ಕರ್ನಾಟಕ

karnataka

ಸಿದ್ದೇಶ್ವರ ಸ್ವಾಮೀಜಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಚಿವ ಶ್ರೀರಾಮುಲು

By

Published : Dec 30, 2022, 2:29 PM IST

Updated : Dec 30, 2022, 3:27 PM IST

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ ಶ್ರೀರಾಮುಲು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಬಳಿಕ ಸಾಕಷ್ಟು ವಿಚಾರಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

sriramulu
ಶ್ರೀರಾಮುಲು

ಸಚಿವ ಶ್ರೀರಾಮುಲು ಮಾತನಾಡುತ್ತಿರುವುದು.

ವಿಜಯಪುರ:ನಡೆದಾಡುವ ದೇವರೆಂದೇ ಜನಮನ್ನಣೆ ಗಳಿಸಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಸಚಿವ ಬಿ ಶ್ರೀರಾಮುಲು ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀಗಳ ಆರೋಗ್ಯ ವಿಚಾರಿಸಲು ಆಗಮಿಸಿ, ಅವರ ದರ್ಶನ ಪಡೆದಿದ್ದೇನೆ. ಪೂಜ್ಯರಿಗೆ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ಮಾತನಾಡಿದ್ದು, ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.

ಸ್ವಾಮೀಜಿ ಆರೋಗ್ಯದ ಕುರಿತಾಗಿ ನಾನು ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದೇನೆ. ಈ ವೇಳೆ, ಸಿಎಂ ಕಿರಿಯ ಶ್ರೀಗಳ ಜೊತೆಗೂ ಮಾತನಾಡಿದ್ದಾರೆ. ರಾಜ್ಯಕ್ಕೆ ಅಮಿತ್​ ಶಾ ಭೇಟಿ ನೀಡಿದ ಬಳಿಕ ಸ್ವಾಮೀಜಿ ದರ್ಶನಕ್ಕೆ ಸಿಎಂ ಬರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಶ್ರೀಗಳ ಶಿಷ್ಯ ನಾನು:ಕಳೆದ 20 ವರ್ಷಗಳಿಂದ ನಾನು ಮಠದ ಶಿಷ್ಯನಾಗಿ, ಶ್ರೀಗಳ ಭಕ್ತನಾಗಿ ಅವರ ಸಂಪರ್ಕದಲ್ಲಿದ್ದೇನೆ. ಅವರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದೇನೆ ಮತ್ತು ಆಶೀರ್ವಾದ ಪಡೆಯುತ್ತಾ ಬಂದಿದ್ದೇನೆ. ಸ್ವಾಮೀಜಿ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಿದೆ. ಅವರು ಆಶ್ರಮದಲ್ಲೇ ಇರುವುದಾಗಿ ಹೇಳಿದ್ದಾರೆ. ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮೀಸಲಾತಿ ಬಗ್ಗೆ ಉತ್ತರಿಸಿಲ್ಲ:ಪಂಚಮಸಾಲಿ ಮೀಸಲಾತಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು. ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ನಾನು ಸ್ವಾಮೀಜಿ ದರ್ಶನಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದರು.

ಕಿರಿಯ ಶ್ರೀಗಳೊಂದಿಗೆ ಮಾತುಕತೆ: ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ ಸಚಿವರಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಾಥ್​ ನೀಡಿದರು. ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸಚಿವರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದ ಆಶ್ರಮದ ಕಿರಿಯ ಶ್ರೀಗಳು ಮಾತುಕತೆ ನಡೆಸಿದರು.

ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ: ಆಶ್ರಮದ ಸ್ವಾಮೀಜಿಗಳ ಮನವಿ

ಶ್ರೀಗಳ ಆರೋಗ್ಯ ವಿಚಾರವಾಗಿ ಹರಡಿರುವ ಸುದ್ದಿಯ ಕಾರಣಕ್ಕೆ ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ತಂಡೋಪತಂಡವಾಗಿ ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದ್ದರು. ದರ್ಶನಕ್ಕಾಗಿ ಭಕ್ತರು ಕಾದು ಕುಳಿತಿದ್ದರು. ವಿವಿಧ ಮಠಾಧೀಶರು ಯೋಗಾಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬುಧವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸೇರಿ ಅನೇಕ‌ ಮುಖಂಡರು ಆಗಮಿಸಿದ್ದರು.

ಸ್ವಾಮೀಜಿ ಅನಾರೋಗ್ಯ ವಿಚಾರ:ಸದ್ಯ ಚಳಿಯಿರೋ ಕಾರಣ ಸಹಜವಾದ ನೆಗಡಿ ಕೆಮ್ಮಿನ ತೊಂದರೆ ಸಿದ್ದೇಶ್ವರ ಸ್ವಾಮೀಜಿಗೆ ಕಾಣಿಸಿಕೊಂಡಿದೆ. ಇಷ್ಟಾಗಿಯೂ ದೈನಂದಿನ ಕಾರ್ಯಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಜೊತೆಗೆ ಭಕ್ತರನ್ನೂ ಭೇಟಿಯಾಗಿದ್ದಾರೆ. ಆದರೆ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ವಿಚಾರದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ವದಂತಿ ಹರಡಲಾಗಿತ್ತು.

ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಜ್ಞಾನ ಯೋಗಾಶ್ರಮಕ್ಕೆ ಸಚಿವ ಬಿ.ಸಿ.ನಾಗೇಶ್ ಭೇಟಿ

Last Updated : Dec 30, 2022, 3:27 PM IST

ABOUT THE AUTHOR

...view details