ಕರ್ನಾಟಕ

karnataka

ಲಡಾಖ್​ನಲ್ಲಿ ಒಂದೇ ಒಂದು ಕುಟುಂಬದ ಮತದಾನಕ್ಕಾಗಿ ಮತಗಟ್ಟೆ ಸ್ಥಾಪನೆ - Polling Booth For One Family

By ETV Bharat Karnataka Team

Published : Apr 26, 2024, 3:49 PM IST

ಲಡಾಖ್​ನಲ್ಲಿ ಗುಡ್ಡಗಾಡು ಪ್ರದೇಶವೊಂದರಲ್ಲಿ ಒಂದೇ ಒಂದು ಕುಟುಂಬದವರ ಮತದಾನಕ್ಕಾಗಿ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ.

Lok Sabha Elections 2024:
Lok Sabha Elections 2024:

ನವದೆಹಲಿ:ಅಭೂತಪೂರ್ವ ಕ್ರಮವೊಂದರಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ)ವು ಒಂದೇ ಒಂದು ಕುಟುಂಬದ ಮತದಾನಕ್ಕಾಗಿ ಒಂದು ಮತದಾನ ಕೇಂದ್ರವನ್ನು ಸ್ಥಾಪಿಸಿದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಲೇಹ್ ಜಿಲ್ಲೆಯ ನುಬ್ರಾ ಉಪವಿಭಾಗದಲ್ಲಿರುವ ದೂರದ ಗ್ರಾಮ ವಾರ್ಶಿಯಲ್ಲಿ ಇಂಥದೊಂದು ಮತಗಟ್ಟೆ ಸ್ಥಾಪಿಸಲಾಗಿದೆ.

ಲಡಾಖ್ ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಯತೀಂದ್ರ ಎಂ.ಮರಲ್ಕರ್ ಅವರ ಸೂಚನೆಯ ಮೇರೆಗೆ ಸ್ಥಾಪಿಸಲಾದ ಈ ಮತಗಟ್ಟೆಯು ಈ ಬಾರಿಯ ಲೋಕಸಭಾ ಚುನಾವಣೆಯ ಮೈಲಿಗಲ್ಲನ್ನು ಸೂಚಿಸುತ್ತದೆ.

ಅಕ್ಷಾಂಶ 35.06413258 ಮತ್ತು ರೇಖಾಂಶ 77.33742535ದಲ್ಲಿರುವ ಸಣ್ಣ ಟೆಂಟ್ ಮತಗಟ್ಟೆಯು ಎಲ್ಲರನ್ನೂ ಒಳಗೊಂಡ ಭಾರತದ ಮಾದರಿ ಚುನಾವಣೆಯನ್ನು ಸಂಕೇತಿಸುತ್ತದೆ. ಮರಲ್ಕರ್ ಅವರ ಪ್ರಕಾರ, ಈ ಮತಗಟ್ಟೆಯಲ್ಲಿ ಒಂದು ಕುಟುಂಬದ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ಐದು ಜನ ಮತದಾನ ಮಾಡಲಿದ್ದಾರೆ. ಇದೊಂದು ರೈತ ಕುಟುಂಬವಾಗಿದೆ.

ಎಲ್ಲರನ್ನೂ ಒಳಗೊಳ್ಳುವಿಕೆಯ ಮತ್ತೊಂದು ಪ್ರದರ್ಶನದಲ್ಲಿ, ಚುನಾವಣಾ ಆಯೋಗವು 15,000 ಅಡಿ ಎತ್ತರದಲ್ಲಿರುವ ಅನ್ಲೆ ಫೋ -296 ಎಂಬ ಮತ್ತೊಂದು ಮತದಾನ ಕೇಂದ್ರವನ್ನು ಸ್ಥಾಪಿಸಿದೆ. ಇದು ಲಡಾಖ್​ನ ಅತಿ ಎತ್ತರದ ಮತದಾನ ಕೇಂದ್ರಗಳಲ್ಲಿ ಒಂದಾಗಿದೆ.

2024ರ ಲೋಕಸಭಾ ಚುನಾವಣೆಗೆ ಕೇಂದ್ರಾಡಳಿತ ಪ್ರದೇಶ ಲಡಾಖ್​ನಲ್ಲಿ ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ವ್ಯವಸ್ಥೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಿಇಒ ಲಡಾಖ್ ಇತ್ತೀಚೆಗೆ ಕಾರ್ಜೂನ ಸಿಇಒ ಕಚೇರಿಯಲ್ಲಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಏಪ್ರಿಲ್ 26 ರಂದು ಲಡಾಖ್ ಲೋಕಸಭಾ ಕ್ಷೇತ್ರಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ಮೇ 3 ರಂದು ನಾಮಪತ್ರ ಸಲ್ಲಿಸಲು ಮತ್ತು ಮೇ 6 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 20 ರಂದು ಇಲ್ಲಿ ಮತದಾನ ನಡೆಯಲಿದೆ.

91,703 ಪುರುಷರು ಮತ್ತು 90,867 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,82,571 ಮತದಾರರು ಲಡಾಖ್​ನಲ್ಲಿದ್ದಾರೆ. ಲಡಾಖ್ ಆಡಳಿತವು ಚುನಾವಣಾ ಪ್ರಕ್ರಿಯೆಗೆ ಅನುಕೂಲವಾಗುವಂತೆ 577 ಮತಗಟ್ಟೆಗಳನ್ನು ನಿರ್ಮಿಸಿದೆ. ಪಿಕ್ ಅಂಡ್ ಡ್ರಾಪ್ ಸೇವೆಗಳು ಮತ್ತು ಗಾಲಿಕುರ್ಚಿ ಸಹಾಯದಂತಹ ವಿಶೇಷ ಸವಲತ್ತುಗಳನ್ನು ಸಹ ಕಲ್ಪಿಸಲಾಗಿದೆ. ಮನೆಯಿಂದ ಮತದಾನದಂತಹ ಉಪಕ್ರಮಗಳ ಮೂಲಕ ಎಲ್ಲ ಅರ್ಹ ಮತದಾರರಿಗೆ ಮತದಾನದ ಅವಕಾಶ ನೀಡಲಾಗುತ್ತದೆ. ಲಡಾಖ್ ಕ್ಷೇತ್ರದಲ್ಲಿ 2019 ರ ಚುನಾವಣೆಯಲ್ಲಿ ಶೇ 76.4 ರಷ್ಟು ಅತ್ಯಧಿಕ ಮತದಾನವಾಗಿತ್ತು.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ - ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ - Lok Sabha election 2024

ABOUT THE AUTHOR

...view details