ಕರ್ನಾಟಕ

karnataka

ಅಬಕಾರಿ ಹಗರಣ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್‌ಗೆ 5ನೇ ಸಮನ್ಸ್ ನೀಡಿದ ಇಡಿ

By ETV Bharat Karnataka Team

Published : Jan 31, 2024, 3:34 PM IST

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಜಾರಿ ನಿರ್ದೇಶನಾಲಯ 5ನೇ ಬಾರಿಗೆ ಸಮನ್ಸ್​ ಜಾರಿ ಮಾಡಿದೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದಿದೆ.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್‌
ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್‌

ನವದೆಹಲಿ:ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಐದನೇ ಸಮನ್ಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್​ಗೆ ಈವರೆಗೆ 4 ಬಾರಿ ಸಮನ್ಸ್ ನೀಡಿದ್ದರೂ, ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಹೊಸದಾಗಿ ಮತ್ತೊಮ್ಮೆ ಬುಲಾವ್​ ನೀಡಲಾಗಿದೆ.

ಫೆಬ್ರವರಿ 2 ರಂದು ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿ ಎಂದು ಸಮನ್ಸ್​ನಲ್ಲಿ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಇದಕ್ಕೂ ಮೊದಲು ದೆಹಲಿ ಸಿಎಂಗೆ 2023 ರ ಜನವರಿ 18, ಜನವರಿ 3, ನವೆಂಬರ್ 2, ಡಿಸೆಂಬರ್ 21 ರಂದು ತನಿಖಾ ಸಂಸ್ಥೆಯಿಂದ ನಾಲ್ಕು ಸಮನ್ಸ್‌ಗಳನ್ನು ನೀಡಲಾಗಿದೆ. ಈ ಎಲ್ಲಾ ನೋಟಿಸ್‌ಗಳು ಕಾನೂನುಬಾಹಿರ ಎಂದು ಅರವಿಂದ್​ ಕೇಜ್ರಿವಾಲ್​ ಅಲ್ಲಗಳೆದಿದ್ದರು.

ಸಮನ್ಸ್​ಗೆ ವಿರೋಧವೇಕೆ?:ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿ ಲೋಕಸಭೆ ಚುನಾವಣೆಯಿಂದ ದೂರ ಇಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಹೀಗಾಗಿ ಇಡಿಯನ್ನು ತಮ್ಮ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅರವಿಂದ್​ ಕೇಜ್ರಿವಾಲ್​ ನೀಡಿದ ಎಲ್ಲ ಸಮನ್ಸ್​ಗಳನ್ನು ನಿರ್ಲಕ್ಷಿಸಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರಕರಣದಲ್ಲಿ ಈಗಾಗಲೇ ಆಪ್​ನ ಸಚಿವರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿದೆ ಎಂದು ಇಡಿ ಬಲವಾಗಿ ಆರೋಪಿಸಿದೆ.

ಈ ಹಿಂದೆ ಪ್ರಕರಣದಲ್ಲಿ ಸಂಬಂಧಿಸಿದಂತೆ ಸಿಬಿಐ, ಕೇಜ್ರಿವಾಲ್ ಅವರನ್ನು ಕಳೆದ ಏಪ್ರಿಲ್‌ನಲ್ಲಿ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿಚಾರಣೆ ನಡೆಸುತ್ತಿದೆ. ಕೇಜ್ರಿವಾಲ್ ಅವ​ರಿಗೂ ಸಮನ್ಸ್​ ಜಾರಿ ಮಾಡಿ ಕಳೆದ ವರ್ಷ ಮೊದಲ ಬಾರಿಗೆ ವಿಚಾರಣೆಗೆ ಕರೆದಿತ್ತು. ಆದರೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೈರಾಗುತ್ತಲೇ ಇದ್ದಾರೆ.

ಏನಿದು ಪ್ರಕರಣ?:ಮದ್ಯದ ವ್ಯಾಪಾರಿಗಳಿಗೆ ಪರವಾನಿಗೆ ನೀಡಲು ದೆಹಲಿ ಸರ್ಕಾರ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿತ್ತು ಮತ್ತು ಅದಕ್ಕಾಗಿ ಲಂಚವನ್ನು ನೀಡಿದ ಕೆಲವು ಡೀಲರ್‌ಗಳಿಗೆ ಒಲವು ತೋರಿತ್ತು ಎಂದು ಆರೋಪಿಸಲಾಗಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಇದನ್ನು ಪದೇ ಪದೆ ನಿರಾಕರಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಶಿಫಾರಸು ಮಾಡಿದರು. ಕಳೆದ ವರ್ಷ ಆಗಸ್ಟ್ 17 ರಂದು ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಇದನ್ನೂ ಓದಿ:ದೆಹಲಿ ಅಬಕಾರಿ ಹಗರಣ: ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ನಾಲ್ಕನೇ ಸಲ ಇಡಿ ಸಮನ್ಸ್

ABOUT THE AUTHOR

...view details