ಕರ್ನಾಟಕ

karnataka

'ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ': ಚಂದ್ರಬಾಬು ನಾಯ್ಡು ಜಾಮೀನು ರದ್ದತಿ ಕೋರಿ ಸುಪ್ರೀಂಗೆ ಆಂಧ್ರ ಸರ್ಕಾರ ಮನವಿ

By ETV Bharat Karnataka Team

Published : Feb 26, 2024, 5:44 PM IST

ಚಂದ್ರಬಾಬು ನಾಯ್ಡು ಕುಟುಂಬದವರು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಹಾಗಾಗಿ, ಅವರಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕೋರಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಸುಪ್ರೀಂ ಕೋರ್ಟ್‌
Supreme court

ನವದೆಹಲಿ:ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಾಯ್ಡು ಕುಟುಂಬಸ್ಥರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆಂಧ್ರ ಪ್ರದೇಶ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೌಶಲಾಭಿವೃದ್ಧಿ ಹಗರಣ ಆರೋಪ ಪ್ರಕರಣದಲ್ಲಿ ನಾಯ್ಡು ಅವರಿಗೆ ನವೆಂಬರ್ 3ರಂದು ಆಂಧ್ರ ಪ್ರದೇಶ ಹೈಕೋರ್ಟ್ ಜಾಮೀನು ನೀಡಿದೆ. ಈ ಜಾಮೀನು ರದ್ದುಗೊಳಿಸುವಂತೆ ಕೋರಿ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇಂದು ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರಿದ್ದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದೆ.

ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, "ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳಿಗೆ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಟಿಡಿಪಿ (ತೆಲುಗು ದೇಶಂ ಪಕ್ಷ) ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಈ ತನಿಖೆಯಲ್ಲಿ ಭಾಗಿಯಾಗಿರುವ ಎಲ್ಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಾಯ್ಡು ಕುಟುಂಬ ಸದಸ್ಯರು ಸಾರ್ವಜನಿಕವಾಗಿ ಹೇಳಿದ್ದಾರೆ. ಇದು ತೀವ್ರ ಗೊಂದಲದ ಬೆಳವಣಿಗೆ" ಎಂದರು.

ಈ ಸಂದರ್ಭದಲ್ಲಿ ನ್ಯಾ.ತ್ರಿವೇದಿ, ದಾಖಲೆಯಲ್ಲಿಲ್ಲದ ಯಾವುದೇ ಮಾಹಿತಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ನಾಯ್ಡು ಕುಟುಂಬ ಸದಸ್ಯರು ನೀಡಿರುವ ಹೇಳಿಕೆಗಳನ್ನು ಒಳಗೊಂಡ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಕೋರಿ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ ಎಂದು ರೋಹಟಗಿ ಪೀಠಕ್ಕೆ ಹೇಳಿದರು. ಆದರೆ, ಈ ಹೇಳಿಕೆಯನ್ನು ಅಲ್ಲಗಳೆದ ಚಂದ್ರಬಾಬು ನಾಯ್ಡು ಪರ ವಕೀಲರು, ರಾಜ್ಯ ಸರ್ಕಾರ ವಾಸ್ತವತೆಯನ್ನು ಮರೆಮಾಚುತ್ತಿದೆ ಎಂದು ಪ್ರತಿವಾದ ಮಂಡಿಸಿದರು.

ಕೌಶಲಾಭಿವೃದ್ಧಿ ಹಗರಣ ಆರೋಪ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷರಾದ ನಾಯ್ಡು ಅವರಿಗೆ ನಿಯಮಿತ ಜಾಮೀನು ಮಂಜೂರು ಮಾಡಿ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸುರುವ ಅರ್ಜಿಯನ್ನು ನ್ಯಾ.ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯ ಅಪರಾಧ ತನಿಖಾ ಇಲಾಖೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ಡುರನ್ನು ಬಂಧಿಸಿತ್ತು. ಅಕ್ಟೋಬರ್‌ನಲ್ಲಿ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು.

ಚುನಾವಣೆಯ ಹಿನ್ನೆಲೆಯಲ್ಲಿ ಇಂತಹ ಬೆದರಿಕೆಗಳನ್ನು ಲಘುವಾಗಿ ಪರಿಗಣಿಸಬಾರದು. ಚುನಾವಣೆಗೂ ಮುನ್ನ ಈ ರೀತಿಯ ಬೆದರಿಕೆ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳು ಜಾಮೀನಿನ ಲಾಭ ಪಡೆಯಲಾರರು ಎಂದು ಹೇಳಲಾಗದು. ಹಾಗಾಗಿ ಜಾಮೀನು ರದ್ದುಗೊಳಿಸುವಂತೆ ವಕೀಲ ರೋಹಟಗಿ ಮನವಿ ಮಾಡಿದರು.

ರಾಜ್ಯ ಸರ್ಕಾರದ ಮನವಿಗೆ ಸುಪ್ರೀಂ ಕೋರ್ಟ್, ನಾಯ್ಡು ಅವರ ಪ್ರತಿಕ್ರಿಯೆ ಕೇಳಿದೆ. ನಾಯ್ಡು ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ:ಕೌಶಲಾಭಿವೃದ್ಧಿ ಹಗರಣ ಪ್ರಕರಣದಲ್ಲಿ ನಾಯ್ಡು ಅವರಿಗೆ ಜಾಮೀನು ಮಂಜೂರು ಮಾಡಿ ನವೆಂಬರ್ 3ರಂದು ಆಂಧ್ರಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು. ಈ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯನ್ನು ಸುಪ್ರೀಂ ಪೀಠ ವಿಚಾರಣೆ ನಡೆಸುತ್ತಿದೆ. ಜಾಮೀನಿನ ಷರತ್ತಿನಂತೆ ಸಾರ್ವಜನಿಕ ಜಾಥಾ, ಸಭೆಗಳಲ್ಲಿ ಭಾಗವಹಿಸದಂತೆ ನಾಯ್ಜು ಅವರಿಗೆ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್‌ನಲ್ಲಿ ತೆಗೆದುಹಾಕಿತ್ತು. ಆದರೆ, ಪ್ರಕರಣದ ಕುರಿತು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಬಾರದು. ಮಾಧ್ಯಮಗಳೊಂದಿಗೂ ಮಾತನಾಡಬಾರದು ಎಂದು ಹೈಕೋರ್ಟ್ ವಿಧಿಸಿದ ಷರತ್ತು ಹಾಗೆಯೇ ಇರುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ:ಅಮರಾವತಿ ಇನ್ನರ್ ರಿಂಗ್ ರೋಡ್ ಹಗರಣ: ಚಂದ್ರಬಾಬು ನಿರೀಕ್ಷಣಾ ಜಾಮೀನು ಪ್ರಶ್ನಿಸಿದ್ದ ಎಪಿ ಸರ್ಕಾರದ ಅರ್ಜಿ ವಜಾ

ABOUT THE AUTHOR

...view details