ಕರ್ನಾಟಕ

karnataka

ರಸ್ತೆ ಅಪಘಾತಗಳ ಮಾಹಿತಿ ಕ್ರೂಢೀಕರಣಕ್ಕೆ ಮುಂದಾದ ಸರ್ಕಾರ‌.. ದೇಶದಾದ್ಯಂತ ಏಕ ರೂಪದ ವ್ಯವಸ್ಥೆ

By

Published : Aug 22, 2022, 6:08 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷಕ್ಕೆ ಸಾವಿರಕ್ಕೂ ಮಿಕ್ಕಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ 150 ರಿಂದ 300 ಮಂದಿ ಸಾವನ್ನಪ್ಪುತ್ತಿದ್ದಾರೆ.

ಕಾರವಾರ
ಕಾರವಾರ

ಕಾರವಾರ: ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ದೇಶದಲ್ಲಿ ಲಕ್ಷಾಂತರ ಜನ ಸಾವಿಗೀಡಾಗುತ್ತಾರೆ. ಅದರ ದುಪ್ಪಟ್ಟು ಜನ ಗಾಯಗೊಂಡು ನೋವು ಅನುಭವಿಸುತ್ತಾರೆ. ಹೀಗಾಗಿ, ಈ ರಸ್ತೆ ಅಪಘಾತಗಳನ್ನ ಆದಷ್ಟು ಕಡಿಮೆ ಮಾಡಲು, ಇದರಿಂದ ಉಂಟಾಗುತ್ತಿರುವ ಸಾವು-ನೋವುಗಳನ್ನು ತಡೆಯಲು ದೇಶದಾದ್ಯಂತ ಏಕರೂಪದ ಮಾಹಿತಿ ಕ್ರೂಢೀಕರಣ ವ್ಯವಸ್ಥೆಯೊಂದಿಗೆ, ವ್ಯವಸ್ಥೆ ಸುಧಾರಣೆಗೆ ಯೋಜನೆಗಳನ್ನ ರೂಪಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಆ್ಯಪ್ ಒಂದನ್ನು ಸಿದ್ಧಪಡಿಸಿದೆ.

ಹೌದು, ನಮ್ಮ ದೇಶದಲ್ಲಿ ಕಾಯಿಲೆಗಳು ಬಂದು ಸಾಯುವವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯೇ ಹೆಚ್ಚಿದೆ. ಉತ್ತರ ಕನ್ನಡ ಜಿಲ್ಲೆಯೊಂದನ್ನೇ ತೆಗೆದುಕೊಂಡರೆ, ವರ್ಷದಲ್ಲಿ ಸಾವಿರಕ್ಕೂ ಮಿಕ್ಕಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ 150ರಿಂದ 300 ಮಂದಿ ಸಾವನ್ನಪ್ಪುತ್ತಾರೆ. ಇದರ ದುಪ್ಪಟ್ಟು ಮಂದಿ ಗಾಯಗೊಳ್ಳುತ್ತಿದ್ದಾರೆ.

ಇರಾದ್ ಆ್ಯಪ್

ಇನ್ನು ಈ ರಸ್ತೆ ಅಪಘಾತಗಳಿಗೆ ಕೇವಲ ವಾಹನ ಸವಾರರಷ್ಟೇ ಕಾರಣವಲ್ಲ ಎಂಬುದು ಸರ್ಕಾರ, ಇಲಾಖೆಗಳಿಗೂ ತಿಳಿದಿದೆ. ರಸ್ತೆಗಳಲ್ಲಿನ ಹೊಂಡಾಗುಂಡಿ, ಅಪಾಯಕಾರಿ ತಿರುವುಗಳು, ಬೀದಿದೀಪಗಳಿಲ್ಲದಿರುವುದು, ಸೈನ್ ಬೋರ್ಡ್ಸ್ ಗಳನ್ನು ಅಳವಡಿಸದಿರುವುದು, ಉಬ್ಬು- ತಗ್ಗುಗಳನ್ನು ನಿರ್ಮಿಸದಿರುವುದು ಹೀಗೆ ಹತ್ತಾರು ಸಮಸ್ಯೆಗಳು ಕೂಡ ರಸ್ತೆ ಅಪಘಾತಕ್ಕೆ ಕಾರಣವಾಗುತ್ತವೆ. ಹೀಗಾಗಿ, ಇರಾದ್ ಎಂಬ ಆ್ಯಪ್ ಒಂದನ್ನು ಸಿದ್ಧಪಡಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು, ದೇಶದಲ್ಲಿನ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಭಾರತದಾದ್ಯಂತ ನಿಖರವಾದ ಮತ್ತು ಏಕರೂಪದ ರಸ್ತೆ ಅಪಘಾತದ ದತ್ತಾಂಶ ಸಂಗ್ರಹಣಾ ವ್ಯವಸ್ಥೆ ರೂಪಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ ಪೆನ್ನೇಕರ್ ಅವರು ಮಾತನಾಡಿದರು

ಡೇಟಾವನ್ನು ವಿಶ್ಲೇಷಿಸಲಾಗುತ್ತದೆ: ಇಂಟಿಗ್ರೇಟೆಡ್ ರೋಡ್ ಆಕ್ಸಿಡೆಂಟ್ ಡೇಟಾಬೇಸ್- ಇರಾದ್ ಎಂಬುದು ಒಂದು ವೆಬ್ ಹಾಗೂ ಆ್ಯಪ್ ಬೇಸ್ಡ್ ತಂತ್ರಾಂಶವಾಗಿದೆ. ಈ ಆ್ಯಪ್ ಪೊಲೀಸ್, ಸಾರಿಗೆ, ಹೆದ್ದಾರಿ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಿದೆ. ಅಪಘಾತವಾದ ಸ್ಥಳ ಮತ್ತು ಆ ಅಪಘಾತಕ್ಕೆ ಕಾರಣಗಳನ್ನು ಗುರುತಿಸಲು ವಿವಿಧ ಡೇಟಾ ಅನಾಲಿಟಿಕ್ಸ್ ತಂತ್ರವನ್ನು ಬಳಸಿಕೊಂಡು ಈ ಇರಾದ್ ಆ್ಯಪ್‌ನಲ್ಲಿ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಲಾಗುತ್ತದೆ.

ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕಾರ್ಯತಂತ್ರ: ವಿಶ್ಲೇಷಣೆಯ ಔಟ್‌ಪುಟ್ ವರದಿಯನ್ನ ಆಯಾ ಇಲಾಖೆಗಳ ಮುಖ್ಯಸ್ಥರು ಹಾಗೂ ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಡ್ಯಾಶ್‌ಬೋರ್ಡ್​ಗಳಲ್ಲಿ ಪಡೆಯಲಿದ್ದು, ಈ ವರದಿಯ ಆಧಾರದಲ್ಲಿ ದೇಶದಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕಾರ್ಯತಂತ್ರವನ್ನು ರೂಪಿಸಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ ಪೆನ್ನೇಕರ್.

ತರಬೇತಿ ಮತ್ತು ಅನುಷ್ಠಾನದ ಜವಾಬ್ದಾರಿ: ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಹಾಗೂ ಐಐಟಿ ಮದ್ರಾಸ್ ಈ ಆ್ಯಪ್‌ನ ವಿನ್ಯಾಸ, ಅಭಿವೃದ್ಧಿ, ತರಬೇತಿ ಮತ್ತು ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ರಾಜ್ಯ, ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈರ್‌ಗಳನ್ನು ಗುರುತಿಸಿ, ಅವರ ಮೂಲಕ ಆ್ಯಪ್ ಬಳಕೆದಾರ ಇಲಾಖೆಗಳ ಅಧಿಕಾರಿ- ಸಿಬ್ಬಂದಿಗೆ ಆ್ಯಪ್ ಬಳಕೆಯ ಬಗ್ಗೆ ಈಗಾಗಲೇ ತರಬೇತಿಗಳನ್ನು ನೀಡಲಾಗುತ್ತಿದೆ.

ಪೊಲೀಸ್ ಸಿಬ್ಬಂದಿಗೆ ತರಬೇತಿ: ಕರ್ನಾಟಕದ ಮಟ್ಟಿಗೆ ಈಗಾಗಲೇ ಚಿಕ್ಕಮಗಳೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಆದರೆ, ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಈ ಆ್ಯಪ್ ಎಷ್ಟು ಬಳಕೆಯಾಗಲಿದೆ ಹಾಗೂ ಪ್ರಯೋಜನವಾಗಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ಓದಿ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ಕೋರಿ ಪ್ರತಿಭಟನೆ

ABOUT THE AUTHOR

...view details