ಕರ್ನಾಟಕ

karnataka

ಹಿಜಾಬ್ ಬೆನ್ನಲ್ಲೇ ತಲೆ ಎತ್ತಿದ ಸಿಂಧೂರ ವಿವಾದ; ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ ಆರೋಪ

By

Published : Feb 18, 2022, 11:39 AM IST

Updated : Feb 18, 2022, 1:28 PM IST

ಹಿಜಾಬ್ ವಿವಾದದ ಬೆನ್ನಲ್ಲೇ ಇದೀಗ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಿಂಧೂರ ವಿವಾದ ತಲೆ ಎತ್ತಿದೆ.

ಉಪನ್ಯಾಸಕ ಹಾಗೂ ವಿದ್ಯಾರ್ಥಿ ಮಧ್ಯೆ ವಾಗ್ವಾದ

ವಿಜಯಪುರ: ಹಿಜಾಬ್ ವಿವಾದದ ಜೊತೆಗೆಯೇ ಈಗ ಸಿಂಧೂರ ವಿವಾದ ಶುರುವಾಗಿದೆ. ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಯೋರ್ವನಿಗೆ ಕಾಲೇಜು ಪ್ರವೇಶ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು, ಹಿಂದೂ ವಿದ್ಯಾರ್ಥಿನಿಯರು ಕುಂಕುಮ ಹಚ್ಚಿಕೊಂಡು ಬರುತ್ತಾರಲ್ಲಾ ಎಂದು ಪ್ರಶ್ನಿಸಿದ್ದಳು. ಇಂದು ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಶಾಲಾ ಪ್ರವೇಶ ನಿರಾಕರಣೆ ಮಾಡಲಾಗಿದ್ದು, ಪರಿಣಾಮ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಮಧ್ಯೆ ಕೆಲಕಾಲ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.

ಹಿಜಾಬ್ ಬೆನ್ನಲ್ಲೇ ತಲೆ ಎತ್ತಿದ ಸಿಂಧೂರ ವಿವಾದ; ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ ಆರೋಪ

ಇಂಡಿ ಪಟ್ಟಣದ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ಹಾಗೂ ‌ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಹಿಜಾಬ್ ಹಾಗೂ ಕೇಸರಿ ಶಾಲು ಹೊರತುಪಡಿಸಿ ಹಣೆಗೆ ಕುಂಕುಮ‌, ನಾಮ ಹಾಕಲು‌ ಯಾಕೆ ಅನುಮತಿಯಿಲ್ಲ ಎಂದು ವಿದ್ಯಾರ್ಥಿ‌ ಪ್ರಶ್ನೆ ಮಾಡಿದ್ದಾನೆ.

ಇದನ್ನೂ ಓದಿ:ಹಿಜಾಬ್​ ಧರಿಸಲು ಅವಕಾಶ ಕೊಡದಿದ್ದಕ್ಕೆ ರಾಜೀನಾಮೆ ನೀಡಿದ ಅತಿಥಿ ಉಪನ್ಯಾಸಕಿ

ಇದರಿಂದ ಕಾಲೇಜಿನಲ್ಲಿ ಕೆಲ‌ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಉಪನ್ಯಾಸಕರು ಮತ್ತು ಪೊಲೀಸರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿ ಕ್ಲಾಸ್​ಗೆ ಕಳುಹಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.

Last Updated : Feb 18, 2022, 1:28 PM IST

ABOUT THE AUTHOR

...view details