ಕರ್ನಾಟಕ

karnataka

ಯಾದಗಿರಿಯಲ್ಲಿ 2.5 ಎಕರೆ ಭತ್ತಕ್ಕೆ 2.5 ನಿಮಿಷದಲ್ಲಿ ಔಷಧ ಸಿಂಪಡಿಸಿದ ಡ್ರೋನ್...

By

Published : Sep 23, 2022, 9:34 PM IST

ಯಾದಗಿರಿಯಲ್ಲಿ ಭತ್ತದ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಿದ ಡ್ರೋನ್

ಯಾದಗಿರಿಯ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರದಲ್ಲಿ ಭತ್ತದ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ಅವಿಸ್ಮರಣೀಯ ಪ್ರಾತ್ಯಕ್ಷಿಕೆ ನಡೆಯಿತು.

ಯಾದಗಿರಿ:ಮಿಂಚಿನ ವೇಗದಲ್ಲಿ ಡ್ರೋನ್, ಕಣ್ಮುಚ್ಚಿ ತೆಗೆಯುವುದರಲ್ಲಿ ಎರಡೂವರೆ ಎಕರೆ ಭತ್ತದ ಬೆಳೆಗೆ ಔಷಧ ಸಿಂಪಡಿಸಿದೆ. ಡ್ರೋನ್​ನ ಈ ಚಮತ್ಕಾರಕ್ಕೆ ಯಾದಗಿರಿಯ ಅನ್ನದಾತರು ಮನ ಸೋತಿದ್ದಾರೆ.

ಮಹೀಂದ್ರ ಸುಮಿತ್ ಅಗ್ರಿ ಸೈನ್ಸ್ ಕಂಪನಿಯ ಡ್ರೋನ್ ಸುಮಾರು 24 ಕೆಜಿ ತೂಕದ್ದಾಗಿದ್ದು, ಕ್ಯಾನ್‌ನಲ್ಲಿ 16 ಲೀಟರ್ ಔಷಧದೊಂದಿಗೆ ಒಟ್ಟು 41 ಕೆಜಿಯನ್ನು ಹೊತ್ತುಕೊಂಡು ಗಗನಕ್ಕೆ ಹಾರುತ್ತದೆ. ಹೊಲದ ನಕ್ಷೆಯನ್ನು ತಂತ್ರಜ್ಞಾನ ಗುರುತಿಸಿ ನಿಗದಿಪಡಿಸಿದಂತೆ ರಿಮೋಟ್ ಮೂಲಕ ಕಂಟ್ರೋಲ್ ಮಾಡಿ ಕ್ಷಣಾರ್ಧದಲ್ಲಿ ಕೀಟನಾಶಕ ಸಿಂಪಡಿಸುತ್ತದೆ. ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರದಲ್ಲಿ ಭತ್ತದ ಬೆಳೆ ಕ್ಷೇತ್ರದಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ಅವಿಸ್ಮರಣೀಯ ಪ್ರಾತ್ಯಕ್ಷಿಕೆ ನಡೆಯಿತು. ರೈತರು ತೆರೆದಗಣ್ಣಿನಲ್ಲಿ ಔಷಧ ಸಿಂಪಡಿಸುವುದನ್ನು ವೀಕ್ಷಿಸಿದರು. ಕೆಲವರು ಫಸಲನ್ನು ಮುಟ್ಟಿ ಕೀಟನಾಶಕ ಬಿದ್ದಿದೆಯೇ ಇಲ್ಲವೇ? ಎಂಬುದನ್ನು ಖಾತರಿಪಡಿಸಿಕೊಂಡರು.

ಸಮಯದ ಉಳಿತಾಯ: ಈ ಕುರಿತು ಜಂಟಿ ಕೃಷಿ ನಿರ್ದೇಶಕರಾದ ಅಬೀಬ್​​ ಎಸ್ ಎಸ್ ಮಾತನಾಡಿ, ಒಂದು ಹೆಕ್ಟೇರ್ ಭತ್ತದ ಬೆಳೆಗೆ 2.5 ನಿಮಿಷದಲ್ಲಿ ಕೀಟನಾಶಕವನ್ನು ಡ್ರೋನ್ ಮೂಲಕ ಸಿಂಪಡಿಸಬಹುದು. ಇದರಿಂದ ಸಮಯ ಉಳಿತಾಯವಾಗುತ್ತದೆ. ರೈತರು ಮತ್ತೊಂದು ಕೆಲಸದೆಡೆಗೆ ಒತ್ತು ಕೊಡಬಹುದಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಅಬೀಬ್ ಎಸ್​ ಎಸ್ ಅವರು ಮಾತನಾಡಿದರು

ಮಹಿಂದ್ರ ಸುಮಿತ್ ಕಂಪನಿಯ ಡ್ರೋನ್‌ವೊಂದಕ್ಕೆ 17 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೈಗೆಟುಕುವಂತದ್ದಲ್ಲ. ಇದು ಬಹುದೊಡ್ಡ ಜಮೀನ್ದಾರರು ಮತ್ತು ನೂರಾರು ಎಕರೆ ಒಡೆಯರಿಗೆ ಅನುಕೂಲವಾಗುತ್ತದೆ. ಈ ಡ್ರೋನ್‌ನಿಂದ 60 ನಿಮಿಷದಲ್ಲಿ 60 ಎಕರೆಗೆ ಕೀಟನಾಶಕ ಸಿಂಪಡಿಸಬಹುದು. 1.40 ಗಂಟೆಯಲ್ಲಿ 100 ಎಕರೆಗೆ ಔಷಧ ಸಿಂಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಂತ್ರಜ್ಞಾನದಿಂದ ಔಷಧ ಸಿಂಪಡನೆ: ಹ್ಯಾಂಡ್ ಸ್ಪೆಷ್, ಬ್ಯಾಟರಿ ಸ್ಪೆಷ್, ಪವರ್ ಸ್ಪೆಷ್ ಬಳಿಕ ನೂತನ ಆವಿಷ್ಕಾರ ಡ್ರೋನ್ ಮೂಲಕ ಔಷಧ ಸ್ಪೆಷ್ ಮಾಡಲಾಗುತ್ತಿದೆ. ಇದರಿಂದ 200 ಲೀಟರ್ ಔಷಧ ಬದಲು ಕಡಿಮೆಯಲ್ಲೇ ಮುಗಿಯುತ್ತದೆ. ಮನುಷ್ಯನ ಆರೋಗ್ಯ ಕಾಪಾಡುತ್ತದೆ. ಬೆಳೆಗೆ ಹೆಚ್ಚಿನ ಔಷಧ ತಗಲುವುದಿಲ್ಲ. ಡ್ರೋನ್ ತಂತ್ರಜ್ಞಾನದಿಂದ ಔಷಧ ಸಿಂಪಡಿಸುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಪ್ರಾರಂಭಿಕ ಹಂತದಲ್ಲಿದ್ದು, ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. ಕೂಲಿಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಡ್ರೋನ್ ತಂತ್ರಜ್ಞಾನದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಜಂಟಿ ಕೃಷಿ ನಿರ್ದೇಶಕರಾದ ಅಬೀಬ್​​ ಎಸ್ ಎಸ್ ಹೇಳಿದ್ದಾರೆ.

ಓದಿ:ಎಪಿಎಂಪಿ ಮಾರುಕಟ್ಟೆಗಳಲ್ಲಿ ಮಧ್ಯಸ್ಥಗಾರರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ABOUT THE AUTHOR

...view details