ನವದೆಹಲಿ:ಶಿವಸೇನೆಯಿಂದ ಬಂಡೆದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ವಜಾಗೊಳಿಸಿದ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ನಿರ್ಧಾರವನ್ನು ಪ್ರಶ್ನಿಸಿ, ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಸಮಯದ ಕೊರತೆಯಿಂದಾಗಿ ಸೋಮವಾರ ನಡೆಸಬೇಕಾಗಿದ್ದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ಅಂದು ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿದೆ.
ಠಾಕ್ರೆ ಬಣದ ಶಾಸಕ ಸುನಿಲ್ ಪ್ರಭು ಅವರು, ಸ್ಪೀಕರ್ ನಿರ್ಧಾರದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದು ಸುಪ್ರೀಂಕೋರ್ಟ್, ಸಿಎಂ ಏಕನಾಥ್ ಶಿಂಧೆ ಮತ್ತು ಅವರ ಗುಂಪಿನ 38 ಶಾಸಕರಿಗೆ ನೋಟಿಸ್ ನೀಡಿತ್ತು. ಈ ಮಧ್ಯೆ ಉದ್ಧವ್ ಠಾಕ್ರೆ ಗುಂಪನ್ನು ಅನರ್ಹಗೊಳಿಸಲು ಸ್ಪೀಕರ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಶಿಂಧೆ ಬಣ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಉತ್ತರಿಸುವಂತೆ ಸೂಚಿಸಿ ಠಾಕ್ರೆ ಬಣಕ್ಕೆ ನೋಟಿಸ್ ರವಾನಿಸಲಾಗಿದೆ.
ನಿಜವಾದ ಶಿವಸೇನೆ ಯಾವುದು?:ಶಿಂಧೆ ಮತ್ತು ಅವರ ಗುಂಪನ್ನು ಅನರ್ಹಗೊಳಿಸದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿದ್ದಲ್ಲದೇ, ಠಾಕ್ರೆ ಬಣವು ಜೂನ್ 2022 ರಲ್ಲಿ ಬಂಡೆದ್ದ ನಂತರ ಶಿಂಧೆ ಬಣವನ್ನು 'ನಿಜವಾದ ಶಿವಸೇನೆ' ಎಂದು ಸ್ಪೀಕರ್ ಆದೇಶಿಸಿದ್ದಾರೆ. ಠಾಕ್ರೆ ಬಣದ ಗುಂಪು ನಿಜವಾದ ಶಿವಸೇನೆಯಾಗಿದೆ. ಈ ಬಗ್ಗೆಯೂ ಆದೇಶ ನೀಡಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.