ಕರ್ನಾಟಕ

karnataka

ಎರಡುವರೆ ವರ್ಷದಲ್ಲಿ ಇಡೀ ಟೀಂ ಬದಲಾಗಲಿದೆ, ಉಳಿದವರಿಗೆ ಸಚಿವ ಸ್ಥಾನದ ಭಾಗ್ಯ: ಶಾಸಕ ವಿನಯ​ ಕುಲಕರ್ಣಿ

By

Published : Aug 19, 2023, 9:03 PM IST

Updated : Aug 19, 2023, 11:20 PM IST

ಎರಡುವರೆ ವರ್ಷದಲ್ಲಿ ಈಗಿರುವ ಟೀಂ ಸಂಪೂರ್ಣವಾಗಿ ಬದಲಾಗಲಿದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.

ಶಾಸಕ ವಿನಯ​ ಕುಲಕರ್ಣಿ
ಶಾಸಕ ವಿನಯ​ ಕುಲಕರ್ಣಿ

ವಿಜಯಪುರ: ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಹೈ ಕಮಾಂಡ್‌ಗೆ ಬಿಟ್ಟಿದ್ದು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ವಿಜಯಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಜನರು ಇದ್ದಾರೆ. ಎರಡುವರೆ ವರ್ಷದಲ್ಲಿ ಪೂರ್ಣ ಟೀಂ ಬದಲಾಗಲಿದೆ. ಆಗ ಉಳಿದವರಿಗೂ ಸಚಿವ ಸ್ಥಾನದ ಭಾಗ್ಯ ದೊರೆಯಲಿದೆ. 135 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಕೇವಲ 34 ಶಾಸಕರಿಗೆ ಸಚಿವ ಸ್ಥಾನ ದೊರೆಯುತ್ತದೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದರು.

ನಿಗಮ ಮಂಡಳಿಗೆ 30 ಶಾಸಕರು ಆಯ್ಕೆಯಾದರೆ ಉಳಿದವರು, ಮುಂದಿನ ದಿನಗಳಲ್ಲಿ ಸಚಿವರಾಗಬಹುದು. ಆಗ ಎಲ್ಲ ಶಾಸಕರಿಗೂ ಅವಕಾಶ ಸಿಕ್ಕಂತಾಗುತ್ತದೆ. ಸದ್ಯ ಇರುವ ಸಚಿವರು ಸಮರ್ಥರಿದ್ದಾರೆ. ಅವರಿಗೆ ಕೊಟ್ಟ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅನಾವಶ್ಯಕವಾಗಿ ಡಿಕೆಶಿ ಅವರನ್ನು ಸೂಪರ್ ಸಿಎಂ ಎನ್ನುತ್ತಿದ್ದಾರೆ. ನಮ್ಮಲ್ಲಿ ಎಲ್ಲರೂ ಸೂಪರ್ ಆಗಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಮಾಜಿ ಶಾಸಕರು ನಮ್ಮ ಸಂಪರ್ಕದಲ್ಲಿ :ಹಲವಾರು ಬಿಜೆಪಿ ಮಾಜಿ ಶಾಸಕರು, ಮುಖಂಡರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡು ಹಲವರು ಬರುತ್ತಿದ್ದಾರೆ. ಕಾಂಗ್ರೆಸ್ ಸೇರಲು ತುದಿಗಾಲು ಮೇಲೆ ನಿಂತಿದ್ದಾರೆ. ಕನಿಷ್ಠ 13-14 ಮಾಜಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೈ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವೇನು ಅವರಿಗೆ ಎದುರಾಳಿ ಅಲ್ಲ. ಮುನೇನಕೊಪ್ಪ ಅವರಿಗೆ ಸಾಕಷ್ಟು ರಾಜಕೀಯದಲ್ಲಿ ಅನುಭವ ಇದೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಬಲ ಬರುತ್ತದೆ. ಅವರು ಪಕ್ಷಕ್ಕೆ ಬರುವುದಾದರೆ ಸೇರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ ವಿನಯ ಕುಲಕರ್ಣಿ, ಯತ್ನಾಳ ಯಾವಾಗಲೂ ವೈಡ್ ಬಾಲ್ ಹಾಕುತ್ತಾರೆ. ಅವರು ಹಾಕಿದ ಬಾಲ್‌ಗಳಲ್ಲಿ ವಿಕೆಟ್ ಹಾರುತ್ತವೆ ಎನ್ನುವ ಹಾಗಿಲ್ಲ. ಅವರು ನಿತ್ಯದ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಆಗಲ್ಲ ಎಂದು ಹೇಳಿದರು. ಎರಡು ದಿನಗಳ ಹಿಂದಷ್ಟೇ ಸಚಿವ ಮುನಿಯಪ್ಪ ಅವರು ಇದೇ ವಿಚಾರವಾಗಿ ಮಾತನಾಡಿದ್ದರು. ಮುಂದಿನ ಎರಡೂವರೆ ವರ್ಷಗಳ ನಂತರ ಪಕ್ಷದ ಹಿರಿಯ ನಾಯಕರು ಸಚಿವ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದರು.

ಇದನ್ನೂ ಓದಿ:ಬಿಜೆಪಿಯಿಂದ ಕಾಂಗ್ರೆಸ್​ಗೆ ಬರುವಂತದ್ದು ಭಂಡ ರಾಜಕಾರಣ: ಶಾಸಕ ಭೀಮಣ್ಣ ಆಕ್ರೋಶ

Last Updated : Aug 19, 2023, 11:20 PM IST

ABOUT THE AUTHOR

...view details