ಕರ್ನಾಟಕ

karnataka

ಕಾಶ್ಮೀರ ಕಣಿವೆಯಲ್ಲಿ ಹಿಮಪಾತ: ವಿಮಾನ ಸಂಚಾರ ಅಸ್ತವ್ಯಸ್ತ

By PTI

Published : Feb 4, 2024, 7:50 PM IST

ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತವಾಗುತ್ತಿರುವ ಕಾರಣದಿಂದ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಅಲ್ಲಿಗೆ ಆಗಮಿಸುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

Snowfall in Kashmir valley disrupts flight operations
Snowfall in Kashmir valley disrupts flight operations

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಿರಂತರ ಹಿಮಪಾತದ ಕಾರಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಭಾನುವಾರ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಪ್ರಾರಂಭವಾದ ಹಿಮಪಾತವು ಮುಂಜಾನೆ ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ ರನ್​ವೇಯಲ್ಲಿನ ಹಿಮವನ್ನು ತೆರವುಗೊಳಿಸಲಾಯಿತು. ಆದರೆ ಮತ್ತೆ ವಿಮಾನ ಸಂಚಾರ ಆರಂಭಿಸಬೇಕೆನ್ನುವಷ್ಟರಲ್ಲಿ ಹಿಮಪಾತ ಮತ್ತೆ ಪ್ರಾರಂಭವಾಯಿತು ಎಂದು ಅವರು ಹೇಳಿದರು.

ಕಾಶ್ಮೀರದ ಬಯಲು ಪ್ರದೇಶಗಳಲ್ಲಿ ಮಧ್ಯಮ ಪ್ರಮಾಣದ ಹಿಮಪಾತವಾಗುತ್ತಿದ್ದರೆ, ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮಪಾತ ವರದಿಯಾಗಿದೆ. ಮುಂಜಾನೆಯಿಂದಲೇ ರಸ್ತೆಗಳಲ್ಲಿನ ಹಿಮ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ. ಜಾರುವ ರಸ್ತೆಗಳಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಾದ್ಯಂತ ಹಿಮಪಾತದಿಂದ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ಹಿಮಪಾತ ಮತ್ತು ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಮತ್ತು ಇತರ ಹೆದ್ದಾರಿಗಳನ್ನು ಮುಚ್ಚಲಾಗಿದೆ. ಕಾಶ್ಮೀರ ಕಣಿವೆಯ ಜಿಲ್ಲೆಯಾದ್ಯಂತ ಮತ್ತು ಜಮ್ಮುವಿನ ಮೇಲ್ಭಾಗದ ಹಲವಾರು ರಸ್ತೆಗಳು ಹಿಮದಿಂದ ಆವೃತವಾಗಿವೆ.

ರಂಬನ್ ಜಿಲ್ಲೆಯ ಶೆರ್ಬಿಬಿಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದವು. ಇಲ್ಲಿ ಹಿಮ ತೆರವುಗೊಳಿಸುವ ಪ್ರಯತ್ನಗಳು ಮುಂದುವರೆದಿವೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್​ಒ), ಸೇನೆ ಮತ್ತು ಪಿಡಬ್ಲ್ಯೂಡಿಯ ಸಿಬ್ಬಂದಿ ಯಂತ್ರಗಳ ಮೂಲಕ ರಸ್ತೆಗಳಿಂದ ಹಿಮ ತೆರವುಗೊಳಿಸುತ್ತಿದ್ದಾರೆ.

ಜಮ್ಮುವಿನ ಬಯಲು ಪ್ರದೇಶಗಳಲ್ಲಿ ಮಳೆಯಾಗಿದ್ದರೆ, ಜಮ್ಮುವಿನ ಕಿಶ್ತ್ವಾರ್, ದೋಡಾ, ರೀಡಿಂಗ್, ರಂಬನ್, ಪೂಂಚ್, ರಾಜೌರಿ ಮತ್ತು ಕಥುವಾ ಜಿಲ್ಲೆಗಳಲ್ಲಿ ಭಾರಿ ಹಿಮಪಾತ ವರದಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಬಂಡಿಪೋರಾ, ಬಾರಾಮುಲ್ಲಾ, ಗಂದರ್​ಬಾಲ್, ಕುಪ್ವಾರಾ, ದೋಡಾ, ಕಿಶ್ತ್ವಾರ್, ಪೂಂಚ್ ಮತ್ತು ರಂಬನ್ ಜಿಲ್ಲೆಗಳಲ್ಲಿ ಹಿಮಪಾತವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸುವ ಜನ ಮುಂಜಾಗ್ರತೆ ವಹಿಸುವಂತೆ ಮತ್ತು ಹಿಮಪಾತ ಪೀಡಿತ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.

ಕಾಶ್ಮೀರ ಕಣಿವೆ ಮತ್ತು ಜಮ್ಮು ವಿಭಾಗದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು. ಆದರೆ ಎಂಜಿನಿಯರ್​ಗಳು ತಕ್ಷಣ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್ ಸ್ಕೀ ರೆಸಾರ್ಟ್​ನಲ್ಲಿ ತಾಪಮಾನವು ಮೈನಸ್ 7 ಡಿಗ್ರಿ ಸೆಲ್ಸಿಯಸ್ ಆಗಿತ್ತು. ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್​ನಲ್ಲಿ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ :11 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details