ಕರ್ನಾಟಕ

karnataka

ಯುಪಿಎಸ್​ಸಿ ಪರೀಕ್ಷೆ: ಉತ್ತರಕನ್ನಡದ ಯುವಕರ ಸಾಧನೆ ; ಮನೋಜ್​ಗೆ 213, ದೀಪಕ್​ಗೆ 311ನೇ ರ‍್ಯಾಂಕ್‌

By

Published : May 31, 2022, 12:54 PM IST

ಸಾಧನೆಗೆ ಬಡತನ, ಅಂತಸ್ತು ಪ್ರದೇಶ ಅಡ್ಡಿ ಆಗುವುದಿಲ್ಲ ಎನ್ನುವುದನ್ನು ಚಿತ್ತಾರ ಮಜರೆಯ ದೀಪಕ ರಾಮಚಂದ್ರ ಶೇಟ್ ಯುಪಿಎಸ್​ಸಿ ಪರೀಕ್ಷೆಯಲ್ಲಿ 311ನೇ ರ್ಯಾಂಕ್​ ಪಡೆಯುವ ಮೂಲಕ ನಿರೂಪಿಸಿದ್ದಾರೆ. ಇನ್ನೋರ್ವ ಮನೋಜ್​ ಆರ್​ ಹೆಗಡೆ 213ನೇ ರ್ಯಾಂಕ್​ನಲ್ಲಿ ತೇರ್ಗಡೆಯಾಗಿದ್ದಾರೆ..

Deepak ramachandra shet and Manoj R. Hegade
ದೀಪಕ ರಾಮಚಂದ್ರ ಶೇಟ್ ಹಾಗೂ ಮನೋಜ ಆರ್‌. ಹೆಗಡೆ

ಕಾರವಾರ :ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 213ನೇ ​ರ‍್ಯಾಂಕ್‌ನಲ್ಲಿ ಶಿರಸಿ ತಾಲೂಕಿನ ಮನೋಜ್‌ ಆರ್‌ ಹೆಗಡೆ ಹಾಗೂ 311ನೇ ರ‍್ಯಾಂಕ್‌​ನಲ್ಲಿ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ದೀಪಕ್ ಆರ್ ಶೇಟ್ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.

ಮನೋಜ್ ಆರ್. ಹೆಗಡೆ ಸಿದ್ದಾಪುರ ತಾಲೂಕಿನ ಹಣಗಾರ ಗ್ರಾಮದವರು. ಪಶುಸಂಗೋಪನೆ‌ ಇಲಾಖೆಯ ನಿವೃತ್ತ ಅಧಿಕಾರಿ ರಾಮನಾಥ ಹೆಗಡೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಹೆಗಡೆಯವರ ಪುತ್ರರಾಗಿದ್ದಾರೆ. 1ರಿಂದ 6ನೇ ತರಗತಿವರೆಗೆ ಉಂಚಳ್ಳಿ ಶಾಲೆಯಲ್ಲಿ ಓದಿದ ಇವರು ನಂತರ ಶಿರಸಿಯ ಲೈನ್ಸ್‌ನಲ್ಲಿ ಪ್ರೌಢ ಶಿಕ್ಷಣ, ಎಂಇಎಸ್‌ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ನಂತರ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬಿಎಸ್‌ಸಿ (ಕೃಷಿ) ಪದವಿ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಆಟಗಾರರಾಗಿದ್ದರು.

ಇನ್ನು ತಾಲೂಕಿನ ಮಂಕಿ ಗ್ರಾಮ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದ ಚಿತ್ತಾರ ಮಜರೆಯ ದೀಪಕ ರಾಮಚಂದ್ರ ಶೇಟ್ 311ನೇ ರ್ಯಾಂಕ್​ನೊಂದಿಗೆ ಈ ಸಾಧನೆ ಮಾಡಿದ್ದಾರೆ. ಬಡತನ, ಅಂತಸ್ತು, ಪ್ರದೇಶ ಸಾಧನೆಗೆ ಅಡ್ಡಿ ಆಗುವುದಿಲ್ಲ ಎಂದು ನಿರೂಪಿಸಿ ಸಾಧನೆಗಾಗಿ ಹಂಬಲಿಸುತ್ತಿರುವ ಯುವಕರಿಗೆ ಮಾದರಿಯಾಗಿದ್ದಾರೆ.

ತಂದೆ ರಾಮಚಂದ್ರ ಶೇಟ್ ಬಡ ರೈತನಾಗಿದ್ದು, ತಾಯಿ ಸೀತಾ ಶೇಟ್ ಅಂಗನವಾಡಿ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಇವರಿಗೆ 3 ಗಂಡು ಹಾಗೂ 2 ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗ ದೀಪಕ ಶೇಟ್ ಇದೀಗ ಭಾರತೀಯ ಆಡಳಿತ ಸೇವೆಗೆ ಅಣಿಯಾಗಲು ಅರ್ಹರಾಗಿದ್ದಾರೆ. ಅರಣ್ಯದ ನಡುವಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಶಿರಸಿಯ ಮೊರಾರ್ಜಿಯಲ್ಲಿ ಪ್ರೌಢ ಶಿಕ್ಷಣ, ಆಳ್ವಾಸ್ ಪಿ.ಯು ಕಾಲೇಜಿನಲ್ಲಿ ಪಿಯುಸಿ ಬೆಂಗಳೂರಿನ ಆರ್‌ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಬಿಇ ಪದವಿ ಹಾಗೂ 1 ವರ್ಷ ಉದ್ಯೋಗ ಮಾಡಿದ್ದರು. ಬಳಿಕ ಐಎಎಸ್ ಮಾಡುವ ತವಕದಿಂದ ದೆಹಲಿಗೆ ಪಯಣಿಸಿ ಅಲ್ಲಿ ಸತತ ತರಬೇತಿ ಪಡೆದಿದ್ದ ಅವರು ಕೊನೆಗೂ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ಪ್ರಶಾಂತ್​.. ರಾಜ್ಯದ ಒಂದೇ ಸಂಸ್ಥೆಯ 20 ಅಭ್ಯರ್ಥಿಗಳು ಆಯ್ಕೆ

ABOUT THE AUTHOR

...view details