ಕರ್ನಾಟಕ

karnataka

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ: ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು

By

Published : Jul 19, 2021, 10:17 PM IST

ಸಾಧಾರಣವಾಗಿ ರೂ.15,000-20,000 ಬೆಲೆಯ ಕುರಿಗಳನ್ನೇ ಇಲ್ಲಿನ ಮಧ್ಯಮ ವರ್ಗದ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಜಾನುವಾರು ಸಾಗಾಟ, ಬಲಿದಾನ ಎರಡೂ ಸ್ಥಳೀಯವಾಗಿ ಆಗಾಗ್ಗೆ ಗೊಂದಲ, ಸಮಸ್ಯೆಯನ್ನು ಉಂಟು ಮಾಡುತ್ತಿರುವುದರಿಂದ ಕುರಿಗಳಿಗೆ ಈ ಬಾರಿ ಖಂಡಿತವಾಗಿ ಬೇಡಿಕೆ ಹೆಚ್ಚಾಗಲಿದೆ..

Thousands of sheep came for Bhatkal due to Bakrid Festival
ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು

ಭಟ್ಕಳ : ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್‍ಗೆ ಒಂದೇ ದಿನವಷ್ಟೇ ಬಾಕಿ ಇದೆ. ಜಾನುವಾರಗಳ ಸಾಗಾಟಕ್ಕೆ ಪೊಲೀಸರು ನಿರಂತರವಾಗಿ ತಡೆಯೊಡ್ಡಿರುವ ಹಿನ್ನೆಲೆ ಈ ವರ್ಷ ಹೆಚ್ಚಿನ ಜನರು ಕುರಿಗಳನ್ನು ಬಲಿ ಕೊಡಲು ಮುಂದಾಗಿದ್ದಾರೆ.

ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು

ಉತ್ತರಕನ್ನಡ ಜಿಲ್ಲೆಯಲ್ಲಿ ಕುರಿಗಳ ಸಾಕಾಣಿಕೆ ಹಾಗೂ ಮಾರಾಟಕ್ಕೆ ಭಟ್ಕಳದ ಮೋಟಿಯಾ ಗೋಟ್ ಫಾರ್ಮ್​ಗೆ ದೊಡ್ಡ ಹೆಸರಿದೆ. ವರ್ಷದ 12 ತಿಂಗಳೂ ಧರ್ಮ ಭೇದವಿಲ್ಲದೆ ಕುರಿಗಳನ್ನು ಖರೀದಿಸಲು ಜನರು ಬರುತ್ತಾರೆ. ಮುಸ್ಲಿಮರ ಬಕ್ರೀದ್ ಮಾತ್ರವಲ್ಲ, ತಾಲೂಕಿನ ಸೋಡಿಗದ್ದೆ, ನೇತ್ರಾಣಿ ಪೂಜೆ, ಉತ್ಸವದ ಸಂದರ್ಭದಲ್ಲಿಯೂ ಇಲ್ಲಿ ಹೆಚ್ಚಿನ ಕುರಿಗಳು ಮಾರಾಟವಾಗುತ್ತವೆ.

ಈ ಬಾರಿ ಜುಲೈ 21ರಂದು ಬಕ್ರೀದ್ ಆಚರಿಸಲಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹೈದರಾಬಾದ್‍ಗಳಿಂದ ಸಾವಿರಾರು ಕುರಿಗಳನ್ನು ಭಟ್ಕಳಕ್ಕೆ ಕರೆ ತರಲಾಗಿದೆ. ಕುರಿ ಮಾರಾಟಕ್ಕಾಗಿಯೇ ಇಲ್ಲಿನ ಟಿಎಫ್‍ಸಿ ಹೋಟೆಲ್ ಪಕ್ಕದಲ್ಲಿ ಪ್ರತ್ಯೇಕ ಮಾರಾಟ ಕೇಂದ್ರ ತೆರೆಯಲಾಗಿದೆ.

ಜಮುನಾ ಪಾರಿ, ಶಿರೋಯಿ, ಕೋಟಾ, ಸ್ಥಳೀಯ ಟಗರು ಜಾತಿಯ ಕುರಿಗಳು ಮಾರಾಟ ಕೇಂದ್ರದಲ್ಲಿ ಸದ್ದು ಮಾಡುತ್ತಿವೆ. ವಿಶೇಷ ಎಂದರೆ ಈ ಬಾರಿ ಮೋಟಿಯಾ ಗೋಟ್ ಫಾರ್ಮ್​​​​​ ಮಾತ್ರವಲ್ಲದೆ ಭಟ್ಕಳದಲ್ಲಿ ಪಟೇಲ್ ಗೋಟ್ ಫಾರ್ಮ್​​, ಸುಲ್ತಾನ್ ಗೋಟ್ ಫಾರ್ಮ್​, ಫ್ರೆಂಡ್ಸ್ ಗೋಟ್ ಫಾರ್ಮ್​​, ಇನಾಮ್ ಗೋಟ್ ಫಾರ್ಮ್​​ ಹೆಸರಿನಲ್ಲಿ ಹೊಸದಾಗಿ ವಿಭಿನ್ನ ಕುರಿ ಮಾರಾಟ ಕೇಂದ್ರಗಳು ತಲೆ ಎತ್ತಿ ನಿಂತಿವೆ.

5000ಕ್ಕೂ ಹೆಚ್ಚು ಮಾರಾಟ ನಿರೀಕ್ಷೆ :ಈ ಬಾರಿ ಜಾನುವಾರು ಸಾಗಾಟಕ್ಕೆ ಕಟ್ಟುನಿಟ್ಟಾಗಿ ಪೊಲೀಸರು ತಡೆಯೊಡ್ಡುತ್ತಿರುವ ಹಿನ್ನೆಲೆ ಈ ಬಾರಿ 5 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟವಾಗುವ ನಿರೀಕ್ಷೆಯಿದೆ. ಭಟ್ಕಳ ಸುತ್ತಮುತ್ತಲಿನ ತಾಲೂಕುಗಳ ಜನರೂ ಕುರಿಗಳಿಗಾಗಿ ಭಟ್ಕಳಕ್ಕೆ ಲಗ್ಗೆ ಇಟ್ಟಿದ್ದಾರೆ.

ಸಾಧಾರಣವಾಗಿ ರೂ.15,000-20,000 ಬೆಲೆಯ ಕುರಿಗಳನ್ನೇ ಇಲ್ಲಿನ ಮಧ್ಯಮ ವರ್ಗದ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಜಾನುವಾರು ಸಾಗಾಟ, ಬಲಿದಾನ ಎರಡೂ ಸ್ಥಳೀಯವಾಗಿ ಆಗಾಗ್ಗೆ ಗೊಂದಲ, ಸಮಸ್ಯೆಯನ್ನು ಉಂಟು ಮಾಡುತ್ತಿರುವುದರಿಂದ ಕುರಿಗಳಿಗೆ ಈ ಬಾರಿ ಖಂಡಿತವಾಗಿ ಬೇಡಿಕೆ ಹೆಚ್ಚಾಗಲಿದೆ.

ಈ ಬಾರಿಯ ವಿಶೇಷ ಏನೆಂದರೆ ಇಲ್ಲಿಯೇ ಕುರಿಗಳ ಬಲಿದಾನಕ್ಕೂ ವ್ಯವಸ್ಥೆ ಕಲ್ಪಿಸಿದ್ದೇವೆ. ಬಲಿದಾನಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದೇ ಇದ್ದವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಬೇಡಿಕೆ ಮತ್ತಷ್ಟು ಹೆಚ್ಚಾದರೆ ಪರರಾಜ್ಯಗಳಿಂದಲೂ ಇನ್ನಷ್ಟು ಕುರಿಗಳನ್ನು ತರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಅರ್ಸಲಾನ್.

ಭಟ್ಕಳದಲ್ಲಿ ಬೀಡು ಬಿಟ್ಟ ಕುರಿಗಾಹಿಗಳು :ಬಕ್ರೀದ್‍ಗಾಗಿ ಬಂದ ಕುರಿಗಳ ಪಾಲನೆಗಾಗಿ ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ 10ಕ್ಕೂ ಹೆಚ್ಚು ಕುರಿಗಾಹಿಗಳನ್ನು ಕರೆಯಿಸಿಕೊಳ್ಳಲಾಗಿದೆ. ಇವರ ಕುರಿಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತಾರೆ.

ಬಕ್ರೀದ್ ಬಂತೆಂದರೆ ಹಬ್ಬ :ಪ್ರತಿವರ್ಷ ಬಕ್ರೀದ್‍ಗಾಗಿ ಭಟ್ಕಳಕ್ಕೆ ಬಂದು 15 -20 ದಿನ ಇಲ್ಲಿಯೇ ನೆಲೆಸುತ್ತೇವೆ. ಕೈತುಂಬಾ ಸಂಬಳವನ್ನು ನೀಡಲಾಗುತ್ತದೆ. ಬಕ್ರೀದ್ ಮುಗಿಯುತ್ತಿದ್ದಂತೆಯೇ ಊರಿಗೆ ಹೊರಟು ಬಿಡುತ್ತೇವೆ ಎನ್ನುತ್ತಾರೆ ಕೊಪ್ಪಳದ ಉಚ್ಚರೆಪ್ಪನವರು.

ABOUT THE AUTHOR

...view details