ಕರ್ನಾಟಕ

karnataka

2023ರ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಯತ್ನಾಳ್​​​ಗೆ ನಿರಾಣಿ ಸವಾಲು: ಟಿಕೆಟ್​ ಇವರು ಕೊಡ್ತಾರಾ ಎಂದು ತಿರುಗೇಟು ನೀಡಿದ ಬಸವನಗೌಡ​

By

Published : Jan 7, 2023, 4:30 PM IST

Updated : Jan 7, 2023, 4:55 PM IST

ಯತ್ನಾಳ್​ ಮತ್ತು ನಿರಾಣಿ ನಡುವೆ ವಾಕ್ಸಮರ - ಸಿಡಿ ವಿಚಾರದಲ್ಲಿ ಇಬ್ಬರು ಬಿಜೆಪಿಗರ ನಡುವೆ ಕಲಹ - 2023ರ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಯತ್ನಾಳ್​ಗೆ ಸವಾಲ್​ ಹಾಕಿದ ನಿರಾಣಿ - ಮೀಸಲಾತಿ ವಿಚಾರದಲ್ಲಿ ನಿರಾಣಿ ರಾಜಕೀಯ ಮಾಡುತ್ತಿದ್ದಾರೆ ಎಂದು ಯತ್ನಾಳ್​ ಆರೋಪ.

murugesh-nirani-and-basangouda-patil-yatnal-election-fight
ನಿರಾಣಿಗ vs ಯತ್ನಾಳ್​

ಯತ್ನಾಳ್​ ಮತ್ತು ನಿರಾಣಿ ನಡುವೆ ವಾಕ್ಸಮರ

ವಿಜಯಪುರ:ವಿಜಯಪುರ-ಬಾಗಲಕೋಟೆ ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರ ತೆರೆಮರೆ ಆರೋಪ- ಪ್ರತ್ಯಾರೋಪ ಈಗ ಬಹಿರಂಗಗೊಂಡಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ಪರೋಕ್ಷವಾಗಿ ಕೈಗಾರಿಕೆ ಸಚಿವ ಮುರುಗೇಶ‌ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನ್ನ ಹಾಗೂ ಹರಿಹರ ಪೀಠದ ಸ್ವಾಮೀಜಿ, ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿ ಇದ್ದು ಬದಲಾವಣೆ ಆಗಿಲ್ಲ. ರಾಜಕೀಯಕ್ಕೆ ಬರೋ‌ ಮೊದಲು ನೀವೇನಾಗಿದ್ದಿರಿ ಅರ್ಥ ಮಾಡಿಕೊಳ್ಳಿ, ಆತ್ಮಾವಲೋಕನ ಮಾಡಿಕೊಳ್ಳಿ ಎಂದು ನಿರಾಣಿ ಪರೋಕ್ಷವಾಗಿ ಯತ್ನಾಳ್ ಸೋಲಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ತಾಕತ್ತು ಇದ್ದರೆ ನಿನ್ನ ಎಲೆಕ್ಷನ್​​ ನೀನು ಮಾಡು, ನಾನು ನನ್ನ ಎಲೆಕ್ಷನ್ ಮಾಡುತ್ತೇನೆ ಎಂದ ನಿರಾಣಿ, ಇದೇ ವೇಳೆ ಮುಂದಿನ ಚುನಾವಣೆ ಗೆದ್ದು ತೋರಿಸಲಿ ಎನ್ನುವ ದಾಟಿಯಲ್ಲಿ ಯತ್ನಾಳಗೆ ಸವಾಲು ಹಾಕಿದರು. ಹುಡುಗಾಟ ಹಚ್ಚೀರಿ? ನೀನು ಗೆದ್ದು ತೋರಿಸು, ವಿಜಯಪುರ ಜನ ನಿನಗೆ 2023ರಲ್ಲಿ ಪಾಠ ಕಲಿಸ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಾಣಿ ಬಳಿ ಸಿಡಿ ಇವೆ ಎಂದು ಯತ್ನಾಳ ಮಾಡಿರುವ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಹಾಗೆ ಮಾಡಿದವರು ಅವರೇ ಇರಬೇಕು, ಹಾಗಾಗಿ ಅವರಿಗೆ ಗೊತ್ತಿದೆ. ಯಾರು ಹೋಗಿ ಸ್ಟೇ ತಂದಿದಾರೆ ಅಂತ ಅವರಿಗೆ ಗೊತ್ತಿದೆ. ನಮಗೆ ಕೆಲಸ ಮಾಡೋಕೆ 24 ಗಂಟೆ ಸಾಕಾಗುತ್ತಿಲ್ಲ, ಇಂಥದ್ದನ್ನೆಲ್ಲ ನಾವು ಮಾಡಲ್ಲ ಎಂದು ಪರೋಕ್ಷವಾಗಿ ಯತ್ನಾಳ ವಿರುದ್ಧ ಖಡಕ್ ಆಗಿ ಎಚ್ಚರಿಕೆ ಕೊಟ್ಟರು.‌

ಬೆಳಗ್ಗೆ ನಿರಾಣಿ ಮಾತಿಗೆ ಮಧ್ಯಾಹ್ನ ಯತ್ನಾಳ್​ ತಿರುಗೇಟು:ಇಂದು ಬೆಳಗ್ಗೆ ಮಾತನಾಡಿದ್ದ ಸಚಿವ ಮುರುಗೇಶ ನಿರಾಣಿ, ಸ್ಥಳೀಯ ನಾಯಕರೊಬ್ಬರು ಸಿಡಿ ವಿಚಾರವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಮಧ್ಯಾಹ್ನ ವಿಜಯಪುರದ ನಗರದ ಜೋರಾಪುರ ಪೇಟೆಯಲ್ಲಿ ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ನಿರಾಣಿಗೆ ಕೌಂಟರ್ ನೀಡಿ, ಅವರ ಬಳಿ ಸಿಡಿ ಇದ್ದರೆ ಬಿಡುಗಡೆ ಮಾಡಲು ಹೇಳಿ ಎಂದರು.

ಮೀಸಲಾತಿ ವಿಚಾರದಲ್ಲಿ ನಿರಾಣಿ ರಾಜಕೀಯ ಲಾಭ ಮಾಡುತ್ತಿದ್ದಾರೆ:ಪಂಚಮಸಾಲಿ ಮೀಸಲಾತಿ ವಿಚಾರವನ್ನು ಇವರು ಅಧಿಕಾರಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ ನಾವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಪಂಚಮಸಾಲಿ ಮೀಸಲಾತಿಗಾಗಿ ನಾನು ಈ ಹಿಂದೆಯೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅಂದಿನ ಪ್ರಧಾನಿ ವಾಜಪೇಯಿ ಬಳಿಯೇ 2ಎ ಮೀಸಲಾತಿಗಾಗಿ ಮುಖಂಡರನ್ನು ಕರೆದುಕೊಂಡು ಹೋಗಿದ್ದೆ ಎಂದು ತಿಳಿಸಿದರು.

ಅರ್ಧಕ್ಕೆ ಬಿಟ್ಟಿದ್ದ ಹೋರಾಟವನ್ನು ನಾವು ಮುಂದುವರೆಸಿದ್ದೇವೆ. ಇವರೆಲ್ಲಿ ಮಧ್ಯ ಬಂದು ರಾಜಕೀಯ ಲಾಭಕ್ಕಾಗಿ, ಸಚಿವರಾಗಲು ಬ್ಲ್ಯಾಕ್ ಮೇಲ್ ಮಾಡಲಿಕ್ಕೆ ಉಪಯೋಗಿಸಿಕೊಂಡರು. ಇವರು ಸಮಾಜಕ್ಕೆ ಮೀಸಲಾತಿ ಸಿಗಬೇಕೆಂದು ಹೋರಾಟ ಮಾಡಿದವರಲ್ಲ. ಹರಿಹರ ಸ್ವಾಮಿ ನಿರಾಣಿಯನ್ನು ಮಂತ್ರಿ ಮಾಡಲೇಬೇಕೆಂದು ಕಾರ್ಯಕ್ರಮದಲ್ಲೇ ಸಿಎಂ ಯಡಿಯೂರಪ್ಪರಿಗೆ ಒತ್ತಾಯ ಮಾಡಿದ್ದರು. ಇಲ್ಲವಾದರೆ ಇಡೀ ಸಮಾಜ ನಿಮ್ಮ ವಿರುದ್ಧ ಆಗುತ್ತದೆ ಎಂದು ಹೇಳಿದ್ದರು. ಇದರಿಂದ ಬೇಸರಗೊಂಡು ಯಡಿಯೂರಪ್ಪ ಕಾರ್ಯಕ್ರಮ ದಿಂದಲೇ ಹೊರಗಡೆ ಹೊರಟಿದ್ದರು ಎಂದು ಹೇಳಿದರು.

ಮೀಸಲಾತಿ ಕುರಿತು ಕ್ಯಾಬಿನೆಟ್​ನಲ್ಲಿ ಅಜೆಂಡಾದಲ್ಲೇ ಇಲ್ಲ. 2 ಸಿ ಹಾಗೂ 2 ಡಿ ಎಂದರೇನು ಎಂದು ಇನ್ನೂವರೆಗೂ ಪ್ರೊಸಿಡಿಂಗ್ಸ್ ಕೊಟ್ಟಿಲ್ಲ. 2 ಡಿ ಯನ್ನು ಎಲ್ಲ ವೀರಶೈವ ಲಿಂಗಾಯತರಿಗೆ ಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ 2ಡಿ ಯಲ್ಲಿ ಎಷ್ಟು ಪರ್ಸೆಂಟ್ ಕೊಡುತ್ತೀರಿ. ಚುನಾವಣಾ ನೀತಿ ಸಂಹಿತೆ ಜಾರಿಯಾಗಲು 2 ತಿಂಗಳ 9 ದಿನಗಳು ಮಾತ್ರ ಬಾಕಿ ಇದೆ. ಮೂರು ತಿಂಗಳೊಳಗಾಗಿ ಪ್ರರ್ಸೆಂಟ್ ಬಗ್ಗೆ ಹೇಳುತ್ತೇವೆ ಎನ್ನುವುದು ಸುಳ್ಳು. ಇದು ಮೀಸಲಾತಿ ಕೊಡಲ್ಲಾ ಎಂಬ ರೀತಿಯಲ್ಲಿ ಇದೆ ಎಂದು ಗರಂ ಆದರು.

ಮತ್ತೆ ಆಣೆ ಪ್ರಮಾಣ:ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು, ನನ್ನ ವಿರುದ್ಧ ನಿರಾಣಿ, ವಿಜಯೇಂದ್ರ ಹಣ ಹೂಡಿಕೆ ಮಾಡಿದ್ದರು. ಇಬ್ಬರು ಹಣ ಕಳಿಸಿಲ್ಲ ಎಂದು ಧರ್ಮಸ್ಥಳದ‌‌ ಮಂಜುನಾಥ ಮೇಲೆ ಆಣೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.‌ ಇವರಿಬ್ಬರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಹಣ ಬಂದಿಲ್ಲ, ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ. ವಿಜಯಪುರ ಜನತೆ ಹಣ ತೆಗೆದುಕೊಳ್ಳದೇ ನಮಗೆ ಮತ ಹಾಕಿದ್ದಾರೆ. ನಿರಾಣಿ ಬೆಂಬಲಿಗರು ಹಣ ಹೊಡೆದುಕೊಂಡಿದ್ದಾರೆ, ಈ ಬಗ್ಗೆ ಈಗಾಗಲೇ ಬಿಜೆಪಿ ಹೈಕಮಾಂಡಿಗೆ‌ ಮಾಹಿತಿ ಹೋಗಿದೆ ಎಂದು ಮತ್ತೊಂದು ವಿಚಾರ ಬಯಲಿಗೆಳೆದರು.

ಇದೆಲ್ಲ ನಮ್ಮ ಕಡೆಗೆ ನಡೆಯೋದಿಲ್ಲ, ನಿರಾಣಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಯತ್ನಾಳ್​:ನನಗೆ ಟಿಕೇಟ್ ನೀಡಲು ಇವರಾರು? ಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಯತ್ನಾಳಗೆ ಟಿಕೇಟ್ ಸಿಗುವುದಿಲ್ಲ, ಇನ್ನೂ ಮೂರು ತಿಂಗಳು ಕಾಯಿರಿ ಎಲ್ಲವೋ ಗೊತ್ತಾಗುತ್ತದೆ ಎಂದು ನಿರಾಣಿ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್​, ನನಗೆ ಟಿಕೆಟ್​ ಕೊಡಲು ಇವರು ಯಾರು. ಟಿಕೆಟ್​ ಕೊಡುವ ಅಧಿಕಾರ ಇವರಿಗೆ ಎಲ್ಲಿದೆ ಎಂದು ಟೀಕೆ ಮಾಡಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

Last Updated :Jan 7, 2023, 4:55 PM IST

ABOUT THE AUTHOR

...view details