ಕರ್ನಾಟಕ

karnataka

ಭ್ರಷ್ಟಾಚಾರ ಆರೋಪ: ಜಮ್ಮು- ಕಾಶ್ಮೀರ ಮಾಜಿ ಗವರ್ನರ್​ ಸತ್ಯಪಾಲ್​ ಮಲಿಕ್​ ಮನೆ ಮೇಲೆ ಸಿಬಿಐ ದಾಳಿ

By ETV Bharat Karnataka Team

Published : Feb 22, 2024, 12:56 PM IST

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಸತ್ಯಪಾಲ್​ ಮಲಿಕ್
ಸತ್ಯಪಾಲ್​ ಮಲಿಕ್

ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್​ ಮಲಿಕ್​ ಅವರ ನಿವಾಸ ಸೇರಿದಂತೆ 29 ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಕಿರು ಹೈಡ್ರೊ ಎಲೆಕ್ಟ್ರಿಕ್​ ಯೋಜನೆಯ ಸಿವಿಲ್​ ಕಾಮಗಾರಿಗಳನ್ನು ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಅದರ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

2,200 ಕೋಟಿ ರೂಪಾಯಿ ಮೌಲ್ಯದ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಗಾಗಿ ಸಿವಿಲ್ ಕಾಮಗಾರಿಗಳ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪದ ಮೇಲೆ ವಿವಿಧ ನಗರಗಳಲ್ಲಿನ ಮಲಿಕ್​ ಅವರಿಗೆ ಸೇರಿದ 30 ಸ್ಥಳಗಳಲ್ಲಿ ಸುಮಾರು 100 ಸಿಬಿಐ ಅಧಿಕಾರಿಗಳು ಇಂದು ಮುಂಜಾನೆಯಿಂದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಮಲಿಕ್​ ಅವರು ಯೋಜನೆಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಲು 300 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿಬಿಐ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. 2019 ರಲ್ಲಿ ಖಾಸಗಿ ಕಂಪನಿಯೊಂದಕ್ಕೆ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಅನ್ನು ಗುತ್ತಿಗೆ ನೀಡುವಲ್ಲಿ ಈ ಅವ್ಯವಹಾರದ ಆರೋಪ ಕೇಳಿ ಬಂದಿದೆ.

ಮಲಿಕ್​ ಜೊತೆಗೆ ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ (ಪಿ) ಲಿಮಿಟೆಡ್‌ನ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ, ಮಾಜಿ ಅಧಿಕಾರಿಗಳಾದ ಎಂ.ಎಸ್. ಬಾಬು, ಎಂ.ಕೆ. ಮಿತ್ತಲ್, ಅರುಣ್ ಕುಮಾರ್ ಮಿಶ್ರಾ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐವರ ಮೇಲೆ ಜನವರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

ಆಗಸ್ಟ್ 23, 2018 ಮತ್ತು ಅಕ್ಟೋಬರ್ 30, 2019 ರ ನಡುವೆ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿ ಸೇವೆ ಸಲ್ಲಿಸಿದ ಸತ್ಯ ಪಾಲ್ ಮಲಿಕ್ ಅವರು, 624 ಮೆಗಾವ್ಯಾಟ್‌ಗೆ ಸಂಬಂಧಿಸಿದ ಎರಡು ಕಡತಗಳನ್ನು ತೆರವುಗೊಳಿಸಲು 300 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ನಡೆಯುತ್ತಿರುವ ತನಿಖೆಯಲ್ಲಿ ತನಿಖಾ ಏಜೆನ್ಸಿ ಸಿಬಿಐ ಕಳೆದ ತಿಂಗಳು ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಸುಮಾರು 8 ಸ್ಥಳಗಳಲ್ಲಿ ಶೋಧ ನಡೆಸಿತ್ತು. ದಾಳಿಯಲ್ಲಿ 21 ಲಕ್ಷಕ್ಕೂ ಅಧಿಕ ನಗದು ಜೊತೆಗೆ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ಆಸ್ತಿ ದಾಖಲೆಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಇದನ್ನು ಓದಿ;ಸಂಘರ್ಷಕ್ಕೆ ತಿರುಗಿದ ರೈತ ಹೋರಾಟ: ಓರ್ವ ಸಾವು, 12 ಪೊಲೀಸರಿಗೆ ಗಾಯ, 2 ದಿನ ಪ್ರತಿಭಟನೆ ಸ್ಥಗಿತ

ABOUT THE AUTHOR

...view details