ಯಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯ ಜನರು ಸ್ಥಳೀಯ ಮಾರುಕಟ್ಟೆಗಳಲ್ಲಿ ಸೇರಿದ್ದರು. ಹಬ್ಬದ ಖರೀದಿ ಬಗ್ಗೆ ಅಂಗಡಿಯ ಮಾಲೀಕರೊಬ್ಬರು ಮಾತನಾಡಿ ಗುಲಾಬ್ ಜಾಮೂನ್, ರಸಗುಲ್ಲಾ ಮತ್ತು ಫೀನಿ ಸೇರಿದಂತೆ ಸಿಹಿತಿಂಡಿಗಳನ್ನು ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದೆ.

ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಚಂದ್ರನು ಕಾಣಿಸಿಕೊಂಡಿದ್ದರಿಂದ ಕೇಂದ್ರಾಡಳಿತ ಪ್ರದೇಶದ ಗ್ರ್ಯಾಂಡ್ ಮುಫ್ತಿ ನಾಸಿರ್-ಉಲ್-ಇಸ್ಲಾಂ ಬುಧವಾರ ಈದ್ 2024 ಆಚರಣೆಯನ್ನು ನಡೆಸಲಾಗುವುದು ಎಂದು ಘೋಷಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಲಡಾಖ್​ನಲ್ಲಿಯೂ ಏಪ್ರಿಲ್ 9 ರಂದು ಲೇಹ್‌ನಲ್ಲಿ ಅರ್ಧಚಂದ್ರ ಗೋಚರಿಸಿದ್ದರಿಂದ ಇಲ್ಲಿಯೂ ಬುಧವಾರವೇ ಹಬ್ಬವನ್ನು ಆಚರಿಸಲಾಯಿತು. ಹೈದರಾಬಾದ್, ಲಕ್ನೋ, ದೆಹಲಿ ಮತ್ತು ಹಲವಾರು ಇತರ ನಗರಗಳ ಧರ್ಮಗುರುಗಳು ಮಂಗಳವಾರ ಚಂದ್ರ ಬಾನಗಂಳದಲ್ಲಿ ಗೋಚರಿಸದೇ ಇದ್ದುದರಿಂದ ಈ ರಾಜ್ಯಗಳಲ್ಲಿ ಈದ್ ಅನ್ನು ಏಪ್ರಿಲ್ 11 ರಂದು(ಇಂದು) ಆಚರಿಸಲಾಗುತ್ತಿದೆ.

ಇದನ್ನೂ ಓದಿ:ನಿನ್ನೆ ಬಾನಂಗಳದಲ್ಲಿ ದರ್ಶನ ಕೊಡದ ಚಂದ್ರ: ಭಾರತದಲ್ಲಿ ನಾಳೆ ರಂಜಾನ್​​ ಆಚರಣೆ - Eid al Fitr

ABOUT THE AUTHOR

...view details