ಗುರುಗ್ರಾಮ್ (ಹರಿಯಾಣ):ನಗರದಲ್ಲಿ ಮಂಗಳವಾರ (ಏಪ್ರಿಲ್ 9) ತಡರಾತ್ರಿ ರಾಜಸ್ಥಾನದ ಭಿವಾಡಿಯಿಂದ ಬರುತ್ತಿದ್ದ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾಹನದಲ್ಲಿದ್ದವರಲ್ಲಿ ಆತಂಕ ಮನೆ ಮಾಡಿತ್ತು. ಸುಮಾರು 10 ನಿಮಿಷಗಳಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ಕಾರಿಗೆ ಬೆಂಕಿ: ಪೊಲೀಸರಿಂದ ಬಂದ ಮಾಹಿತಿ ಪ್ರಕಾರ, ನವರಾತ್ರಿಯ ಮೊದಲ ದಿನ ವಿವಿಧ ರಾಜ್ಯಗಳಿಂದ ಭಕ್ತರು ಗುರುಗ್ರಾಮದ ಪ್ರಸಿದ್ಧ ಶೀತಲ ಮಾತಾ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಅದೇ ರೀತಿ, ರಾಜಸ್ಥಾನದ ಭಿವಾಡಿಯಿಂದ ಗುರುಗ್ರಾಮದ ಮಾತಾ ಶೀತಲ ದೇವಸ್ಥಾನಕ್ಕೆ ಒಂದೇ ಕುಟುಂಬದ 5 ಮಂದಿ ಕಾರಿನಲ್ಲಿ ಬರುತ್ತಿದ್ದರು. ಅವರ ಕಾರು ಗುರುಗ್ರಾಮದ ದ್ವಾರಕಾ ಎಕ್ಸ್ ಪ್ರೆಸ್ ವೇ ಮೂಲಕ ಬಸಾಯಿ ಚೌಕ್ ತಲುಪಿದ ತಕ್ಷಣ ಕಾರಿನಿಂದ ಹೊಗೆ ಬರತೊಡಗಿತು. ಹೊಗೆಯನ್ನು ಕಂಡ ಪ್ರಯಾಣಿಕರು ಕೂಡಲೇ ಕಾರಿನಿಂದ ಇಳಿದರು. ಇದಾದ ಸ್ವಲ್ಪ ಸಮಯದ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿ ಇಡೀ ಕಾರಿಗೆ ಆವರಿಸಿದೆ. ಅಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರೊಳಗೆ ಕಾರು ಸುಟ್ಟು ಭಸ್ಮವಾಗಿತ್ತು.