ವಿಜಯಪುರ:ಈ ಬಾರಿ ಜೆಡಿಎಸ್ಗೆ ಪೂರ್ಣ ಬಹುಮತ ನೀಡಿ, ನಾನು ಕೊಟ್ಟ ಭರವಸೆ ಈಡೇರಿಸದ್ದಿದ್ದರೆ 2028ರ ವಿಧಾನಸಭೆ ಚುನಾವಣೆಗೆ ಮುನ್ನವೇ ಪಕ್ಷ ವಿಸರ್ಜನೆ ಮಾಡುತ್ತೇನೆ. ನಿಮ್ಮ ಹತ್ತಿರ ಮತ ಕೇಳಲು ಜೆಡಿಎಸ್ ಬರುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಸಿಂದಗಿ ಪಟ್ಟಣದ ಅಂಜುಮನ್ ಕಾಲೇಜಿನ ಮೈದಾನದಲ್ಲಿ ನಡೆದ ಪಂಚರತ್ನ ರಥ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಸಾಲಗಾರರು ಆಗದಂತೆ ನೋಡಿಕೊಳ್ಳದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಸಿಂದಗಿಯ ಜನರು ಮಾಜಿ ಪ್ರಧಾನಿ ದೇವೇಗೌಡರು ಅವರು ನೀಡಿದ್ದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ, ದೇವೇಗೌಡರ ಮೇಲೆ ನೀವಿಟ್ಟ ಪ್ರೀತಿ ಮರೆತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಪಂಚರತ್ನ ಯೋಜನೆಗಳಿಂದ ರಾಮರಾಜ್ಯ:ಪಂಚರತ್ನ ಯೋಜನೆಗಳ ಬಗ್ಗೆ ಮಾತನಾಡಲು ಮೂರ್ನಾಲ್ಕು ಗಂಟೆ ಬೇಕು. ಪಂಚರತ್ನ ಯೋಜನೆಗೆ ಜಾತಿ - ಧರ್ಮ ಇಲ್ಲ. ಈ 5 ಕಾರ್ಯಕ್ರಮ ಜಾರಿಯಾದರೆ ರಾಜ್ಯ ರಾಮರಾಜ್ಯ ಆಗುತ್ತದೆ. ಕಾಂಗ್ರೆಸ್, ಬಿಜೆಪಿ ಜತೆಗೆ ಸೇರಿಕೊಂಡು, ಈ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡೋದು ಸಾಧ್ಯವಿಲ್ಲ. ಈ ಬಾರಿ ಕಾಂಗ್ರೆಸ್-ಬಿಜೆಪಿ ಜತೆಗೆ ಸಾತ್ ಇಲ್ಲ ಎಂದು ತಿಳಿಸಿದರು.
ಯತ್ನಾಳ್ - ನಿರಾಣಿ ಕಿತ್ತಾಟ ಪ್ರಸ್ತಾಪ: ಒಂದೇ ಪಕ್ಷದಲ್ಲಿದ್ದರೂ ಬಿಜೆಪಿ ಶಾಸಕರು ಮಂತ್ರಿಗಳೂ ಕೆಸರಾಚಾಟ ನಡೆಸಿದ್ದಾರೆ. ಅವರ ಬಳಕೆ ಮಾಡುವ ಭಾಷೆ ನೋಡಿದ್ದೀರಾ?. ವಿಜಯಪುರದ ನಾಯಕ, ಬಾಗಲಕೋಟ ಸಚಿವ ಎಂದು ಹೆಸರು ಹೇಳದೇ ನಿರಾಣಿ - ಯತ್ನಾಳ್ ಕಿತ್ತಾಟವನ್ನು ಪ್ರಸ್ತಾಪಿಸಿದರು. ಬಿಜೆಪಿ ಶಾಸಕ-ಸಚಿವರ ವಾಕ್ಸಮರವನ್ನೇ ಟಾರ್ಗೆಟ್ ಮಾಡಿಕೊಂಡು ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡ್ತಿದ್ದಾರೆ. ಕಾಂಗ್ರೆಸ್ - ಬಿಜೆಪಿ ರೈತರಿಗಾಗಿ ಕಾರ್ಯಕ್ರಮ ಕೊಡಲಿಲ್ಲ ಎಂದು ಅಪಾದಿಸಿದರು.