ಕರ್ನಾಟಕ

karnataka

ಚುನಾವಣಾ ಕರ್ತವ್ಯಕ್ಕೆ 3.4 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ; ಸುಗಮ ರೈಲು ಸಂಚಾರಕ್ಕೆ ಆಯೋಗ ಮನವಿ

By PTI

Published : Feb 21, 2024, 8:33 PM IST

ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಕರ್ತವ್ಯಕ್ಕೆ 3.4 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿದೆ. ಈ ಸಿಬ್ಬಂದಿಗಾಗಿ ಸುಗಮ ರೈಲು ಸಂಚಾರದ ವ್ಯವಸ್ಥೆ ಮಾಡಬೇಕೆಂದು ರೈಲ್ವೆ ಮಂಡಳಿಗೆ ಚುನಾವಣಾ ಆಯೋಗ ಮನವಿ ಮಾಡಿದೆ.

LS polls: EC asks railways to ensure smooth movement for CAPF personnel
ಚುನಾವಣಾ ಕರ್ತವ್ಯಕ್ಕೆ 3.4 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ; ಸುಗಮ ರೈಲು ಸಂಚಾರಕ್ಕೆ ಆಯೋಗ ಮನವಿ

ನವದೆಹಲಿ: ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ 3.4 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗೆ ಸುಗಮ ಮತ್ತು ತೊಂದರೆಯಿಲ್ಲದ ರೈಲು ಸಂಚಾರವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ರೈಲ್ವೆ ಮಂಡಳಿಗೆ ನಿರ್ದೇಶನ ನೀಡಿದೆ. ಈ ಹಿಂದಿನ ಚುನಾವಣೆಯಲ್ಲಿನ ವಿಳಂಬಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಲು ಈ ನಿರ್ದಿಷ್ಟ ಸೂಚನೆ ನೀಡಲಾಗಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಭದ್ರತಾ ಪಡೆಗಳ ಸಂಚಾರ ದೇಶಾದ್ಯಂತ ಇರಲಿದ್ದು, ಇದರ ಮೇಲ್ವಿಚಾರಣೆಗೆ 24x7 ಕಂಟ್ರೋಲ್​ ರೂಂ ಸ್ಥಾಪಿಸಬೇಕು. ಈ ಅವಧಿಯಲ್ಲಿ ಕೋಚ್‌ಗಳಲ್ಲಿ ಫ್ಯಾನ್‌ಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ, ಊಟ, ಮಾರ್ಗದಲ್ಲಿನ ನಿಲ್ದಾಣಗಳಲ್ಲಿ ವೈದ್ಯಕೀಯ ಸೌಲಭ್ಯಗಳು, ವಿಶೇಷ ಮತ್ತು ಸ್ಪ್ಲಿಂಟರ್ ಬೋಗಿಗಳ ಲಭ್ಯತೆ ಮತ್ತು ವ್ಯಾಗನ್‌ಗಳಲ್ಲಿ ಕೀಟ ನಿಯಂತ್ರಣಕ್ಕಾಗಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲು ಚುನಾವಣಾ ಆಯೋಗ ಕೋರಿದೆ.

ಚುನಾವಣಾ ಉದ್ದೇಶಕ್ಕಾಗಿ ವಿವಿಧ ರಾಜ್ಯಗಳಿಂದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಮತ್ತು ಪೊಲೀಸ್ ಪಡೆಗಳ ದೊಡ್ಡ ಪ್ರಮಾಣದ ನಿಯೋಜನೆ ಅತ್ಯಗತ್ಯವಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳು ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕೀಂನಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳನ್ನು ಖಾತ್ರಿಪಡಿಸಿಕೊಳ್ಳಲು ಸಿಎಪಿಎಫ್‌ಗಳು ಮತ್ತು ರಾಜ್ಯ ಪೊಲೀಸ್ ಪಡೆಗಳ ಸುಮಾರು 3,400 ತುಕಡಿಗಳನ್ನು ಒದಗಿಸಲು ಚುನಾವಣಾ ಆಯೋಗ ವಿನಂತಿ ಮಾಡಿದೆ.

ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಿಎಪಿಎಫ್‌ಗಳ ನಿಯೋಜನೆಯು ರೈಲು ಚಲನೆಯನ್ನು ಒಳಗೊಂಡಿರುತ್ತದೆ. ಆದ್ದರಿಂದ ಈ ಪಡೆಗಳ ಇಂಡಕ್ಷನ್ ಮತ್ತು ಡಿ-ಇಂಡಕ್ಷನ್‌ನಲ್ಲಿ ರೈಲ್ವೆ ಸಚಿವಾಲಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. 2022 ಮತ್ತು 2023ರಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ರೈಲು ಪ್ರಯಾಣದ ಸಮಯದಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ಪಡೆಗಳ ಚಲನೆಯಲ್ಲಿ ವಿಳಂಬ ಮತ್ತು ಸಿಬ್ಬಂದಿ ಎದುರಿಸುತ್ತಿರುವ ಅನಾನುಕೂಲತೆ ಕುರಿತು ಕೂಡ ಆಯೋಗವು ಕಳವಳ ವ್ಯಕ್ತಪಡಿಸಿದೆ.

ಭದ್ರತಾ ಪಡೆಗಳ ರೈಲು ಪ್ರಯಾಣದ ಸಮಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಲು ರೈಲ್ವೆ ಮಂಡಳಿಯು ಈ ಕಳವಳಗಳನ್ನು ಪರಿಹರಿಸಬೇಕು. ನವೆಂಬರ್-ಡಿಸೆಂಬರ್ 2023ರಲ್ಲಿ ನಡೆದ ಇತ್ತೀಚಿನ ಚುನಾವಣೆಯಲ್ಲಿ ರೋಲಿಂಗ್ (ಬೋಗಿಗಳು) ಸ್ಟಾಕ್ ಲಭ್ಯತೆಯ ಸಮಸ್ಯೆಯೂ ಮರುಕಳಿಸಿತ್ತು. ಇದರ ಪರಿಣಾಮವಾಗಿ ಪಡೆಗಳ ಚಲನೆಯಲ್ಲಿ ವಿಳಂಬವಾಗಿತ್ತು ಎಂದು ತಿಳಿಸಿದೆ.

ಈ ಬಾರಿ ಸುಗಮ ಸಮನ್ವಯ, ರೋಲಿಂಗ್ ಸ್ಟಾಕ್, ಬೇಸಿಗೆ ಕಾಲವನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಸಿಬ್ಬಂದಿಗೆ ಆರಾಮದಾಯಕ ಆಸನ, ವಿಶ್ರಾಂತಿ ವ್ಯವಸ್ಥೆ, ವಿದ್ಯುತ್, ನೀರು, ಫ್ಯಾನ್, ಎಸಿ ಇತ್ಯಾದಿ ಸೇರಿ ಅಗತ್ಯ ಸೌಲಭ್ಯಗಳು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ತನ್ನ ಪ್ರಧಾನ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಸಿಬ್ಬಂದಿಗೆ ಊಟ ಒದಗಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಗೆ ನಿರ್ದೇಶನ ನೀಡುವುದರ ಜೊತೆಗೆ ಬೋಗಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಶುಚಿಗೊಳಿಸುವ ಸಿಬ್ಬಂದಿಯ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ.

ಇದನ್ನೂ ಓದಿ:ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳಬೇಡಿ: ಚುನಾವಣಾ ಆಯೋಗ ಸೂಚನೆ

ABOUT THE AUTHOR

...view details