ಕರ್ನಾಟಕ

karnataka

ಲೋಕಸಭೆ ಚುನಾವಣೆಗೂ ಮೊದಲೇ ಸಿಎಎ ಜಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

By ETV Bharat Karnataka Team

Published : Feb 10, 2024, 4:02 PM IST

ಮುಂಬರುವ ಲೋಕಸಭೆ ಚುನಾವಣೆಗೂ ಮೊದಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಅಧಿಸೂಚನೆ ಹೊರಡಿಸಿ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

caa-to-be-implemented-before-lok-sabha-polls-amit-shah
ಲೋಕಸಭೆ ಚುನಾವಣೆಗೂ ಮೊದಲೇ ಸಿಎಎ ಜಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಮುಂಬರುವ ಲೋಕಸಭೆ ಚುನಾವಣೆಗೂ ಮೊದಲೇ ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು. ಇದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ. ದೆಹಲಿಯಲ್ಲಿ ನಡೆದ ಇಟಿ ನೌ-ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

2019ರ ಡಿಸೆಂಬರ್​ನಲ್ಲಿ ಸಿಎಎ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದೆ. ಆದರೆ, ಅದನ್ನು ಜಾರಿ ಮಾಡಿಲ್ಲ. ಇತ್ತೀಚಿಗೆ ಬಿಜೆಪಿ ಸಂಸದರೊಬ್ಬರು ಸಿಎಎ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ ಇದರ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮಿತ್​ ಶಾ, ಸಿಎಎ ದೇಶದ ಕಾಯ್ದೆ. ಅದರ ಬಗ್ಗೆ ಖಂಡಿತವಾಗಿ ಅಧಿಸೂಚನೆ ಹೊರಡಿಸಲಾಗುವುದು. ಇದನ್ನು ಚುನಾವಣೆಯ ಪೂರ್ವದಲ್ಲೇ ಮಾಡಲಾಗುವುದು. ಸಿಎಎ ಜಾರಿಗೆ ಬರಲಿದೆ ಮತ್ತು ಅದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ಆದರೆ, ಸಿಎಎ ಜಾರಿಗೊಳಿಸುವ ಭರವಸೆಯಿಂದ ಕಾಂಗ್ರೆಸ್ ಹಿಂದೆ ಸರಿಯುತ್ತಿದೆ ಎಂದು ಆರೋಪಿಸಿದ ಗೃಹ ಸಚಿವರು, ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಶೋಷಣೆಗೊಳಗಾದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತಕ್ಕೆ ಸ್ವಾಗತವಿದೆ. ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಹೇಳಿದರು.

ಭಾರತೀಯ ಪೌರತ್ವವನ್ನು ಒದಗಿಸಲು ಸಿಎಎಯನ್ನು ತರಲಾಗಿದೆಯೇ ಹೊರತು, ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಪ್ರತಿಪಾದಿಸಿದ ಅಮಿತ್​ ಶಾ, ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಈ ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಶೋಷಣೆಗೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಕಾಯ್ದೆ ಎಂದು ತಿಳಿಸಿದರು.

ಮೋದಿ ಸರ್ಕಾರವು ಪರಿಚಯಿಸಿರುವ ಸಿಎಎ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು, ಕ್ರಿಶ್ಚಿಯನ್ನರು ಸೇರಿದಂತೆ ಶೋಷಣೆಗೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಗುರಿಯನ್ನು ಹೊಂದಿದೆ.

ಮತ್ತೆ ಅಧಿಕಾರಕ್ಕೆ - ಶಾ ವಿಶ್ವಾಸ:ಇದೇ ಸಂದರ್ಭದಲ್ಲಿ ಮುಂಬರುವ ಚುನಾವಣೆ ಕುರಿತು ಮಾತನಾಡಿದ ಅಮಿತ್​ ಶಾ, ಬಿಜೆಪಿ 370 ಮತ್ತು ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ರಹಸ್ಯ ಇಲ್ಲ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮತ್ತೆ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ನಾವು ರದ್ದುಗೊಳಿಸಿದ್ದೇವೆ. ಹಾಗಾಗಿ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ಶಾ ತಿಳಿಸಿದರು.

ಇದನ್ನೂ ಓದಿ:ಹಲ್ದ್ವಾನಿ ಹಿಂಸಾಚಾರ ಗುಪ್ತಚರ ವೈಫಲ್ಯ: ಮಾಜಿ ಸಿಎಂ ಮಾಯಾವತಿ ಆರೋಪ

ABOUT THE AUTHOR

...view details