ಕರ್ನಾಟಕ

karnataka

ರಣಬಿಸಿಲಿಗೆ ಜನರು ತತ್ತರ: ಇಲ್ಲಿ ತರಗತಿ ಕೋಣೆಯೇ ಈಜುಕೊಳ, ನೀರಿನಲ್ಲಿ ಆನಂದಿಸುವ ಮಕ್ಕಳು! - Classroom Turned Swimming Pool

By ANI

Published : May 1, 2024, 8:43 PM IST

Updated : May 1, 2024, 8:51 PM IST

ಬಿಸಿಲ ಧಗೆಗೆ ಮಕ್ಕಳು ಹೈರಾಣಾಗದಿರಲಿ ಎಂದು ಉತ್ತರ ಪ್ರದೇಶದ ಕನೌಜ್​ನ ಸರ್ಕಾರಿ ಶಾಲೆಯಲ್ಲಿ ತರಗತಿ ಕೋಣೆಯನ್ನೇ ಈಜುಕೊಳವನ್ನಾಗಿ ರೂಪಿಸಲಾಗಿದೆ.

ತರಗತಿ ಕೋಣೆಯೇ ಈಜುಕೊಳ
ತರಗತಿ ಕೋಣೆಯೇ ಈಜುಕೊಳ

ತರಗತಿ ಕೋಣೆಯ ಈಜುಕೊಳದಲ್ಲಿ ಮಕ್ಕಳ ಸ್ವಿಮ್ಮಿಂಗ್​

ಕನೌಜ್(ಉತ್ತರ ಪ್ರದೇಶ):ರಣಬಿಸಿಲು ಜನರನ್ನು ಹೈರಾಣು ಮಾಡುತ್ತಿದೆ. ದೇಶದ ವಿವಿಧೆಡೆ ಬಿಸಿಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಾಪದಿಂದ ತಪ್ಪಿಸಿಕೊಳ್ಳಲು ಏನೇನೋ ಸರ್ಕಸ್​ ಮಾಡಬೇಕಿದೆ. ಬಿರುಬೇಸಿಗೆಯಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈಚೆಗೆ ತೆಲಂಗಾಣದಲ್ಲಿ ಮೂವರು ಬಲಿಯಾಗಿದ್ದರು. ಅತಿಯಾದ ಬಿಸಿಯಿಂದಾಗಿ ಶಾಲೆಗೆ ಬರಲು ಮಕ್ಕಳು ಹೆದರುವಂತಾಗಿದೆ.

ಮಕ್ಕಳು ಬಿಸಿಲಿನಿಂದ ತತ್ತರಿಸದಿರಲಿ ಎಂದು ಉತ್ತರ ಪ್ರದೇಶದ ಶಾಲೆಯೊಂದು ಸಖತ್​ ತಂತ್ರ ರೂಪಿಸಿದೆ. ಕನೌಜ್​ನಲ್ಲಿನ ಸರ್ಕಾರಿ ಶಾಲೆಯಲ್ಲಿನ ತರಗತಿ ಕೋಣೆಯನ್ನು ಈಜುಕೊಳವನ್ನಾಗಿ ಮಾರ್ಪಡಿಸಲಾಗಿದೆ. ಈ ವಿನೂತನ ಉಪಾಯ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡುವುದಲ್ಲದೇ, ಬೇಸಿಗೆ ಧಗೆಯಿಂದ ರಕ್ಷಣೆ ಕೂಡ ನೀಡುತ್ತಿದೆ.

ಐಡಿಯಾ ಹಿಂದಿದೆ ಗಂಭೀರ ಕಾರಣ:ಶಾಲೆಯ ಕೋಣೆಯನ್ನು ಈಜುಕೊಳವನ್ನಾಗಿ ಮಾಡಿದ್ದರ ಹಿಂದೆ ದೊಡ್ಡ ಕಾರಣ ಅಡಗಿದೆ. ಬೇಸಿಗೆಯ ಜೊತೆಗೆ ರಾಜ್ಯದಲ್ಲಿ ಗೋಧಿ ಬೆಳೆ ಕೊಯ್ಲು ನಡೆಯುತ್ತಿದೆ. ಇದರಿಂದ ಮಕ್ಕಳು ಶಾಲೆಗಳಿಗೆ ಚಕ್ಕರ್​ ಹಾಕಿ ಕೆಲಸದಲ್ಲಿ ತೊಡಗಿದ್ದಾರೆ. ಶಾಲಾ ಹಾಜರಾತಿ ಕುಸಿಯುತ್ತಿರುವ ಕಾರಣ ಏನಾದರೂ ಮಾಡಿ ಮಕ್ಕಳನ್ನು ಬರ ಸೆಳೆಯಲು ಶಿಕ್ಷಕ ವೃಂದ ಈ ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ.

"ಬಿಸಿಲಿನ ಕಾರಣ ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ. ಜೊತೆಗೆ ಗೋಧಿ ಕಟಾವಿಗೂ ತೆರಳುತ್ತಿದ್ದಾರೆ. ನಾವೇ ಪೋಷಕರ ಬಳಿ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕೋರಿದೆವು. ಆದರೆ, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ. ಬಿಸಿಲಿಗೆ ಮಕ್ಕಳು ಅನಾರೋಗ್ಯ ಬೀಳುವ ಭಯದಲ್ಲಿ ಪೋಷಕರಿದ್ದಾರೆ. ಇದನ್ನು ಹೋಗಲಾಡಿಸಲು ಕೋಣೆಯಲ್ಲಿ ಈಜುಕೊಳ ರೂಪಿಸುವ ಕಲ್ಪನೆ ಹೊಳೆಯಿತು" ಎಂದು ಶಾಲೆಯ ಸಹಾಯಕ ಶಿಕ್ಷಕ ಓಂ ತಿವಾರಿ ಅವರು ತಿಳಿಸಿದರು.

"ಬಿಸಿಲಿನಿಂದ ಮಕ್ಕಳು ಮೈದಾನದಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ. ತರಗತಿ ಕೋಣೆಯಲ್ಲಿ ನೀರು ತುಂಬಿಸಿ ಅದರಲ್ಲಿ ಮಕ್ಕಳು ಆಟವಾಡಲು ಬಿಡಲಾಗಿದೆ. ವಿದ್ಯಾರ್ಥಿಗಳು ಇದನ್ನು ಆನಂದಿಸುತ್ತಿದ್ದಾರೆ. ಹಾಜರಾತಿಯಲ್ಲೂ ಗಣನೀಯ ಪ್ರಗತಿ ಕಂಡಿದೆ" ಎಂದು ಅವರು ಹೇಳಿದರು.

ಪ್ರಾಂಶುಪಾಲ ವೈಭವ್ ಕುಮಾರ್ ಮಾತನಾಡಿ, "ಚಿಕ್ಕ ಮಕ್ಕಳು ಈಜುಕೊಳಗಳಿಗೆ ಹೋಗುವುದು ತೀರಾ ಕಡಿಮೆ. ಹೀಗಾಗಿ ನಾವೇ ಶಾಲೆಯಲ್ಲಿ ಅದನ್ನು ರೂಪಿಸಿದೆವು. ಮಕ್ಕಳಿಗೆ ಅನಾರೋಗ್ಯ ಉಂಟಾಗುವ ಭಯದಲ್ಲಿ ಮೊದಲು ಪೋಷಕರ ಒಪ್ಪಿಗೆ ಪಡೆದುಕೊಂಡೆವು. ಚರ್ಚೆಯ ನಂತರವೇ ನಾವು ಕೋಣೆಯಲ್ಲಿ ಈಜುಕೊಳ ಮಾದರಿ ರೂಪಿಸಿದೆವು" ಎಂದರು.

ಎಲ್ಲೆಲ್ಲೂ ಬಿಸಿಲೇ:ರಾಜಧಾನಿ ಲಖನೌನಲ್ಲಿ 41.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ದೇಶದ ಹಲವು ಭಾಗಗಳಲ್ಲಿ ಮುಂದಿನ 5 ರಿಂದ 8 ದಿನಗಳವರೆಗೆ ಬಿಸಿಗಾಳಿ ಅಲೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಸ್ಥಾನ, ಮಧ್ಯಪ್ರದೇಶ, ವಿದರ್ಭ, ಗುಜರಾತ್, ಪಂಜಾಬ್‌, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶದಲ್ಲೂ ಇದರ ಪ್ರಭಾವ ಹೆಚ್ಚಿರಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ಇದನ್ಣೂ ಓದಿ:ಬಿಸಿಲೋ ಬಿಸಿಲು: ಮನೆಯಲ್ಲೇ ತಯಾರಿಸಿ ಈ ತಂಪು ಪಾನೀಯ ಕುಡಿಯಿರಿ; ಆರೋಗ್ಯ ಕಾಪಾಡಿಕೊಳ್ಳಿ - Summer Drinks

Last Updated :May 1, 2024, 8:51 PM IST

ABOUT THE AUTHOR

...view details