ಕರ್ನಾಟಕ

karnataka

ಜನವರಿ 26ರ ನಂತರ ಯಾರು ಯಾರನ್ನು ಸೆಳೆಯುತ್ತಾರೆ ಅನ್ನೋದನ್ನು ನೀವೇ ಕಾದು ನೋಡಿ: ಲಕ್ಷ್ಮಣ ಸವದಿ

By ETV Bharat Karnataka Team

Published : Nov 20, 2023, 4:39 PM IST

ವಿಜಯಪುರ ನಗರದಲ್ಲಿ ಆಯೋಜಿಸಲಾಗಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ‌ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Congress MLA Lakshmana Savadi slams BJP
Congress MLA Lakshmana Savadi slams BJP

ಶಾಸಕ ಲಕ್ಷ್ಮಣ ಸವದಿ

ವಿಜಯಪುರ: ಬಿಜೆಪಿ ಮೊದಲು ತನ್ನ ಪಕ್ಷದ ಒಳಬೇಗುದಿಯನ್ನು ಸರಿಪಡಿಸಿಕೊಳ್ಳಬೇಕು. ಅವರ ತಾಟಿನಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಾಟಿನಲ್ಲಿರುವ ನೊಣದ ಬಗ್ಗೆ ಏಕೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂಬ ಬಿಜೆಪಿ ರಾಜ್ಯ ನೂತನ ಅಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ನಗರದ ಸೈನಿಕ ಶಾಲಾ ಹೆಲಿಪ್ಯಾಡ್​​ನಲ್ಲಿ ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕಾಂಗ ಸಭೆಯಲ್ಲಿ ಏನೇನು ಆಗಿದೆ ಎಂಬುದನ್ನಾ ನೆನಪು ಮಾಡಿಕೊಳ್ಳಲಿ. ನಮ್ಮ ಬಗ್ಗೆ ಮಾತನಾಡೋದು ಅವಶ್ಯಕತೆಯಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಜೋಡೆತ್ತಾಗಿದ್ದರು. ಪರಿಣಾಮ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿತು. ಅಧಿಕಾರಕ್ಕಾಗಿ ಇಬ್ಬರು ಜಗಳ ಮಾಡುತ್ತಿದ್ದಾರೆಂದು ಬಿಜೆಪಿ ವಿನಾ ಕಾರಣ ಆರೋಪ ಮಾಡುತ್ತಿದೆ. ಹಾಗಾದ್ರೆ ಇವರೇನು ಸಿಎಂ ಹಾಗೂ ಡಿಕೆಶಿ ಮಧ್ಯೆ ಜಗಳ ಬಗೆ ಹರಿಸಲು ಹೋಗಿದ್ದರಾ?. ಪ್ರಚಾರಕ್ಕಾಗಿ ವಿನಾ ಕಾರಣ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ‌ ಒಗ್ಗಟ್ಟಿದೆ. 136 ಜನ ಶಾಸಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನೆಮ್ಮದಿಯಾಗಿ ಜನರು ಐದು ಗ್ಯಾರಂಟಿಗಳ ಮೂಲಕ ತೃಪ್ತಿಯಾಗಿದ್ದಾರೆ. ಅದನ್ನು ಅವರಿಗೆ ‌ನೋಡಲಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಆಪರೇಷನ್ ಹಸ್ತ ಹಾಗೂ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ ಎಂಬ ಬಿಜೆಪಿ ಮುಖಂಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸವದಿ, ಹಲವು ಬಿಜೆಪಿಯ ಹಲವು ಅತೃಪ್ತ ನಾಯಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ. ಜನವರಿ 26ರ ನಂತರ ಯಾರು ಯಾರನ್ನು ಸೆಳೆಯುತ್ತಾರೆ ಅನ್ನೋದನ್ನು ನೀವೇ ಕಾದು ನೋಡಿ. ಬಿಜೆಪಿ ಇಂದು ಮನೆಯೊಂದು ಮೂರು ಬಾಗಿಲು ಆಗಿದ್ದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಒಬ್ಬರ ಮುಖ‌ ಮತ್ತೊಬ್ಬರು ನೋಡದಂತಾಗಿದೆ. ಆಂತರಿಕ ಕಲಹ ಬಹಳ ಇದೆ. ಅದು ಯಾವತ್ತೂ ಸರಿ ಆಗಲ್ಲ. ಮುಂದೆ ಬಿಜೆಪಿಗೆ ಭವಿಷ್ಯ ಇಲ್ಲ. ಅದನ್ನು ಅರಿತುಕೊಂಡೇ ನಾನು ಬಿಜೆಪಿ ಬಿಟ್ಟು ಬಂದಿದ್ದೇನೆ. ನೋಡೋಣ, ಮುಂದೆ ನೀವು ಇರುತ್ತೀರಿ, ನಾನು ಇರುತ್ತೇನೆ. ಯಾರು ಯಾರನ್ನು ಸೆಳೆಯುತ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ ಎಂದರು.

ಜನಾರ್ದನ ರೆಡ್ಡಿಯನ್ನು ವಾಪಸ್ ಬಿಜೆಪಿಗೆ ಕರೆ ತರುವ ವಿಚಾರಕ್ಕೆ, ಅವರು ಬರುವುದಾದರೆ ಕರೆದುಕೊಳ್ಳಲಿ, ಬೇಡ ಅಂದವರಾರು? ಹೊರಗೆ ಹಾಕುವವರು ಅವರೇ, ಈಗ ಕರೆದುಕೊಳ್ಳುವರು ಅವರೇ ಎಂದು ವ್ಯಂಗ್ಯವಾಡಿದ ಸವದಿ, ಬಿಜೆಪಿಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿ ಒಕ್ಕಟ್ಟು‌ ಮುರಿದು ಹೋಗಿದೆ. ಹಿಂದೆ ಅನಂತಕುಮಾರ ನಮ್ಮನ್ನು ಚೆನ್ಮಾಗಿ ನೋಡಿಕೊಂಡರು. ಈಗ ಕುಟುಂಬ ರಾಜಕಾರಣ ಮನೆ ಮಾಡಿದೆ. ಸಿದ್ಧಾಂತ, ತತ್ವಗಳು ಗಾಳಿಗೆ ತೂರಿ ಹೋಗಿವೆ. ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದರಿಂದ ಇದನ್ನು ಹೇಳುವ ಅವಶ್ಯಕತೆ ಇಲ್ಲ. ನನಗೆ ಅನ್ಯಾಯವಾದ ನಂತರ ಕಾಂಗ್ರೆಸ್​ಗೆ ಬಂದಿದ್ದೇನೆ ಎಂದು ತಮ್ಮ ನೋವು ಹೇಳಿಕೊಂಡರು.

ತಮಗೆ ವಿಜಯೇಂದ್ರ ಅವರು ಕರೆ ಮಾಡಿದ್ದಾರಾ? ಎಂಬ ಪ್ರಶ್ನೆಗೆ, ಹೆಣ್ಣು ಗಂಡಿನ ವ್ಯವಹಾರ ನಮ್ಮಲ್ಲಿ ಅವರಲ್ಲಿ ಏನೂ ಇಲ್ಲ. ರಾಜಕೀಯವಾಗಿ ಮಾತನಾಡುವ ಪ್ರಶ್ನೆ ಇಲ್ಲ, ಅದು ಉದ್ಭವವೂ ಆಗಲ್ಲ. ಮುಂದಿನ 20 ವರ್ಷಗಳ ಕಾಲ ಭಾರತೀಯ ಜನತಾ ಪಕ್ಷ ಪ್ರತಿ ಪಕ್ಷದಲ್ಲಿಯೇ ಇರಬೇಕೆಂಬ ಸಂಕಲ್ಪ ಮಾಡಿದ್ದೇವೆ. ಜನ ಅದನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಕೂಡ ಇದೆ ಎಂದರು.

ಇದನ್ನೂ ಓದಿ:ನಮ್ಮ ಯೋಜನೆ ವಿರೋಧಿಸಿದವರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details