ಮುದ್ದೇಬಿಹಾಳ: ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧಿಸಲಿದೆ ಎಂದು ವಿಜಯಪುರ ಜಿಲ್ಲಾ ಜೆಡಿಎಸ್ ಪಕ್ಷದ ವೀಕ್ಷಕ ಎನ್.ಹೆಚ್.ಕೋನರೆಡ್ಡಿ ಹೇಳಿದರು.
ಓದಿ: ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತೆ: ಸಚಿವ ಶೆಟ್ಟರ್
ಪಟ್ಟಣದ ಕರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ದಿ. ಮನಗೂಳಿ ಅವರ ಪುತ್ರ ಅಶೋಕ ನನ್ನೊಂದಿಗೆ ಹತ್ತಾರು ಬಾರಿ ಮಾತುಕತೆಯಾಡಿದ್ದು, ಜೆಡಿಎಸ್ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಎಂದು ಹೇಳಿದ್ದರು.
ಅಲ್ಲದೇ ಅವರ ಕುಟುಂಬ ದೇವೇಗೌಡರಿಂದ ಸಾಕಷ್ಟು ಪಡೆದುಕೊಂಡಿದೆ. ಆದರೆ ಮನಗೂಳಿ ಕುಟುಂಬದವರು ಇದೀಗ ಅವರಿಗೆ ದ್ರೋಹ ಎಸಗಿದ್ದಾರೆ ಎಂದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಹೀಗಾಗಿ ಆ ಪಕ್ಷದವರು ಜೆಡಿಎಸ್ ಪಕ್ಷದ ನಾಯಕರುಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಇವರಿಗೆ ನಾಯಕರನ್ನು ಬೆಳೆಸುವ ತಾಕತ್ತಿಲ್ಲ ಎಂದು ಹರಿಹಾಯ್ದರು.
ಉ.ಕರ್ನಾಟಕಕ್ಕೆ ಅನ್ಯಾಯವಾಗಿಲ್ಲವೇ?
ಈ ಹಿಂದೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈಗ ತಮ್ಮ ಪಕ್ಷದಲ್ಲಿಯೇ ಉತ್ತರ ಕರ್ನಾಟಕಕ್ಕೆ ಸಂಪುಟದಲ್ಲಿ ಸ್ಥಾನಮಾನ ಕೊಡುವುದರಲ್ಲಿ ಅನ್ಯಾಯವಾಗಿಲ್ಲವೇ?. ಅದರ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಶ್ನಿಸಿದರು.
ವಿಜಯಪುರ ಜಿಲ್ಲೆಗೆ ಬೆಳಗಾವಿ ಭಾಗದ ಸಚಿವರು ಉಸ್ತುವಾರಿ ಸಚಿವರಾಗಿದ್ದಾರೆ. ಮೂವರು ಬಿಜೆಪಿ ಶಾಸಕರಿದ್ದರೂ ಇಲ್ಲಿ ಸಚಿವ ಸ್ಥಾನ ಕೊಟ್ಟಿಲ್ಲ. ಬಸನಗೌಡ ಪಾಟೀಲ ಯತ್ನಾಳರಿಗೆ ಕೊಟ್ಟರೆ ನಡಹಳ್ಳಿಯವರಿಗೆ ಆಗುವುದಿಲ್ಲ. ನಡಹಳ್ಳಿಗೆ ಕೊಟ್ಟರೆ ಯತ್ನಾಳರಿಗೆ ಆಗುವುದಿಲ್ಲ ಎಂದು ಟೀಕಿಸಿದರು. ನಡಹಳ್ಳಿಯವರು ಮಾತನಾಡಬಾರದು ಎಂದು ಆಹಾರ ನಿಗಮ ಕೊಟ್ಟು ಸುಮ್ಮನೆ ಕೂರಿಸಿದ್ದಾರೆ ಎಂದು ಹೇಳಿದರು.