ಕರ್ನಾಟಕ

karnataka

ವಿಜಯ ಸಂಕೇಶ್ವರ್ ತ್ಯಾಗದಿಂದ ಯತ್ನಾಳ್ ಕೇಂದ್ರ ಸಚಿವರಾಗಿದ್ದರು: ಮುರುಗೇಶ್​ ನಿರಾಣಿ

By

Published : Jun 28, 2023, 9:14 PM IST

ಬಸನಗೌಡ ಪಾಟೀಲ ಯತ್ನಾಳ್ 2ಎ ಮೀಸಲಾತಿ ಬೇಡಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರು ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಆರೋಪಿಸಿದ್ದಾರೆ.

Etv Bharatmurugesh-nirani-reaction-on-basanagowda-patila-yatnal
ಉದ್ಯಮಿ ವಿಜಯ ಸಂಕೇಶ್ವರ ಅವರ ತ್ಯಾಗದಿಂದ ಯತ್ನಾಳ್ ಕೇಂದ್ರ ಸಚಿವರಾಗಿದ್ದರು: ಮುರುಗೇಶ್​ ನಿರಾಣಿ

ಮಾಜಿ ಸಚಿವ ಮುರುಗೇಶ್​ ನಿರಾಣಿ ಹೇಳಿಕೆ

ವಿಜಯಪುರ: ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ತ್ಯಾಗದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಕೇಂದ್ರದಲ್ಲಿ ಸಚಿವರಾಗಿದ್ದರು ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಹೇಳಿದರು. ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅಣು ಪರೀಕ್ಷೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದರು. ಅಂದು ಇವರನ್ನು ದಿ. ಅನಂತ್​ ಕುಮಾರ್​ ತಡೆದರು. ನಂತರ ಜೆಡಿಎಸ್ ಸೇರಿ‌ ಟೋಪಿ ಹಾಕಿಕೊಂಡು ನಮಾಜ್ ಮಾಡಿದ್ದರು ಎಂದು ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ಹಿಂದೂ ಹುಲಿ ಎಂದು ಹೇಳುವುದು ಹಾಸ್ಯಾಸ್ಪದ. ವಿಜಯಪುರದಲ್ಲಿ ಹೇಗೆ ಗೆದ್ದಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಬೇರೆ ಜಿಲ್ಲೆಯಲ್ಲಿ ಬಿಡಿ ವಿಜಯಪುರ ಜಿಲ್ಲೆಯಲ್ಲೂ ಯಾರೊಬ್ಬ ಬಿಜೆಪಿ ಶಾಸಕರನ್ನೂ ಗೆಲ್ಲಿಸಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್​ ಶೆಟ್ಟರ್, ಪ್ರಹ್ಲಾದ ಜೋಶಿ, ವಿಜಯ ಸಂಕೇಶ್ವರ ಸೇರಿದಂತೆ ಎಲ್ಲರಿಗೂ ಬೈದಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿಯಲ್ಲಿ 2500 ಕೋಟಿ ಕೊಟ್ಟರೆ ಸಿಎಂ, ಮಂತ್ರಿ ಮಾಡಲು ರೂ. 100 ಕೋಟಿ, 10-25 ಕೋಟಿ ಕೊಟ್ಟವರಿಗೆ ನಿಗಮ ಮಂಡಳಿ ನೀಡುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿಗೆ ಡ್ಯಾಮೇಜ್ ಆಗಿದೆ. ಮಂದ್ಯಾಗ ಒದೆಯುವುದು, ಸಂಧ್ಯಾಗ ಕಾಲ ಹಿಡಿಯುವ ಕೆಲಸ ಮಾಡಿದ್ದಾರೆ.
ನಡಹಳ್ಳಿ ವಿರುದ್ಧ ದೇವರ ಹಿಪ್ಪರಗಿಯಲ್ಲಿ ಹೀನಾಯವಾಗಿ ಹಿಂದೆ ಸೋತಿದ್ದು ನೆನಪಿಸಿಕೊಳ್ಳಲಿ. ನಂತರ ಜೆಡಿಎಸ್‌ನಿಂದ ವಿಜಯಪುರದಲ್ಲಿ ಸ್ಪರ್ಧಿಸಿ ಸೋತಿದ್ದು‌ ಯಾಕೆ ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಸಿಎಂ‌ ಆಗಿದ್ದಾಗ ಜಾತಿ ಹೆಸರಿನಲ್ಲಿ ಬ್ಲ್ಯಾಕ್​ಮೇಲ್ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಆತ್ಮಾವಲೋಕನ ಸಭೆಗಳಲ್ಲಿ ಚಿಕ್ಕೋಡಿ, ಬಾಗಲಕೋಟೆ ಜೋಕರ್ ಎಂದು ಹೇಳಿಕೊಂಡು 3 ಗಂಟೆಗಳ ಸಭೆಯಲ್ಲಿ ಇವರೇ 45 ನಿಮಿಷ ಮಾತನಾಡಿದ್ದಾರೆ. ವಿಜಯಪುರ ಸಭೆ ವಿಳಂಬವಾಗಲಿ ಅಥವಾ ನಡೆಯಬಾರದು ಎಂದು ದುರುದ್ದೇಶ ಅವರಲ್ಲಿತ್ತು. ಶಶಿಕಲಾ ಜೊಲ್ಲೆ, ಸಂಸದ ರಮೇಶ್​ ಜಿಗಜಿಣಗಿ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಕ್ಕೆ ಯತ್ನಾಳ್​ ಬೆಂಬಲಿಗರು ಗೊಂದಲ‌ ಸೃಷ್ಠಿಸಿದ್ದಾರೆ ಎಂದು ಆರೋಪಿಸಿದರು.

ನಿಗದಿತ ಸಮಯಕ್ಕಿಂತ ಮೂರೂವರೆ ಗಂಟೆ ವಿಳಂಬವಾದರೂ ಯತ್ನಾಳ್​ ಸಭೆಗೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ ಅವರು, ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಜೊತೆ ವಿಷಯ ಹಂಚಿಕೊಂಡಿದ್ದು ಎಷ್ಟು ಸರಿ?, ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಲ್ಲ,
ಯತ್ನಾಳ್​ ಪಾಪದ ಕೊಡ ತುಂಬಿದೆ. ನಾವು ರಾಜ್ಯದ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ. ನಿರಾಣಿ ಯಾರನ್ನು ಸೋಲಿಸಲು ಯಾರಿಗೆ, ಯಾವಾಗ ಹಣ ನೀಡಿದ್ದಾರೆ ಎಂದು ಸ್ಪಷ್ಡಪಡಿಸಲಿ, 2012ರಲ್ಲಿ ನಾನು ಕೈಗಾರಿಕೆ ಸಚಿವನಾಗಿದ್ದಾಗ ಜಿಲ್ಲಾ ಪಂಚಾಯಿತಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಡಿದ್ದೆ, ನೀವು‌ ಇಂಥ ಯಾವ ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಯತ್ನಾಳ್ 2ಎ ಮೀಸಲಾತಿ ಬೇಡಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರು ಎಂದು ಆರೋಪಿಸಿದ ಅವರು, ವಿಜಯಪುರ ಜನ ಬಹಳ ಬುದ್ದಿವಂತರು. ಮನಸ್ಸು ಮಾಡಿದರೆ ಗೋಳಗುಮ್ಮಟ ಕಟ್ಟಬಲ್ಲರು, ಇಲ್ಲದಿದ್ದರೆ ಬಾರಾ ಕಮಾನ್ ಮಾಡಬಹುದು. ಇನ್ನು ಮುಂದಾದರೂ ತಮ್ಮ ವರ್ತನೆ, ಮಾತುಗಳ ಬಗ್ಗೆ ಎಚ್ಚರವಿರಲಿ, ಈ ಹಿಂದೆ ಪಕ್ಷದಿಂದ ಉಚ್ಛಾಟಿಸಿದ ಸಂದರ್ಭದಲ್ಲಿ ಸುಧಾರಿಸುವುದಾಗಿ ಕೈಕಾಲು ಹಿಡಿದಾಗ ಒಂದು ಅವಕಾಶ ನೀಡಲಾಗಿತ್ತು. ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಆದರೆ, ಈಗ ಮತ್ತೆ ನಾಯಿ ಬಾಲದಂತೆ ವರ್ತಿಸುತ್ತಿದ್ದಾರೆ. ರಾಜ್ಯ, ರಾಷ್ಟ್ರ ನಾಯಕರ ಗಮನಕ್ಕೆ ಈ ವಿಷಯ ತರುತ್ತೇವೆ ಎಂದು ಯತ್ನಾಳ್​ಗೆ ಎಚ್ಚರಿಕೆ ನೀಡಿದರು.

ಸಂಸದ ರಮೇಶ್​ ಜಿಗಜಿಣಗಿ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಕಾಸುಗೌಡ, ಸುರೇಶ ಬಿರಾದಾರ, ಉಪಸ್ಥಿತರಿದ್ದರು.

ಇದನ್ನೂ ಓದಿ:ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹೀ‌ನಾಯ ಸೋಲು ಕಂಡಿದೆ; ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ: ರೇಣುಕಾಚಾರ್ಯ ಆಗ್ರಹ

ABOUT THE AUTHOR

...view details