ಕರ್ನಾಟಕ

karnataka

ಚಿಕ್ಕಮಗಳೂರಿನಲ್ಲಿ ನವರಾತ್ರಿ ಉತ್ಸವ: ಪಟ್ಟದ ಗೊಂಬೆಗಳ ವೈಭವ- ವಿಡಿಯೋ

By ETV Bharat Karnataka Team

Published : Oct 19, 2023, 8:23 PM IST

ಚಿಕ್ಕಮಗಳೂರಿನಲ್ಲಿ ನವರಾತ್ರಿ ಉತ್ಸವ: ಪಟ್ಟದ ಗೊಂಬೆಗಳ ವೈಭವ

ಚಿಕ್ಕಮಗಳೂರು: ನವರಾತ್ರಿಯಲ್ಲಿ ಗೊಂಬೆಗಳನ್ನು ಕೂರಿಸುವುದು ಸಂಪ್ರದಾಯ. ಕಾಫಿನಾಡಿನಲ್ಲಿ ಮಕ್ಕಳಿಗೆ ಗೊಂಬೆಗಳ ಮೂಲಕ ಪುರಾಣ, ಪುಣ್ಯಕಥೆಗಳನ್ನು ಮೆಲುಕು ಹಾಕುವ ಕಾರ್ಯ ಮಾಡಲಾಗುತ್ತಿದೆ. ನಗರದ ಕೋಟೆ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವತ್ಥ ನಾರಾಯಣಾಚಾರ್ಯ, ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ. 

ಯದುವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂ ಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವ ಸಾರುತ್ತಿದ್ದರೆ, ಶ್ರೀನಿವಾಸ ಕಲ್ಯಾಣದ ಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ. ಶ್ರೀ ವೆಂಕಟೇಶ್ವರ ದೇವಾಲಯದ ಸ್ತಬ್ಧಚಿತ್ರ, ಅಮೃತ ಮಥನದ ದೃಶ್ಯಗಳು, ಗುರುಕುಲ ಪದ್ಧತಿ, ಶ್ರೀಕೃಷ್ಣ ಗೋವರ್ಧನ ಗಿರಿ ಎತ್ತಿ ಹಿಡಿದಿರುವ, ಶಿವ ಪಾರ್ವತಿಯರ ಒಡ್ಡೋಲಗದ ದೃಶ್ಯ ಕಣ್ಮನ ಸೆಳೆಯುತ್ತಿವೆ. ಗೀತೋಪದೇಶದ ಗೊಂಬೆಗಳು, ವಿಷ್ಟುವಿನ ದಶವತಾರದ ಗೊಂಬೆಗಳು, ಕೃಷಿ ಚಟುವಟಿಕೆ, ಸಂತೆಯ ದೃಶ್ಯ, ಭಾರತೀಯ ಹಬ್ಬ ಹರಿದಿನಗಳ ಆಚರಣೆಗಳನ್ನು ಸಂಪ್ರದಾಯ ತೆರೆದಿಡುವ ನೂರಾರು ಗೊಂಬೆಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. 

ಹಬ್ಬ ಪ್ರಾರಂಭಕ್ಕೂ ಎರಡು ದಿನಗಳ ಮುಂಚೆ ಗೊಂಬೆಗಳನ್ನು ಕೂರಿಸಲಾಗುತ್ತದೆ. ಇನ್ನು ಬಳುವಳಿಯಾಗಿ ಬಂದ ಪಟ್ಟದ ಗೊಂಬೆಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಈ ಕುಟುಂಬ ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿದೆ. ಪ್ರತಿನಿತ್ಯ ಗೊಂಬೆಗಳನ್ನು ನೋಡಲು ಬರುವವರಿಗೆ ಗೊಂಬೆ ಬಾಗಿಣ, ವಿವಿಧ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ. ಕಳೆದ 12-13 ವರ್ಷಗಳಿಂದಲೂ ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿರುವ ಈ ಕುಟುಂಬ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಗುರಿ ಹೊಂದಿದೆ.

ಇದನ್ನೂ ನೋಡಿ:ಮೈಸೂರು ದಸರಾ 2023: ಗಜಪಡೆಗೆ ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು.. ವಿಡಿಯೋ ನೋಡಿ

ABOUT THE AUTHOR

...view details